ರಾಜ್ಯದ ಯುಪಿಎಸ್ಸಿ ಟಾಪರ್ ನಗರದ ವಿ. ಅವಿನಾಶ್ ಸಲಹೆ
ಸುದ್ದಿ360 ದಾವಣಗೆರೆ, ಜೂನ್ 28: ಸ್ಪರ್ಧಾತ್ಮಕ ಪರೀಕ್ಷೆ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿದ್ದು, ಈ ಸಾಧನೆಗಾಗಿ ವಿದ್ಯಾರ್ಥಿಗಳು ನಿರಂತರ ಅಭ್ಯಾಸ ಮಾಡಬೇಕು ಎಂದು ರಾಜ್ಯದ ಯುಪಿಎಸ್ಸಿ ಟಾಪರ್ ನಗರದ ವಿ. ಅವಿನಾಶ್ ಹೇಳಿದರು.
ನಗರದ ಅಕ್ಕ ಮಹಾದೇವಿ ರಸ್ತೆಯ ಎವಿ ಕಮಲಮ್ಮ ಮಹಿಳಾ ಕಾಲೇಜಿನಲ್ಲಿ ಮಂಗಳವಾರ ಐಕ್ಯುಎಸಿ ವಿಭಾಗ ಹಮ್ಮಿಕೊಂಡಿದ್ದ ‘ಪ್ರೇರಣಾ ನುಡಿ’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಕುರಿತು ಅವರು ಮಾತನಾಡಿದರು. ಶಾಲೆ ಹಂತದಿಂದಲೇ ಯುಪಿಎಸ್ಸಿ ಕುರಿತು ಮಾಹಿತಿ ನೀಡಬೇಕು. ಮತ್ತು ಆಸಕ್ತ ಮಕ್ಕಳಿಗೆ ಅಗತ್ಯ ತರಬೇತಿ ನೀಡುವ ಮತ್ತು ಪರೀಕ್ಷೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದರು.
ಯುಪಿಎಸ್ಸಿ ತೇರ್ಗಡೆ ಹೊಂದುವವರಲ್ಲಿ ಉತ್ತರ ಭಾರತ ರಾಜ್ಯಗಳ ವಿದ್ಯಾರ್ಥಿಗಳು ಮುಂಚೂಣಿಯಲ್ಲಿದ್ದಾರೆ. ಕಾರಣ ಅವರಿಗೆ ಶಾಲೆ ಹಂತದಲ್ಲೇ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಆದರೆ, ರಾಜ್ಯದ ಯುವ ಜನತೆಗೆ ಸ್ಪರ್ಧಾತ್ಮಕ ಪರೀಕ್ಷೆ ಕುರಿತು ಅರಿವು ಕಡಿಮೆ. ಈ ನಿಟ್ಟಿನಲ್ಲಿ ರಾಜ್ಯದ ಶಾಲೆ, ಕಾಲೇಜುಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದರು.
ಬಾಪೂಜಿ ವಿದ್ಯಾಸಂಸ್ಥೆ ಶೈಣಿಕ ನಿರ್ದೇಶಕ ಡಾ.ಎಂ.ಜಿ. ಈಶ್ವರಪ್ಪ ಮಾತನಾಡಿದರು. ಪ್ರಾಂಶುಪಾಲ ಡಾ.ಬಿ.ಪಿ. ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಯೋಜಕ ಪ್ರೊ.ಆರ್.ಆರ್. ಶಿವಕುಮಾರ್, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಜಿ.ಜೆ. ನಾಗವೇಣಿ ಇತರರು ಇದ್ದರು.