ಭಾರತೀಯ ಮೌಲ್ಯ ಎತ್ತಿ ಹಿಡಿಯುವ ಶಿಕ್ಷಣ ಅವಶ್ಯ: ಮಂಜುನಾಥ್ ಏಕಬೋಟೆ

ಸುದ್ದಿ360 ದಾವಣಗೆರೆ, ಡಿ.30: ಭಾರತೀಯ ಮೌಲ್ಯಗಳ ಪರಿಕಲ್ಪನೆಯಲ್ಲಿ ಶಾಲಾ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಈಶ್ವರಮ್ಮ ಶಾಲೆಯೂ ಒಂದು ಆದರ್ಶ. ಶಾಲೆಗೆ ಕೇವಲ ಅಂಕ ಗಳಿಕೆಗಾಗಿ ಶಿಕ್ಷಣ ನೀಡದೆ ಭಾರತೀಯ ಮೌಲ್ಯಗಳನ್ನು ಎತ್ತಿ ಹಿಡಿಯುವಂತಹ ಶಿಕ್ಷಣ ಗುರುತಿಸಿ ಮಕ್ಕಳಿಗೆ ನೀಡುತ್ತಿರುವುದು ಅತ್ಯುತ್ತಮ ಕಾರ್ಯವಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್ ಏಕಬೋಟೆ ಹೇಳಿದರು.

ನಗರದ ಈಶ್ವರಮ್ಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ಶಾಲೆಗಳು ಸಮಾಜದ ಪ್ರತಿಬಿಂಬವಾಗಿ ಕೆಲಸ ಮಾಡಿದಾಗ ಮಾತ್ರ, ನಾವು ಉತ್ತಮ ಸಮಾಜವನ್ನು ನೋಡಲು ಸಾಧ್ಯವಾಗಲಿದೆ. ಅಂತಹ ನಿಟ್ಟಿನಲ್ಲಿ ಈಶ್ವರಮ್ಮ ಶಾಲೆಯ ಕಾರ್ಯ ಶ್ಲಾಘನೀಯವಾದದ್ದು. ಭವಿಷ್ಯಃ ಆ ನಿಟ್ಟಿನಲ್ಲಿ ಯೋಚಿಸಿರುವಂತಹ ಶಾಲೆಯ ಆದರ್ಶ ನಿಜಕ್ಕೂ ಗೌರವಿಸುವಂತಹದ್ದಾಗಿದೆ ಎಂದರು.

ಇಲ್ಲಿ ಕಲಿಯುವ ಮಕ್ಕಳು ಉತ್ತಮ ಅಂಕ ಗಳಿಕೆಯ ಜೊತೆಗೆ ಸಾಂಸ್ಕೃತಿಕವಾಗಿ ಕ್ರೀಡೆ ಮತ್ತು ಯೋಗದಲ್ಲಿ ಸಾಧನೆ ಮಾಡಿರುವುದನ್ನು ಗಮನಿಸಿದರೆ, ಇಲ್ಲಿ ದೊರೆಯುವ ಶಿಕ್ಷಣ ಮಗುವಿನ ವ್ಯಕ್ತಿತ್ವ ರೂಪಿಸುವ ಶಿಕ್ಷಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಈಶ್ವರಮ್ಮ ಶಾಲಾಡಳಿತ ಮಂಡಳಿ ಕಾರ್ಯದರ್ಶಿ ಉಷಾ ರಂಗನಾಥ್, ಇತ್ತೀಚಿಗೆ ಮಕ್ಕಳು ಮೊಬೈಲ್ ಹಾಗೂ ಟಿವಿ ವೀಕ್ಷಣೆಯಲ್ಲಿ ಹೆಚ್ಚಿನ ಸಮಯ ಕಳೆಯುವುದರಿಂದ ಉತ್ತಮ ಶಿಕ್ಷಣ ಪಡೆಯಲು ಆಗುವುದಿಲ್ಲ. ಹೀಗಾಗಿ ಮಕ್ಕಳ ಪೋಷಕರು ಮಕ್ಕಳ ಕೈಗೆ ಮೊಬೈಲ್ ಕೊಡದಂತೆ, ಟಿವಿ ವೀಕ್ಷಣೆ ಮಾಡದಂತೆ ಎಚ್ಚರ ವಹಿಸಬೇಕೆಂದು ಅವರು, ಶಾಲೆಯ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸತ್ಯಸಾಯಿ ಸೇವಾ ಸಂಸ್ಥೆ ಜಿಲ್ಲಾಧ್ಯಕ್ಷ ಪ್ರಶಾಂತ ಕುರ್ಡೇಕರ್, ಈಶ್ವರಮ್ಮ ಶಾಲಾಡಳಿತ ಮಂಡಳಿ ಅಧ್ಯಕ್ಷೆ ಕೆ.ಆರ್.ಸುಜಾತಾಕೃಷ್ಣ, ಖಜಾಂಚಿ ಎ.ಪಿ.ಸುಜಾತಾ, ಸದಸ್ಯ ಎಂ.ವೆಂಕಟಸುಬ್ಬಾರಾವ್, ಪ್ರಾಂಶುಪಾಲರಾದ ಕೆ.ಎಸ್.ಪ್ರಭುಕುಮಾರ್, ಉಪಪ್ರಾಂಶುಪಾಲರಾದ ಜಿ.ಎಸ್.ಶಶಿರೇಖಾ ಇದ್ದರು.

ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು. ನಂತರ ಮಲ್ಟಿ ಮಿಡಿಯಾ ಸಮಗ್ರ ವರದಿ ಮಂಡನೆ ಮಾಡಲಾಯಿತು. ಕಾರ್ಯಕ್ರಮ ಬಳಿಕ ಮಕ್ಕಳು ಪ್ರಸ್ತುತಪಡಿಸಿದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆಗೊಂಡವು.

Leave a Comment

error: Content is protected !!