ಸುದ್ದಿ360 ದಾವಣಗೆರೆ, ಜೂ.20: ಮಹಾನಗರ ಪಾಲಿಕೆಯ ನೂತನ ಮೇಯರ್ ಅಧಿಕಾರ ವಹಿಸಿಕೊಂಡು 4 ತಿಂಗಳು ಕಳೆದರೂ ಇದುವರೆಗೂ ಸಾಮಾನ್ಯ ಸಭೆ ನಡೆಸಿಲ್ಲ. ವಾರ್ಡ್ಗಳ ಸಮಸ್ಯೆಗಳ ಚರ್ಚೆಗೆ ಅವಕಾಶ ಕಲ್ಪಿಸಿಲ್ಲ. ಮಹಾನಗರ ಪಾಲಿಕೆ ಆರ್ಥಿಕವಾಗಿ ದಿವಾಳಿಯಾಗಿದೆ ಅಲ್ಲದೆ, ಟೆಂಡರ್ ಕರೆಯಲು ಕೂಡ ಪಾಲಿಕೆ ಬಳಿ ಹಣವಿಲ್ಲ. ಹೀಗಾಗಿ ಮಹಾನಗರ ಪಾಲಿಕೆಯನ್ನು ಸೂಪರ್ಸೀಡ್ ಮಾಡಬೇಕು ಎಂದು ಪ್ರತಿಪಕ್ಷ ಕಾಂಗ್ರೆಸ್ ಆಗ್ರಹಿಸಿದೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಪಾಲಿಕೆ ಪ್ರತಿಪಕ್ಷ ನಾಯಕ ಜಿ.ಎಸ್. ಮಂಜುನಾಥ್ ಗಡಿಗುಡಾಳ್, ಮಹಾನಗರ ಪಾಲಿಕೆಗಳಲ್ಲಿ ಪ್ರತಿ ತಿಂಗಳು ಸಾಮಾನ್ಯ ಸಭೆ ನಡೆಸಬೇಕು ಎಂದು ಸರಕಾರದ ಆದೇಶವಿದ್ದರೂ, ನಾಲ್ಕು ತಿಂಗಳಿಂದ ಸಭೆ ಕರೆದಿಲ್ಲ. ಹೀಗಾಗಿ ಜನರ ಸಮಸ್ಯೆಗಳನ್ನು ಚರ್ಚಿಸಲು ಅವಕಾಶವೇ ಇಲ್ಲ ಎಂದು ಆರೋಪಿಸಿದರು.
ಜನರ ಸಮಸ್ಯೆ ಬಗ್ಗೆ ಕಾಳಜಿ ಇಲ್ಲ
ಇತ್ತೀಚೆಗೆ ಎಂಸಿಸಿ ಬಿ ಬ್ಲಾಕ್ನಲ್ಲಿ ಚರಂಡಿ ನೀರು ಮನೆಗಳಿಗೆ ನುಗ್ಗಿತ್ತು. ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ್ದ ಮೇಯರ್, 15 ದಿನಗಳಲ್ಲಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದರು. ಆದರೆ 25 ದಿನ ಕಳೆದರೂ ಸಮಸ್ಯೆ ಹಾಗೇ ಇದೆ. ಪರಿಹಾರ ಕೋರಿ ವಾರ್ಡ್ ನಾಗರಿಕರು ಮೇಯರ್ ಬಳಿ ಹೋದರೆ, ‘ನೀವು ಯಾರಿಗೆ ವೋಟು ಹಾಕಿದ್ದೀರೋ ಅವರನ್ನೇ ಕೇಳಿಕೊಳ್ಳಿ’ಎಂದು ಬೇಜವಾಬ್ದಾರಿ ಉತ್ತರ ನೀಡಿದ್ದಾರೆ. ಹಾಲಿ ಮೇಯರ್ಗೆ ನಗರದ ಅಭಿವೃದ್ಧಿ, ಜನರ ಸಮಸ್ಯೆ ಪರಿಹರಿಸುವ ಬಗ್ಗೆ ಕಾಳಜಿಯೇ ಇಲ್ಲ ಎಂದು ದೂರಿದರು.
ನಗರದಲ್ಲಿ ಬಿಜೆಪಿ ವಾರ್ಡ್ಗಳಿಗೆ ಕೋಟ್ಯಂತರ ರೂ. ಅನುದಾನ ನೀಡಲಾಗುತ್ತಿದೆ. ಕಾಂಗ್ರೆಸ್ ಸದಸ್ಯರಿರುವ ವಾರ್ಡ್ಗಳಿಗೆ 10, 20 ಲಕ್ಷ ರೂ. ಬಿಡುಗಡೆ ಮಾಡುತ್ತಿದ್ದಾರೆ. ಆ ಹಣ ಪಡೆಯಲು ಕೂಡ ಕಾಂಗ್ರೆಸ್ ಸದಸ್ಯರು ಮೇಯರ್, ಆಯುಕ್ತರ ಬಳಿ ಅಲೆದಾಡಬೇಕು. ಬಿಜೆಪಿ ಸದಸ್ಯರಿರುವ ಕೆಲವು ವಾರ್ಡ್ಗಳಿಗೆ 5 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ನಿಯಮದ ಪ್ರಕಾರ ಎಲ್ಲಾ ವಾರ್ಡ್ಗಳಿಗೂ ಸಮನಾಗಿ ಅನುದಾನ ನೀಡಬೇಕು. ಆದರೆ, ಪಾಲಿಕೆಯಲ್ಲಿ ಎಲ್ಲವೂ ಸಂಸದರ ಆಣತಿಯಂತೆ ನಡೆಯುತ್ತಿದೆ ಎಂದು ಆರೋಪಿಸಿದರು.
