ಸುದ್ದಿ360, ದಾವಣಗೆರೆ ಆ. 01: ತಳವರ್ಗದ ಸಮುದಾಯಗಳಿಗೆ ಶ್ರೀಮಂತಿಕೆ ಬರುವಂತೆ ನೋಡಿಕೊಳ್ಳುವ ಮೂಲಕ ಸಮತೋಲನದ ಸಮೃದ್ಧಿಯ ರಾಜ್ಯದ ನಿರ್ಮಾಣ ಸಾಧ್ಯ. ತಳಸಮುದಾಯದ ಅಭಿವೃದ್ಧಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಸರ್ಕಾರ ಹಮ್ಮಿಕೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ರಥ ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಗುರುಪೀಠವು ಸಮಾಜವನ್ನು ಒಗ್ಗೂಡಿಸಿ ಏಳಿಗೆಯ ಪಥದಲ್ಲಿ ಮುನ್ನಡೆಸುತ್ತಿದೆ. ಎಲ್ಲ ಜನಾಂಗಗಳ ಅಭಿವೃದ್ಧಿಯಾದಾಗ ಮಾತ್ರ ನಾಡು ಅಭಿವೃದ್ಧಿಯಾಗುತ್ತದೆ. ಕೆಳಸ್ತರದ ಹಾಗೂ ಶಿಕ್ಷಣ, ಆರೋಗ್ಯ ಹಾಗೂ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ ಹೆಚ್ಚಿನ ಪ್ರಾತಿನಿಧ್ಯ ಕೊಡಬೇಕಾಗಿದೆ ಎಂದರು.
ಭೋವಿ ಕುಲಕಸುಬಿಗೆ ವಿಶೇಷ ಅವಕಾಶ ಹಾಗೂ ರಿಯಾಯ್ತಿ
ಕಾನೂನಿನಡಿಯಲ್ಲಿ ಸೂಕ್ತ ತಿದ್ದುಪಡಿ ತರುವ ಮೂಲಕ ಭೋವಿ ಸಮುದಾಯದ ಪಾರಂಪರಿಕ ಕುಲಕಸುಬನ್ನು ನಡೆಸಲು ವಿಶೇಷ ಅವಕಾಶ ಹಾಗೂ ರಿಯಾಯ್ತಿಗಳನ್ನು ತರುವ ವ್ಯವಸ್ಥೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಭೋವಿ ಸಮಾಜಕ್ಕೆ ತನ್ನ ಕುಲಕಸುಬನ್ನು ಮಾಡಲು ಹಲವು ಕಾನೂನಾತ್ಮಕ ತೊಂದರೆಗಳಿವೆ. ಪರಿಹಾರಗಳು ತಾತ್ಕಾಲಿಕ ಹಾಗೂ ಸ್ಥಾನಿಕವಾಗಿವೆ. ಕಾನೂನಿನ ನೆಪದಲ್ಲಿ ಅಧಿಕಾರಿಗಳ ಕಿರುಕುಳ ನನ್ನ ಗಮನಕ್ಕೆ ಬಂದಿದೆ. ಇದಕ್ಕೆ ಶಾಶ್ವತ ಪರಿಹಾರ ನೀಡಲು ಸರ್ಕಾರ ಚಿಂತನೆ ನಡೆಸಿದೆ. ಕಾನೂನನ್ನು ರಚಿಸುವಾಗ ಯಾವುದೇ ಸಮುದಾಯಗಳಿಗೆ ತೊಂದರೆಯಾಗದಂತೆ ಕಾನೂನನ್ನು ರೂಪಿಸಬೇಕು. ಬರುವ ತಿಂಗಳಲ್ಲಿ ವಿಧಾನಸಭೆ ಅಧಿವೇಶನದಲ್ಲಿ ಈ ಕಾನೂನಿಗೆ ತಿದ್ದುಪಡಿ ತಂದು ಭೋವಿ ಜನಾಂಗದ ಕುಲಕಸುಬಿಗೆ ವಿಶೇಷ ಅವಕಾಶಗಳನ್ನು ರಿಯಾಯ್ತಿಗಳನ್ನು ನೀಡಲಾಗುವುದು ಎಂದರು.
ಕುಲಕಸುಬುಗಳಿಂದಲೇ ಸಮಾಜ ನಿರ್ಮಾಣ
ಕುಲಕಸುಬುಗಳಿಂದಲೇ ಸಮಾಜ ನಿರ್ಮಾಣ ಹಾಗೂ ದೇಶ ಕಟ್ಟುವ ಕೆಲಸವಾಗುತ್ತಿದೆ. ಬಂಡೆಯನ್ನು ಒಡೆಯದೇ ಮಂದಿರ, ಮನೆ, ಮೂರ್ತಿಗಳು ಯಾವುದನ್ನು ನಿರ್ಮಿಸಲು ಸಾಧ್ಯವಿಲ್ಲ. ಕಲ್ಲನ್ನು ಒಡೆಯದೇ ರಸ್ತೆ, ಡ್ಯಾಂಗಳು ಯಾವುದೇ ಅಭಿವೃದ್ಧಿ ಆಗುವುದಿಲ್ಲ. ಈ ಸಮುದಾಯದ ಜೊತೆಗೆ ನನಗೆ ನಿರಂತರ ಸಂಪರ್ಕವಿದ್ದು, ಅವರ ಕಷ್ಟಕಾರ್ಪಣ್ಯಗಳ ಅರಿವಿದೆ. ಭೋವಿ ಸಮಾಜದ ಯುವಕರು ಶಿಕ್ಷಿತರಾಗಿದ್ದಾರೆ. ಎಲ್ಲ ರಂಗಗಳಲ್ಲಿ ಸಮುದಾಯದವರು ಮುಂದೆ ಬರಬೇಕು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸೂಕ್ತ ಅವಕಾಶಗಳನ್ನು ನೀಡಿದರೆ ಅದ್ಭುತವಾದ ಸಾಧನೆಗಳನ್ನು ಮಾಡುತ್ತಾರೆ ಎಂದರು.
