ಸುದ್ದಿ360 ದಾವಣಗೆರೆ, ಆ.02: ದೇವರು, ಹಬ್ಬ ಹಾಗೂ ಮೂಡನಂಬಿಕೆಗಳ ಹೆಸರಿನಲ್ಲಿ ಪೌಷ್ಠಿಕವಾದ ಹಾಲನ್ನು ವ್ಯರ್ಥ ಮಾಡದೆ, ಅವಶ್ಯಕತೆ ಇರುವ ಮಕ್ಕಳ, ರೋಗಿಗಳ, ಹಿರಿಯರ ಸೇವನೆಗೆ ನೀಡುವ ಮೂಲಕ ಮನುಷ್ಯರಲ್ಲಿ ದೇವರನ್ನು ಕಾಣಬೇಕು. ಮನುಷ್ಯರೇ ನಿಜವಾದ ದೇವರು ಎಂದು ವಿರಕ್ತಮಠದ ಬಸವಪ್ರಭುಶ್ರೀ ಹೇಳಿದರು.
ಶ್ರೀಗಳು ನಗರದ ದೊಡ್ಡಪೇಟೆಯಲ್ಲಿರುವ ವಿರಕ್ತಮಠದಲ್ಲಿ ಮಕ್ಕಳಿಗೆ ಹಾಲುಣಿಸುವುದರ ಮೂಲಕ ಹಾಲು ಕುಡಿಸುವ ಹಬ್ಬ, ಬಸವ ಪಂಚಮಿ ಆಚರಣೆಗೆ ಚಾಲನೆ ನೀಡಿ, ಆಶೀರ್ವಚನ ನೀಡಿದರು.
ಪಂಚಮಿ ಹಬ್ಬ ಎಂದರೆ ಎಲ್ಲರೂ ನನ್ನ ಪಾಲು ಅಜ್ಜನ ಪಾಲು ಅಜ್ಜಿ ಪಾಲು ಅವರ ಪಾಲು, ಇವರು ಪಾಲು ಎಂದು ನಾಗಪ್ಪಗೆ ಹಾಲನ್ನ ಎರೆದು ಹಾಲನ್ನೆಲ್ಲಾ ಮಣ್ಣುಪಾಲು ಮಾಡುತ್ತಾರೆ. ಬದಲಿಗೆ ಪೌಷ್ಠಿಕ ಆಹಾರವಾದ ಹಾಲನ್ನು ಮೂಢನಂಬಿಕೆಯ ಹೆಸರಿನಲ್ಲಿ ವ್ಯರ್ಥ ಮಾಡದೆ ಹಬ್ಬಗಳನ್ನು ವೈಚಾರಿಕತೆಯ ನೆಲೆಗಟ್ಟಿನಲ್ಲಿ ಆಚರಿಸುವಂತೆ ಕರೆ ನೀಡಿದರು.
12ನೇ ಶತಮಾನದಲ್ಲಿಯೇ ಮೌಢ್ಯದ ವಿರುದ್ಧ ಬಹುದೊಡ್ಡ ಕ್ರಾಂತಿಯನ್ನು ಮಾಡಿದವರು ಬಸವಣ್ಣನವರು. ಸಮಾಜದಲ್ಲಿನ ಮೂಢ ನಂಬಿಕೆಗಳನ್ನು ತೊಡೆದುಹಾಕುವಲ್ಲಿ ಹೋರಾಟ ಮಾಡಿದವರು. ಯಾರು ಮೂಢನಂಬಿಕೆಳಿಂದ ಮಾನಸಿಕವಾಗಿ ಬಂಧನಕ್ಕೊಳ್ಳಗಾಗಿ ಜೀವನದ ಉದ್ಧಾರವನ್ನು ಕಳದುಕೊಳ್ಳುತ್ತಾರೆ. ಭಾರತ ವಿಶ್ವದ ಮೂಢನಂಬಿಕೆಗಳ ರಾಜಧಾನಿಯಾಗಿರುವುದು ನೋವಿನ ಸಂಗತಿ. ದೇವರು ನಮಗೆ ನೀಡಿರುವ ಎಲ್ಲಾ ಸಮಯವೂ ಒಳ್ಳೆಯದೇ ಆಗಿದ್ದು, ಕೆಟ್ಟ ಸಮಯ, ಕೆಟ್ಟ ದಿನ ಎಂದು ಕೆಲಸಗಳನ್ನು ಮುಂದೂಡದೆ, ಸಮಯವನ್ನು ವ್ಯರ್ಥ ಮಾಡದೆ ಪ್ರಗತಿಯತ್ತ ಸಾಗೋಣ ಎಂದು ಕರೆ ನೀಡಿದರು.
ಮೂಢನಂಬಿಕೆಗಳನ್ನು ಬಿಟ್ಟರೆ ಜಗತ್ತು ಸ್ವರ್ಗವಾಗುತ್ತದೆ. ಬೆಳಿಗ್ಗೆ ಎಡಗಡೆ ಎದ್ದರೆ ಅಪಶಕುನ , ಬಲಕ್ಕೆ ಎದ್ದರೆ ಶುಭಶಕುನ ಎಂದು ನೋಡುತ್ತಾರೆ ಒಟ್ಟಿನಲ್ಲಿ ಯಾವ ಕಡೆ ಮುಖಮಾಡಿ ಎದ್ದರೂ ಜೀವಂತ ಎದ್ದಿದ್ದೀವಿ ಎಂದು ಸಂತೋಷ ಪಡಬೇಕು ಎಂದರು.
