ಸುದ್ದಿ360 ಬಾಗಲಕೋಟೆ ನ.15: ಜನರು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜ್ಯದ ಯಾವ ಕ್ಷೇತ್ರವೂ ಸುರಕ್ಷಿತವಾಗಿಲ್ಲ ಎಂದು ಜಲಸಂಪನ್ಮೂಲ ಖಾತೆ ಸಚಿವ ಗೋವಿಂದ ಕಾರಜೋಳ ಲೇವಡಿ ಮಾಡಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಚಾಮುಂಡೇಶ್ವರಿ ಕ್ಷೇತ್ರದ ಜನರು ಕೈಬಿಟ್ಟಾಗ ಬಾದಾಮಿ ಜನರು ಸಿದ್ದರಾಮಯ್ಯ ಕೈ ಹಿಡಿದಿದ್ದರು. ಅವರ ಸೇವೆ ಮಾಡುವುದು ಬಿಟ್ಟು ಈಗ ಬೇರೆ ಕ್ಷೇತ್ರ ಕ್ಕೆ ಹೋಗುತ್ತಿದ್ದಾರೆ. ಕೋಲಾರದಲ್ಲಿ ಸ್ಥಿತಿ ಸರಿಯಿಲ್ಲ, ಅಲ್ಲಿ ಮುನಿಯಪ್ಪನವರನ್ನು ಕಾಂಗ್ರೆಸ್ ನವರೇ ಸೋಲಿಸಿದ್ದಾರೆ. ಈ ಸರತಿ ಎಲ್ಲರಿಗೂ ಬರಲಿದೆ ಎಂದು ಹೇಳಿದ ಅವರು, ಕಷ್ಟ ಕಾಲದಲ್ಲಿ ಕೈ ಹಿಡಿದವರನ್ನು ಮರೆಯಬಾರದು’ ಎಂದರು.
ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಯುವ ವಿಚಾರಕ್ಕೆ ಪ್ರತಿಕ್ರಿಯಿಸಿ ‘ ದೇಶದ ಇತಿಹಾಸ ತಿಳಿಯದವರು ಇಂತಹ ಆರೋಪ ಮಾಡುತ್ತಾರೆ. ಪ್ರಾಚೀನ ಕಾಲದಿಂದ ಶರಣರು, ಸಂತರು, ಸೂಫಿ ಸಂತರು ಕಾವಿ ಧರಿಸುತ್ತಿದ್ದರು. ಕಾವಿಯ ಬಣ್ಣ ಕೇವಲ ಸಾಧು, ಸಂತರಿಗೆ ಸೀಮಿತವಲ್ಲ. ರಾಷ್ಟ್ರ ಧ್ವಜದಲ್ಲಿ ಕೇಸರಿ, ಹಸಿರು ಬಣ್ಣಗಳಿವೆ. ಇದು ವಿವಾದ ಸೃಷ್ಟಿಸುವ ವಿಷಯವಲ್ಲ’ ಎಂದು ವಿಷಯವಲ್ಲ ಎಂದು ಹೇಳಿದರು.