ಸುದ್ದಿ360 ಶಿವಮೊಗ್ಗ ಮಾ. 16: ಶಿಕಾರಿಪುರ ತಾಲೂಕಿನ ಉಡುತಡಿಯಲ್ಲಿ ಮಾ. 17ರ ಶುಕ್ರವಾರದಂದು ಮಧ್ಯಾಹ್ನ 12.30ಕ್ಕೆ ಶಿವಶರಣೆ ಅಕ್ಕಮಹಾದೇವಿ ಪುತ್ಥಳಿ ಅನಾವರಣವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೆರವೇರಿಸಲಿದ್ದಾರೆಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.
77 ಅಡಿ ಎತ್ತರದ ಈ ಪುತ್ಥಳಿಯು ಶಿವಶರಣೆ ಅಕ್ಕಮಹಾದೇವಿ ಜನ್ಮಸ್ಥಳವಾಗಿರುವ ಉಡುತಡಿಯಲ್ಲಿ ಮುಖ್ಯಮಂತ್ರಿಗಳು ಅನಾವರಣಗೊಳಿಸಲಿದ್ದು, ಇದೇ ಸಂದರ್ಭದಲ್ಲಿ ದೆಹಲಿ ಅಕ್ಷರಧಾಮ ಮಾದರಿಯಲ್ಲಿ ನಿರ್ಮಿಸಿರುವ ಉದ್ಯಾನವನ್ನು ಉದ್ಘಾಟಿಸಲಿದ್ದಾರೆ. ಅಂದು ಮಧ್ಯಾಹ್ನ 12 ಗಂಟೆಗೆ ಕೆಎಸ್‌ಆರ್‌ಟಿಸಿ ಘಟಕ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಕಸಬಾ ಏತ ನೀರಾವರಿ ಯೋಜನೆ ಕಾಮಗಾರಿ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ವಿದ್ಯುತ್ ವಿತರಣಾ ಕೇಂದ್ರ, ಸಮುದಾಯ ಭವನ, ಶಾಲಾ ಕಟ್ಟಡಗಳನ್ನು ಉದ್ಘಾಟಿಸಲಿದ್ದು, 100 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದಿದ್ದಾರೆ.
ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಪರಿಶ್ರಮದ ಫಲವಾಗಿ ಐತಿಹಾಸಿಕವಾಗಿ ಮನಸ್ಸಿನಲ್ಲಿ ಉಳಿಯುವ 77 ಅಡಿ ಎತ್ತರದ ಅಕ್ಕಮಹಾದೇವಿ ಪುತ್ಥಳಿ ಆಕರ್ಷಕವಾಗಿ ಕೆತ್ತನೆ ಮಾಡಿದ್ದು ಹಾಗೆಯೇ ದೆಹಲಿ ಅಕ್ಷರಧಾಮ ಮಾದರಿಯಲ್ಲಿ ನಿರ್ಮಿಸಿರುವ ಉದ್ಯಾನವನವು ವಿಶ್ವಪ್ರವಾಸಿಗರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಲಿದೆ ಎಂದವರು ತಿಳಿಸಿದ್ದಾರೆ.
ಮುಖ್ಯಮಂತ್ರಿಗಳು ನಾಳೆ ಬೆಳಿಗ್ಗೆ 10 ಗಂಟೆಗೆ ಬೆಂಗಳೂರು ಹೆಚ್‌ಎಎಲ್ ವಿಮಾನ ನಿಲ್ದಾಣದಿಂದ ಹೆಲಿಕ್ಯಾಪ್ಟರ್ ಮೂಲಕ ಶಿಕಾರಿಪುರದ ಶ್ರೀ ಹುಚ್ಚೂರಾಯ ಸ್ವಾಮಿ ದೇವಸ್ಥಾನ ಪಕ್ಕದ ಹೆಲಿಪ್ಯಾಡ್‌ಗೆ ಬಂದಿಳಿಯಲಿದ್ದಾರೆ ಎಂದು ತಿಳಿಸಿದ್ದಾರೆ.