ಭರವಸೆ ಈಡೇರಿಸಿ ಇಲ್ಲ ಅಧಿಕಾರ ಬಿಟ್ಟು ತೊಲಗಿ: ಬಿಎಸ್‍ವೈ

‘ಅಧಿವೇಶನದ ಒಳಗೂ- ಹೊರಗೂ ಹೋರಾಟ’

ಸುದ್ದಿ360, ದಾವಣಗೆರೆ: ಕಾಂಗ್ರೆಸ್ ಘೋಷಿಸಿದ್ದ ಐದು ಗ್ಯಾರಂಟಿ ಜಾರಿಗೆ ಒತ್ತಾಯಿಸಿ ಜುಲೈ 4ರಿಂದ ಆರಂಭಗೊಳ್ಳಲಿರುವ ಅಧಿವೇಶನದಲ್ಲಿ ನಮ್ಮ ಶಾಸಕರು ಸದನದ ಒಳಗೆ ಹೋರಾಟ ನಡೆಸಲಿದ್ದಾರೆ. ಮತ್ತು ಸದನದ ಹೊರಗೆ ಸ್ವತಃ ನಾನೇ ಧರಣಿ ಆರಂಭಿಸಲಿರುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

ನಗರದ ಅಭಿನವ ರೇಣುಕಾ ಮಂದಿರದಲ್ಲಿ ಗುರುವಾರ ನಡೆದ ಜಿಲ್ಲಾ ಬಿಜೆಪಿ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸದನದ ಒಳಗೂ, ಹೊರಗೂ ಸರಕಾರದ ಮೂಗು ಹಿಡಿದು ಉಸಿರು ಗಟ್ಟುವಂತೆ ಮಾಡಿ, ಭರವಸೆ ಈಡೇರಿಸಿ ಇಲ್ಲ ಅಧಿಕಾರ ಬಿಟ್ಟು ತೊಲಗಿ ಎಂಬ ಸಂದೇಶವನ್ನು ಸರಕಾರಕ್ಕೆ ನೀಡಬೇಕು,” ಎಂಬುದಾಗಿ ಕಾರ್ಯಕರ್ತರಿಗೆ ಹೇಳಿದರು.

ಅಧಿವೇಶನದಂದು ರಾಜ್ಯಪಾಲರ ಭಾಷಣದ ನಂತರ ವಿಧಾನಸೌಧ ಎದುರಿನ ಗಾಂಧಿ ಪ್ರತಿಮೆ ಎದುರು ಧರಣಿ ಆರಂಭಿಸುವುದಾಗಿ ಅವರು ತಿಳಿಸಿದರು.

ಚುನಾವಣೆ ವೇಳೆ ಕಾಂಗ್ರೆಸ್ ಮನೆ, ಮನೆಗೂ ಹೋಗಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸಹಿ ಮಾಡಿದ ಗ್ಯಾರಂಟಿ ಕಾರ್ಡ್ ವಿತರಿಸಿದ ಪರಿಣಾಮ, ಜನತೆ ವೋಟ್ ನೀಡಿದರು. ಹೀಗಾಗಿ ನಿರೀಕ್ಷೆ ಮಾಡದ ಸಂಖ್ಯೆಯಲ್ಲಿ ಗೆದ್ದು ಬಂದಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದು ತಿಂಗಳಾದರೂ ಷರತ್ತು ವಿಧಿಸಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸಿರುವುದು ಹೊರತು ಪಡಿಸಿದರೆ, ಯಾವುದೇ ಭರವಸೆ ಈಡೇರಿಲ್ಲ

–ಬಿ.ಎಸ್‍ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಮಾತನಾಡಿ, ಬಿ.ಎಸ್. ಯಡಿಯೂರಪ್ಪನವರು ಪಕ್ಷ ಸಂಘಟನೆ ಆರಂಭಿಸಿದ್ದಾರೆ. ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ದುರಾಡಳಿತವನ್ನು ಪ್ರತಿ ಮನೆ, ಮನೆಗೆ ತಲುಪಿಸಿ ಲೋಕಸಭೆ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ತಿರಸ್ಕರಿಸುವಂತೆ ಮಾಡಬೇಕು ಎಂದು ಸಲಹೆ ನೀಡಿದರು.

ಮಾಜಿ ಸಚಿವ ಗೋವಿಂದ ಕಾರಜೋಳ , ಸಂಸದ ಜಿ.ಎಂ. ಸಿದ್ದೇಶ್ವರ್, ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಮಾತನಾಡಿದರು. ಸಭೆಯಲ್ಲಿ ಹರಿಹರ ಶಾಸಕ ಬಿ.ಪಿ. ಹರೀಶ್, ಮಾಜಿ ಶಾಸಕರಾದ ಎಂ.ಪಿ. ರೇಣುಕಾಚಾರ್ಯ, ಮಾಜಿ ಸಚಿವ ಬಿ.ಸಿ.ನಾಗೇಶ್, ಎಸ್.ವಿ. ರಾಮಚಂದ್ರ, ಪ್ರೊ.ಎನ್. ಲಿಂಗಣ್ಣ, ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್, ಪಕ್ಷದ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಬಿ.ಎಸ್. ಜಗದೀಶ್, ಮುಖಂಡರಾದ ಸುಧಾ ಜಯರುದ್ರೇಶ್, ಯಶವಂತರಾವ್ ಜಾಧವ್, ಬಿ.ಜಿ. ಅಜಯಕುಮಾರ್, ಲೋಕಿಕೆರೆ ನಾಗರಾಜ್, ಎಚ್.ಎಸ್. ಶಿವಕುಮಾರ್ ಇತರರು ಇದ್ದರು.

admin

admin

Leave a Reply

Your email address will not be published. Required fields are marked *

error: Content is protected !!