ನಗರೋತ್ಥಾನ ಅನುದಾನದ ಕಾಮಗಾರಿ ಮಂಜೂರಾಗಿ ಒಂದು ವರ್ಷವಾಗಿದೆ. ಕೆಲವು ಕಾಮಗಾರಿಗಳು ಚೇಂಜ್ ಆಫ್ ವರ್ಕ್ ಆಗಿರುವ ಕಾಮಗಾರಿಗಳು ಸರ್ಕಾರದ ಅನುಮೋದನೆಗೆ ಹೋಗಿ ಒಂದು ವರ್ಷವಾದರೂ ಅಪ್ರೋವಲ್ ಮಾಡಿಕೊಂಡು ಬರಲು ಅವರದೇ ನಗರಾಭಿವೃದ್ಧಿ ಸಚಿವರು, ಎಂಪಿ, ಎಎಲ್ಎ ಅಲ್ಲದೆ ಡಬಲ್ ಇಂಜಿನ್ ಸರ್ಕಾರ ಇದ್ದರೂ ಆಗುತ್ತಿಲ್ಲ ಇದು ಆಡಳಿತ ವೈಫಲ್ಯಕ್ಕೆ ಕೈಗನ್ನಡಿಯಾಗಿದೆ ಎಂದರು.
1200 ಮೀ ರಸ್ತೆಗೆ 7 ಕೋಟಿ!
ಪ್ರಮುಖ ಪ್ರವಾಸಿ ತಾಣ ಗಾಜಿನ ಮನೆಗೆ ರಸ್ತೆ ಕಲ್ಪಿಸಲು ಸ್ಮಾರ್ಟ್ ಸಿಟಿ ಕೈಗೆತ್ತಿಕೊಂಡಿರುವ ಕೇವಲ 1200 ಮೀಟರ್ ರಸ್ತೆ ಕಾಮಗಾರಿಗೆ 7 ಕೋಟಿ ರೂ. ಟೆಂಡರ್ ನೀಡಲಾಗಿದೆ. ಹೈವೆ ಸರ್ವಿಸ್ ರಸ್ತೆಯಿಂದ ನೇರವಾಗಿ ಕೇವಲ 600 ಮೀ. ರಸ್ತೆ ನಿರ್ಮಿಸಿ ಗಾಜಿನ ಮನೆಗೆ ಸಂಪರ್ಕ ಕಲ್ಪಿಸಲು ಅವಕಾಶವಿದ್ದರೂ ಸ್ಮಾರ್ಟ್ ಸಿಟಿಯವರು ಸುತ್ತಿ ಬಳಸಿ ರಸ್ತೆ ನಿರ್ಮಿಸುತ್ತಿದ್ದಾರೆ ಎಂದು ಎ.ನಾಗರಾಜ್ ಆರೋಪಿಸಿದರು.
ಉಕ್ಕಿ ಹರಿಯುವ ಯುಜಿಡಿ ನಿರ್ವಹಣೆಗೂ ಪಾಲಿಕೆ ಬಳಿ ಹಣವಿಲ್ಲ
ಪಾಲಿಕೆ ಸದಸ್ಯ ಎ. ನಾಗರಾಜ್ ಮಾತನಾಡಿ, ನಗರದ ಬಹುತೇಕ ವಾರ್ಡ್ಗಳಲ್ಲಿ ಯುಜಿಡಿ ವಾಲ್ಗಳು ಉಕ್ಕಿ ಹರಿಯುತ್ತಿವೆ. ಪ್ರತಿ ದಿನ ಯುಜಿಡಿ ಉಕ್ಕುವುದಕ್ಕೆ ಸಂಬಂಧಿಸಿದಂತೆ ಕನಿಷ್ಠ 4 ದೂರುಗಳು ಬರುತ್ತವೆ. ಇವುಗಳನ್ನು ನಿರ್ವಹಿಸಲು ಸಹ ಪಾಲಿಕೆ ಬಳಿ ಹಣವಿಲ್ಲ. ಸದ್ಯ ಪಾಲಿಕೆ ಬಳಿ ಕೇವಲ ಒಂದು ಯುಜಿಡಿ ವಾಹನವಿದೆ. ಎರಡು ವಾಹನಗಳು ಕೆಟ್ಟು ನಿಂತಿವೆ. ಇವುಗಳ ರಿಪೇರಿಗೆ ಕೂಡ ಪಾಲಿಕೆ ಮುಂದಾಗಿಲ್ಲ. ಸಣ್ಣ ಮಳೆ ಬಂದರೂ ಲೈನ್ಗಳು ಬ್ಲಾಕ್ ಆಗಿ ಮನೆ, ರಸ್ತೆಗಳಿಗೆ ಯುಜಿಡಿ ನೀರು ನುಗ್ಗುತ್ತದೆ. ಹಾಳಾಗಿರುವ ಯುಜಿಡಿ ಮೆಷಿನ್ ವಾಹನಗಳನ್ನು ದುರಸ್ತಿಗೊಳಿಸುವಂತೆ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಇಟ್ಟಿಗುಡಿ ಮಂಜುನಾಥ್, ಬಿ.ಹೆಚ್.ಉದಯಕುಮಾರ್, ನಗರ ಪಾಲಿಕೆ ಸದಸ್ಯ ಪಾಮೇನಹಳ್ಳಿ ನಾಗರಾಜ್ ಇದ್ದರು.