ಕ್ರಿಯಾಯೋಜನೆ ರೂಪಿಸಲು ಸೂಚನೆ:
ಎಸ್ ಸಿ ಎಸ್ ಟಿ ಸಮುದಾಯಗಳಿಗೆ ಅನುಕೂಲ ಕಲ್ಪಿಸಲು ಹೆಚ್ಚಿನ ಅನುದಾನವನ್ನು ನೀಡಲಾಗಿದೆ. ಭೋವಿ ಸಮುದಾಯಕ್ಕೆ 107 ಕೋಟಿ ರೂ. ಅನುದಾನ ಒದಗಿಸಲಾಗಿದ್ದು, ಕ್ರಿಯಾಯೋಜನೆ ರೂಪಿಸಲು ಸೂಚಿಸಲಾಗಿದೆ. ಭೋವಿ ಸಮಾಜದ ಅಧ್ಯಕ್ಷರನ್ನು ಶೀಘ್ರದಲ್ಲಿ ನೇಮಿಸಲಾಗುವುದು. ತಳಹಂತದ ಶ್ರಮಜೀವಿಗಳಿಂದ ಆರ್ಥಿಕತೆ ಬೆಳವಣಿಗೆಯಾಗುತ್ತಿದೆ ಎಂದರು.
ಸಿದ್ದರಾಮೇಶ್ವರರ ಜಯಂತಿ ನಿತ್ಯೋತ್ಸವ :
ಸಿದ್ಧರಾಮೇಶ್ವರರು ಆದರ್ಶಪ್ರಾಯವಾಗಿದ್ದಾರೆ. ತಮ್ಮ ಕಾಯಕದ ಅರಿವಿನಿಂದ ಜಗತ್ತಿನ್ಲಲಿ ಜಾಗೃತಿ ಮೂಡಿಸಿದ ಮಹಾಶರಣರು. ದೂರದೃಷ್ಟಿಯಿಂದ ಕೆರೆಕಟ್ಟೆಗಳನ್ನು ನಿರ್ಮಿಸಿ ಸಮುದಾಯವನ್ನು ಉಳಿಸಿರುವ ಮಹಾಚೇತನ. ಶ್ರಮ ಮತ್ತು ಜ್ಞಾನದ ಸಂಗಮವಾಗಿರುವ ಸಿದ್ಧರಾಮೇಶ್ವರರು ಅನುಭವ ಮಂಟಪದಲ್ಲಿಯೂ ತಮ್ಮ ಕಾಯಕವನ್ನು ಮಾಡಿದ್ದಾರೆ. ಅವರ ವಚನಗಳಲ್ಲಿ ಸತ್ಯ ನಿಷ್ಟುರತೆ ಇದೆ. ಸಿದ್ದರಾಮೇಶ್ವರರ ಜಯಂತಿ ನಿತ್ಯೋತ್ಸವ ಆಗುವ ಮೂಲಕ ಸಮುದಾಯ ಶ್ರಮ, ನಿಷ್ಠೆ, ಜ್ಞಾನಕ್ಕೆ ಗೌರವ ನೀಡಿದಂತಾಗುತ್ತದೆ. ಭೋವಿ ಸಮುದಾಯದ ಸಮಸ್ಯೆಗಳನ್ನು ಬಗೆಹರಿಸಿ , ಹೆಚ್ಚಿನ ಅನುದಾನವನ್ನೂ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರು, ನಿರಂಜನಾನಂದ ಪುರಿ ಶ್ರೀ, ವಚನಾನಂದ ಶ್ರೀ, ಅಭಿನವ ಹಾಲಸ್ವಾಮಿಗಳು, ಬಸವಪ್ರಭು ಶ್ರೀ, ಶಾಂತವೀರ ಶ್ರೀ, ಪುರುಷೋತ್ತಮಾನಂದ ಪುರಿ ಶ್ರೀ ಸೇರಿದಂತೆ ವಿವಿಧ ಮಠಾಧೀಶರು ಸಾನಿಧ್ಯ ವಹಿಸಿದ್ದರು. ಸಂಸದ ಜಿ.ಎಂ.ಸಿದ್ದೇಶ್ವರ್, ಸಚಿವರುಗಳಾದ ಡಾ.ಸುಧಾಕರ್, ಶಿವರಾಜ್ ತಂಗಡಗಿ, ಭೈರತಿ ಬಸವರಾಜ್, ಶಾಸಕರುಗಳಾದ ಎಸ್ ಎ ರವೀಂದ್ರನಾಥ್, ರೇಣುಕಾಚಾರ್ಯ, ಎಸ್ ವಿ ರಾಮಚಂದ್ರ, ಗೂಳಿಹಟ್ಟಿ ಶೇಖರ್, ಪ್ರೊ.ಲಿಂಗಣ್ಣ, ಎಂ.ಚಂದ್ರಪ್ಪ, ಸಾಲುಮರದ ತಿಮ್ಮಕ್ಕ, ಭೋವಿ ಸಮಾಜದ ಮುಖಂಡರಾದ ಡಿ.ಬಸವರಾಜ್, ರವಿ ಮತ್ತಿತರರಿದ್ದರು.