ಹಾಲು ಸೇವನತೆಯಿಂದ ಮಾನಸಿಕ ಹಾಗೂ ದೈಹಿಕ ಬೆಳವಣಿಗೆ
ಪ್ರತಿನಿತ್ಯ ಹಾಲನ್ನು ಸೇವಿಸುವುದರ ಮೂಲಕ ಮಕ್ಕಳಲ್ಲಿ ಮಾನಸಿಕ ಹಾಗೂ ದೈಹಿಕವಾಗಿ ಉತ್ತಮ ಬೆಳವಣಿಗೆಯನ್ನು ಕಾಣಬಹುದು. ಹಿರಿಯರಲ್ಲಿ ಕಾಣುವ ಮಂಡಿನೋವು ನಿವಾರಣೆ, ಮಲಗುವ ಮುನ್ನ ಬೆಚ್ಚಗಿನ ಹಾಲು ಸೇವಿಸುವುದರಿಂದ ನಿದ್ರಾಹೀನತೆ ದೂರವಾಗುವುದು ಎಂದರು.
ಬಸವಣ್ಣನವರು ಲಿಂಗೈಕ್ಯರಾದ ಈ ದಿನ ಬಸವಪಂಚಮಿಯಾಗಿಯೂ ಆಚರಣೆಯಲ್ಲಿದ್ದು, ಮೂಢನಂಬಿಕೆಳನ್ನು ತೊಡೆದು ಹಾಕಲು ಶ್ರಮಿಸಿದ ಮಹಾನ್ ಮಾನವತಾವಾದಿ ಬಸವಣ್ಣನವರ ಸ್ಮರಣೋತ್ಸವವನ್ನು ಸಹ ಮಕ್ಕಳಿಗೆ ಹಾಲು ನೀಡುವ ಮೂಲಕ ಆಚರಣೆ ಮಾಡಲಾಗುತ್ತಿದೆ. ವಿಶೇಷವಾಗಿ ಮಕ್ಕಳಿಗೇ ಹಾಲು ಕುಡಿಸುತ್ತಿರುವ ಉದ್ದೇಶ, ಮುಂದಿನ ದಿನಗಳಲ್ಲಿ ಅವರು ಹಬ್ಬಗಳನ್ನು ಮೂಢನಂಬಿಕೆ, ಸಂಪ್ರದಾಯಗಳ ನೆಲೆಗಟ್ಟಿನಲ್ಲಿ ಆಚರಿಸದೆ, ವೈಚಾರಿಕವಾಗಿ, ಮಾನವೀಯ ಸ್ಪರ್ಶ ನೀಡುವ ಮೂಲಕ ಪ್ರಗತಿಪರವಾಗಿ ಹಬ್ಬಗಳನ್ನು ಆಚರಿಸಲಿ ಎಂಬುದಾಗಿದೆ. ಇಂತಹ ಒಂದು ಶ್ರೇಷ್ಠ ಪರಂಪರೆಯನ್ನು ಮುರುಘಾ ಶರಣರು ನಮಗೆ ಹಾಕಿಕೊಟ್ಟಿದ್ದು, ಇಂದು ಸುಮಾರು 600 ಬಸವ ಕೇಂದ್ರಗಳಲ್ಲಿ ಆಚರಿಸಲಾಗುತ್ತಿದೆ ಎಂದು ಶ್ರೀಗಳು ತಿಳಿಸಿದರು.
ಮಾಜಿ ದೂಢಾ ಅಧ್ಯಕ್ಷ ಹಾಗೂ ಮರಾಠ ಸಮಾಜದ ಗೌರವ ಅಧ್ಯಕ್ಷರಾದ ಯಶವಂತರಾವ್ ಜಾದವ್ ಅವರು ಮಾತನಾಡಿ, ಕಾಯಕವೇ ಕೈಲಾಸ ಎಂಬ ನಾಣ್ಣುಡಿಯನ್ನು ಚಾಚು ತಪ್ಪದೇ ನಡೆಸಿಕೊಂಡು ಬರುತ್ತಿರುವ ಮಠ ಮುರುಘಾ ಮಠವಾಗಿದ್ದು, ಮೂಢನಂಬಿಕೆ ವಿರುದ್ಧ ದಿಟ್ಟ ಹೆಜ್ಜೆಯನ್ನಿಟ್ಟು ಮುರುಘಾ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯುತ್ತಾ ಇಂದು ಮಕ್ಕಳಿಗೆ ಹಾಲು ಉಣಿಸುವ ಕಾರ್ಯಕ್ರಮ ಬಹಳ ಮಹತ್ವಪೂರ್ಣವಾಗಿದೆ. ಎಂದು ಮೂಢ ನಂಬಿಕೆಯ ಕುರಿತಾದ ಕಥೆಯ ಮೂಲಕ ಮಕ್ಕಳಿಗೆ ಅರ್ಥೈಸಿದರು.
ಸಮಾಜ ಸೇವಕ ಡಾ.ನಸೀರ್ ಅಹ್ಮದ್ ಪ್ರಾಸ್ತವಿಕ ಮಾತನಾಡಿದರು. ಡಾ. ಶಿ.ಮು.ಶ. ಪ.ಪೂ. ಕಾಲೇಜು ಪ್ರಾಂಶುಪಾಲರಾದ ರೋಷನ್ ಕಾರ್ಯಕ್ರಮ ನಿರೂಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಕಣಕುಪ್ಪಿ ಮುರುಗೇಶಪ್ಪ, ಹಾಸಬಾವಿ ಕರಿಬಸಪ್ಪ, ಲಂಬಿ ಮುರುಗೇಶಪ್ಪ, ಮಹದೇವಮ್ಮ, ಕಂಚಿಕೆರ ಮಹೇಶ್, ಎಸ್. ಓಂಕಾರಪ್ಪ, ಎಸ್ ಜೆ ಎಂ ಶಾಲೆಯ ಸಿಬ್ಬಂದಿವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.