ಸುದ್ದಿ360 ದಾವಣಗೆರೆ: `ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸಿದ್ದೇಶ್ವರ ಸೋಲುವುದನ್ನು ನೋಡುತ್ತೇನೆ’ ಎಂದು ಹೇಳಿರುವ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಮಾತಿಗೆ ಸಂಸದ ಜಿ.ಎಂ. ಸಿದ್ದೇಶ್ವರ ಅವರು “ಹಿರಿಯರು ಹಾಗೂ ನಮ್ಮ ಮಾವನವರಾಗಿರುವ ಶಾಮನೂರು ಶಿವಶಂಕರಪ್ಪ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಅವರು ಏನೇ ಹೇಳಿರಲಿ, ಅವರ ಮಾತುಗಳು ನನಗೆ ಆಶೀರ್ವಾದ ಇದ್ದಂತೆ” ಎಂದಿದ್ದಾರೆ.
ನಗರದ ಜಿಎಂಐಟಿ ಅತಿಥಿಗೃಹದಲ್ಲಿ ಶನಿವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಗೆ ನಿಂತರೆ ಫಂಡ್ ಕೊಡುವುದಾಗಿ ಹಿರಿಯರಾಗಿರುವ ಎಸ್‌ಎಸ್ ಹೇಳಿದ್ದಾರೆ. ಆ ಹಣವನ್ನು ಸ್ವೀಕರಿಸಲು ಸಹ ನಾನು ಸಿದ್ಧನಿದ್ದೇನೆ,” ಎನ್ನುವ ಮೂಲಕ ಸವಾಲು ಸ್ವೀಕರಿಸಲು ಸಿದ್ಧ ಎಂಬ ಸಂದೇಶವನ್ನು ಸಾರಿದ್ದಾರೆ.
ಎಂದಿನಂತೆ ಈ ಬಾರಿಯೂ ನನ್ನ ಸೋಲು ನೋಡಲಿ
ಶಾಮನೂರು ಶಿವಂಶಂಕರಪ್ಪ ಅವರು 2004ರಿಂದಲೂ ನಾನು ಸೋಲುವುದನ್ನು ನೋಡುತ್ತಲೇ ಬಂದಿದ್ದಾರೆ. ಈ ಹಿಂದಿನಂತೆಯೇ ಈ ಬಾರಿ ಕೂಡ ನಾನು ಸೋಲುವುದನ್ನು ನೋಡಬೇಕೆಂಬುದು ಅವರ ಆಸೆಯಾಗಿದ್ದರೆ ಅದೂ ಆಗಲಿ ಎಂದು ಹೇಳುವ ಮೂಲಕ ತಮ್ಮ ಮಾವನವರ ಮಾತಿಗೆ ಜಿ.ಎಂ. ಸಿದ್ದೇಶ್ವರ ಟಾಂಗ್ ಕೊಟ್ಟಿದ್ದಾರೆ.
ರಾಜ್ಯ ನಾಯಕರ ಒತ್ತಾಯ
ನಾನು 2024ರ ಲೋಕಸಭೆ ಚುನಾವಣೆಯಲ್ಲಿ ರ್ಸರ್ಧಿಸುವುದಿಲ್ಲ ಎಂದು ಈ ಹಿಂದೆ ಹೇಳಿಕೆ ನೀಡಿದ್ದು ನಿಜ. ಆದರೆ ಬಿಎಸ್‌ವೈ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನೀವೇ ನಿಲ್ಲಬೇಕು ಎಂದು ರಾಜ್ಯನಾಯಕರು ಒತ್ತಾಯ ಮಾಡಿದ್ದರು. ಹಿರಿಯರ ಮಾತಿಗೆ ಮನ್ನಣೆ ನೀಡಿ ಚುನಾವಣೆಗೆ ನಿಲ್ಲಲು ನಿರ್ಧರಿಸಿದ್ದೇನೆ. ಇತ್ತೀಚೆಗೆ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಈ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದೇನೆ ಎಂದು ಅವರು ಹೇಳಿದರು.
ಈ ಬಾರಿ ಟಿಕೆಟ್ ನನಗೇ ಸಿಗುತ್ತದೆ ಎಂಬ ವಿಶ್ವಾಸವಿದೆ. ಟಿಕೆಟ್ ನೀಡುವುದು ಬಿಡುವುದು ಪಕ್ಷದ ನಿರ್ಧಾರ. ಒಂದೊಮ್ಮೆ ಪಕ್ಷ ಹೊಸಬರಿಗೆ ಟಿಕೆಟ್ ನೀಡಿದರೆ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಪ್ರಚಾರ ಮಾಡುತ್ತೇನೆ.
– ಸಂಸದ ಜಿ.ಎಂ. ಸಿದ್ದೇಶ್ವರ
ನರೇಂದ್ರ ಮೋದಿ ಅವರು ಪ್ರಧಾನಿಯಾಗಿ 9 ವರ್ಷ ಪೈರೈಸಿದ್ದು, ಇಷ್ಟ ದೀರ್ಘಕಾಲದವರೆಗೆ ದೇಶದ ಅತ್ಯುನ್ನತ ಹುದ್ದೆ ಅಲಂಕರಿಸಿರುವ ಮೊದಲ ಕಾಂಗ್ರೆಸೇತರ ನಾಯಕರಾಗಿದ್ದಾರೆ ಎಂದು ಹೇಳಿದ ಅವರು, ಬಿಜೆಪಿ ಸರಕಾರದ 9 ವರ್ಷಗಳಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡಿರುವುದಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಎಸ್.ಎ. ರವೀಂದ್ರನಾಥ್, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ, ಹರಿಹರ ಶಾಸಕ ಬಿ.ಪಿ. ಹರೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್, ಮುಖಂಡರಾದ ಯಶವಂತರಾವ್ ಜಾಧವ್, ಬಿ.ಜಿ. ಅಜಯ್‌ಕುಮಾರ್, ಲೋಕಿಕರೆ ನಾಗರಾಜ್, ಶಿವರಾಜ್ ಪಾಟೀಲ್ ಇತರರಿದ್ದರು.