ಸುದ್ದಿ360 ದಾವಣಗೆರೆ, ಜೂ.20: ಕಳೆದ ಎರಡು ತಿಂಗಳಿAದ ನಮ್ಮದೇ ಜಮೀನಿನಲ್ಲಿ ನಾವು ಉಳುಮೆ ಮಾಡಲು ಆಗುತ್ತಿಲ್ಲ. ವಿನಾ ಕಾರಣ ಜಯಂತಿನಗರದ ಜನ ಜಮೀನಿಗೆ ಬಂದು ದೌರ್ಜನ್ಯ ನಡೆಸುತ್ತಿದ್ದಾರೆ. ಸುಮಾರು 60 ವರ್ಷಗಳಿಂದ ಉಳುಮೆ ಮಾಡುತ್ತಾ ಬಂದಿರುವ ಹಕ್ಕಿಪಿಕ್ಕಿ ಸಮುದಾಯದ ರೈತರ ಜಮೀನನ್ನು ಕಬಳಿಸಲು ಕೆಲ ಪ್ರಭಾವಿ ವ್ಯಕ್ತಿಗಳು ಹುನ್ನಾರ ನಡೆಸಿದ್ದಾರೆ ಎಂದು ಕರ್ನಾಟಕ ಹಕ್ಕಿಪಿಕ್ಕಿ ಬುಡಕಟ್ಟು ಯುವ ಸಂಘಟನೆ ಅಧ್ಯಕ್ಷ ಆರ್. ಪುನೀತ್ಕುಮಾರ್ ಆರೋಪಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚನ್ನಗಿರಿ ತಾಲೂಕು ನಲ್ಲೂರು ಬಳಿಯ ಅಸ್ತಾಪನಹಳ್ಳಿಯಲ್ಲಿ ಇಂತಹ ದೌರ್ಜನ್ಯ ನಡೆಯುತ್ತಿದೆ. 1987-88ರಲ್ಲಿ ಆಗಿನ ಸರಕಾರ ಗ್ರಾಮದ ಹಕ್ಕಿಪಿಕ್ಕಿ ಸಮುದಾಯದ 125 ಕುಟುಂಬಗಳಿಗೆ ಒಟ್ಟು 250 ಎಕರೆ ಭೂಮಿ ಮಂಜೂರು ಮಾಡಿದ್ದು, ಅಂದಿನಿAದ ಎಲ್ಲಾ ಕುಟುಂಬಗಳು ಅಲ್ಲಿ ಉಳುಮೆ ಮಾಡಿ, ಬೆಳ ಬೆಳಯುತ್ತಾ ಜೀವನ ನಿರ್ವಹಿಸುತ್ತಿವೆ. ಆದರೆ, ಪಕ್ಕದ ಜಯಂತಿನಗರ ಗ್ರಾಮದ ಕೆಲ ಪ್ರಭಾವಿಗಳು, ಸುಮಾರು 100 ಎಕರೆ ಭೂಮಿ ಕಬಳಿಸಲು ಮುಂದಾಗಿದ್ದಾರೆ ಎಂದು ದೂರಿದರು.
ಕೆಲ ದಿನಗಳ ಹಿಂದ ಬೋರ್ವೆಲ್ ಕೊರೆಸಲು ಹೋದ ಹಕ್ಕಿಪಿಕ್ಕಿ ಸಮುದಾಯದ ರೈತರ ಮೇಲೆ ಹಾಗೂ ಲಾರಿ ಮೇಲೆ ಕಲ್ಲು ತೂರಾಟ ಮಾಡಿ ಬೋರ್ವೆಲ್ ಲಾರಿ ವಾಪಸ್ ಕಳಿಸಲಾಗಿದೆ. ಈ ಕುರಿತು ತಹಸೀಲ್ದಾರರಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ನಮ್ಮನ್ನು ಕಾಡಿನಲ್ಲಿರಲು ಬಿಟ್ಟುಬಿಡಿ
ಕಾಡಿನಲ್ಲಿ ಶಿಕಾರಿ ಮಾಡಿಕೊಂಡು ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದ ಹಕ್ಕಿಪಿಕ್ಕಿ ಕುಟುಂಬಗಳನ್ನು ಸರಕಾರ ನಾಡಿಗೆ ಕರೆತಂದಿದೆ. ಆದರೆ ಇಲ್ಲಿ ನಮಗೆ ಸೂಕ್ತ ಸ್ಥಾನಮಾನ, ಗೌರವ ಸಿಗುತ್ತಿಲ್ಲ. ಮೇಲಿಂದ ಮೇಲೆ ನಮ್ಮ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ರಾಜಕೀಯ ಪ್ರಭಾವಕ್ಕೆ ಮಣಿದ ಅಧಿಕಾರಿಗಳು ಸಮುದಾಯಕ್ಕೆ ನ್ಯಾಯ ಒದಗಿಸುವಲ್ಲಿ ವಿಫಲರಾಗಿದ್ದಾರೆ. ಕಾರಣ, ಅರಣ್ಯ ಕಾಯ್ದೆ ವಾಪಸ್ ಪಡೆದು ನಾವು ಮರಳಿ ಕಾಡಿಗೆ ಹೋಗಿ ನೆಲೆಸಲು ಸರಕಾರ ಅವಕಾಶ ಮಾಡಿಕೊಡಬೇಕು ಎಂದು ಪುನೀತ್ ಮನವಿ ಮಾಡಿದರು.
ನಮ್ಮ ಮೇಲಿನ ಈ ದೌರ್ಜನ್ಯವನ್ನು ಶಾಸಕರ ಬಳಿ ಹೇಳಿಕೊಂಡರೆ ಡಿಸೆಂಬರ್ ನಂತರ ಬನ್ನಿ ಎನ್ನುತ್ತಾರೆ. ನ್ಯಾಯಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ನೀಡಲಾಗುವುದು. ಆಗಲೂ ದೌರ್ಜನ್ಯ ಮುಂದುವರಿದರೆ ಹೋರಾಟ ನಡೆಸಲಾಗುವುದು ಎಂದು ಪುನೀತ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆ ರಾಜ್ಯ ಸಂಚಾಲಕರಾದ ನಂದಕುಮಾರ್, ಸಾವಂತ್, ಸದಸ್ಯರಾದ ಪವನ್, ಭವಾನಿ ಇದ್ದರು.