ಮೀಸಲಾತಿ: ಜಿಲ್ಲಾಡಳಿತ ಕಚೇರಿ ಮುತ್ತಿಗೆಗೆ ಮುಂದಾದ ಎಸ್ಸಿ-ಎಸ್ಟಿ ಸಂಘಟನೆಗಳು

ಅರ್ಧಗಂಟೆಗೂ ಹೆಚ್ಚು ಕಾಲ ಜಿಲ್ಲಾಡಳಿತ ಭವನ ಮುಖ್ಯ ದ್ವಾರದ ಎದುರು ಪಿಬಿ ರಸ್ತೆ ತಡೆ

ಸುದ್ದಿ360, ದಾವಣಗೆರೆ ಜು.11: ಕರ್ನಾಟಕ ಸ್ವಾಭಿಮಾನಿ ಎಸ್ಸಿ-ಎಸ್ಟಿ ಸಂಘಟನೆಗಳ ಒಕ್ಕೂಟ ಮತ್ತು ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ಸದಸ್ಯರು, ನ್ಯಾ. ನಾಗಮೋಹನ್ ದಾಸ್ ಆಯೋಗದ ವರದಿ ಜಾರಿಗೆ ಆಗ್ರಹಿಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಕಲು ಮುಂದಾದ ಘಟನೆ ಸೋಮವಾರ ನಗರದಲ್ಲಿ ಜರುಗಿತು.

ಮುನ್ನೆಚ್ಚರಿಕೆ ಕ್ರಮವಾಗಿ ಪಿಬಿ ರಸ್ತೆಗೆ ಹೊಂದಿಕೊಂಡಿರುವ ಜಿಲ್ಲಾಡಳಿತ ಭವನದ ಮುಖ್ಯದ್ವಾರದ ಕಮಾನು ಬಳಿಯೇ ಪೊಲೀಸರು ಬ್ಯಾರಿಕೇಡ್ ಹಾಕಿದ್ದರಿಂದ ಪ್ರತಿಭಟನಾಕಾರರು ಜಿಲ್ಲಾಡಳಿತ ಕಚೇರಿ ಆವರಣ ಪ್ರವೇಶಿಸಸಲು ಸಾಧ್ಯವಾಗಲಿಲ್ಲ. ಇದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ಅರ್ಧಗಂಟೆಗೂ ಹೆಚ್ಚು ಕಾಲ ಜಿಲ್ಲಾಡಳಿತ ಭವನ ಮುಖ್ಯ ದ್ವಾರದ ಎದುರು ಸೋಮವಾರ ಪಿಬಿ ರಸ್ತೆ ತಡೆ ನಡೆಸಿದರು.

ಸಂವಿಧಾನದಲ್ಲಿ ತಿಳಿಸಿರುವಂತೆ ಒಟ್ಟು 101 ಪರಿಶಿಷ್ಟ ಜಾತಿಗಳು ಮತ್ತು50 ಎಸ್ಟಿ ಬುಡಕಟ್ಟುಗಳನ್ನು ಗುರುತಿಸಲಾಗಿದೆ. ಪ್ರಸ್ತುತ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ, ನ್ಯಾ. ನಾಗಮೋಹನ ದಾಸ್ ಆಯೋಗದ ವರದಿಯಂತೆ ಜನಸಂಖ್ಯೆಗೆ ಅನುಗುಣವಾಗಿ ಎಸ್ಸಿ ಸಮುದಾಯಗಳಿಗೆ ಹಾಲಿ ಇರುವ ಶೇ.15 ಮೀಸಲನ್ನು ಶೇ.17ಕ್ಕೆ ಹೆಚ್ಚಿಸಬೇಕು ಮತ್ತು ಎಸ್ಟಿಗೆ ಇರುವ ಶೇ.3 ಮೀಸಲಾತಿಯನ್ನು ಶೇ.7ಕ್ಕೆ ಹೆಚ್ಚಿಸಬೇಕು ಎಂದು ಮುಖಂಡರು ಆಗ್ರಹಿಸಿದರು.

ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಹೆಚ್ಚಿಸಿಲ್ಲ. 1958ರಲ್ಲಿ ರಾಜ್ಯ ಸರಕಾರ ಮೀಸಲಾತಿ ನಿಗದಿ ಮಾಡಿದ್ದು, 1961ರ ಜನಗಣತಿಯಂತೆ 4 ಲಕ್ಷ ಎಸ್ಸಿ ಮತ್ತು 1.93 ಲಕ್ಷ ಎಸ್ಟಿ ಸಮುದಾಯದ ಜನರಿದ್ದರು. 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ 1,04,74,992 ಎಸ್ಸಿ ಮತ್ತು ಎಸ್ಟಿ ಸಮುದಾಯದ 42,48,987 ಜನರಿದ್ದಾರೆ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ.17.15 ಎಸ್ಸಿ ಮತ್ತು ಶೇ.7 ಎಸ್ಟಿ ಸಮುದಾಯದವರಿದ್ದಾರೆ. ಆದರೆ, 1958ರಲ್ಲಿ ನಿಗದಿಯಾಗಿದ್ದ ಮೀಸಲಾತಿ ಪ್ರಮಾಣ ಇಂದಿಗೂ ಬದಲಾಗಿಲ್ಲ. ಇದರಿಂದ ಸಮುದಾಯದ ವಿದ್ಯಾರ್ಥಿ ಹಾಗೂ ನಿರುದ್ಯೋಗಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಂದಿನ ಚುನಾವಣೆ ಮುಳುವಾದೀತು ಎಚ್ಚರ

ದಲಿತ ಸಂಘರ್ಷ ಸಮಿತಿ ಮುಖಂಡ ಬಿ. ಮೂರ್ತಿ ಮಾತನಾಡಿ, ವಾಲ್ಮೀಕಿ ಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ, ಬೆಂಗಳೂರಿನ ಸ್ವಾತಂತ್ರ‍್ಯ ಉದ್ಯಾನದಲ್ಲಿ ಧರಣಿ ಕುಳಿತು 152 ದಿನಗಳು ಕಳೆದರೂ ಸರಕಾರ ಮೀಸಲಾತಿ ಹೆಚ್ಚಳಕ್ಕೆ ಗಮನಹರಿಸಿಲ್ಲ. ಬದಲಿಗೆ ಎಸ್ಸಿ-ಎಸ್ಟಿ ಹೋರಾಟ ಹತ್ತಿಕ್ಕುವ ಕಾರ್ಯಕ್ಕೆ ಮುಂದಾಗಿದೆ. ಇದು ಹೀಗೆಯೇ ಮುಂದುವರೆದರೆ ಮುಂಬರುವ ಚುನಾವಣೆ ಬಿಜೆಪಿಗೆ ಮುಳುವಾಗಲಿದೆ ಎಂದು ಎಚ್ಚರಿಸಿದರು.

ಹರಿಹರ ಶಾಸಕ ಎಸ್. ರಾಮಪ್ಪ, ಪಂಚಮಸಾಲಿ ಮುಖಂಡ ಎಚ್.ಎಸ್. ನಾಗರಾಜ್, ನಾಯಕ ಸಮಾಜದ ಜಿಲ್ಲಾಧ್ಯಕ್ಷ ಬಿ. ವೀರಣ್ಣ, ಹದಡಿ ಹಾಲಪ್ಪ, ಕೆ. ಬಸವಂತಪ್ಪ, ಅಬ್ದುಲ್ ಜಬ್ಬಾರ್, ಗೋವಿಂದರಾಜ್, ಎ.ಬಿ. ರಾಮಚಂದ್ರಪ್ಪ, ಶ್ರೀನಿವಾಸ ದಾಸಕರಿಯಪ್ಪ, ಸುಭಾಶ್ಚಂದ್ರ, ಹೊದಿಗೆರೆ ರಮೇಶ್, ಕೆ.ಪಿ. ಪಾಲಯ್ಯ, ಎ.ಬಿ. ರಾಮಚಂದ್ರಪ್ಪ, ಇಂದ್ರಮ್ಮ ಎಸ್.ವಿ. ರಾಮಚಂದ್ರ, ಆವರಗೆರೆ ವಾಸು, ಹುಚ್ವವ್ವನಹಳ್ಳಿ ಮಂಜುನಾಥ್, ಲಿಂಗರಾಜ್ ಇತರರು ಇದ್ದರು.

admin

admin

Leave a Reply

Your email address will not be published. Required fields are marked *

error: Content is protected !!