ಸುದ್ದಿ360 ದಾವಣಗೆರೆ, ಆ. 3: ಜನ ಸಾಗರದ ಮೂಲಕ ದಾವಣಗೆರೆಯ ಎಸ್.ಎಸ್. ಮೈದಾನ ಇತಿಹಾಸ ಪುಟ ಸೇರಿದೆ. ಇಲ್ಲಿ ನಡೆದ ಸಿದ್ಧರಾಮಯ್ಯ ಅಮೃತ ಮಹೋತ್ಸವ ರಾಜ್ಯಕ್ಕೆ, ವಿಶೇಷವಾಗಿ ಬಿಜೆಪಿ ಮತ್ತು ಜೆಡಿಎಸ್ ಗೆ ರಾಜಕೀಯವಾಗಿ ಮಹತ್ತರ ಸಂದೇಶವನ್ನು ರವಾನಿಸಿದೆ.
ವಾಣಿಜ್ಯ ನಗರಿ ದಾವಣಗೆರೆಯಲ್ಲಿ ಸಿದ್ದರಾಮೋತ್ಸವದ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಯಕತ್ವಕ್ಕೆ ಬಲ ತುಂಬುವ ಪ್ರಯತ್ನ ಸಫಲವಾಗಿರುವ ಕೈ, ಮುಂದಿನ ವಿಧಾನಸಭಾ ಚುನಾವಣೆ ಗೆದ್ದು ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ರಣಕಹಳೆ ಮೊಳಗಿಸಿದೆ.
ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ನಡೆದ ಅಮೃತ ಮಹೋತ್ಸವ ಸಮಾವೇಶ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬ ಲಕ್ಷಾಂತರ ಜನರ ಭಾವನೆಗಳಿಗೆ ಮೆರಗು ನೀಡಿದೆ.
ಕಾಂಗ್ರೆಸ್ ವರಿಷ್ಠ ರಾಹುಲ್‌ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತಿತರ ಮುಖಂಡರ ಸಮ್ಮುಖದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು ಅಬ್ಬರಿಸಿದರು. ಸಿದ್ದರಾಮಯ್ಯ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸುವ ಆಶಯಕ್ಕೆ ಈ ಸಮಾವೇಶ ಪುಷ್ಟಿ ನೀಡಿದೆ.
ನಿರೀಕ್ಷೆಗೂ ಮೀರಿದ ಜನಸಾಗರ
ರಾಜ್ಯದ ಎಲ್ಲಾ ಭಾಗಗಳಿಂದ ಜನ ಪ್ರವಾಹೋಪಾದಿಯಲ್ಲಿ ಬಂದಿದ್ದು, ಇದು ಸಿದ್ದರಾಮಯ್ಯ ಜನಪ್ರಿಯತೆ, ಗಟ್ಟಿ ನಾಯಕತ್ವಕ್ಕೆ ಈ ಸಮಾವೇಶ ಸಾಕ್ಷಿಯಾಯಿತು. ಬೆಳಿಗ್ಗೆಯಿಂದಲೇ ರಾಜ್ಯದ ವಿವಿಧೆಡೆಗಳಿಂದ ನೂರಾರು ವಾಹನಗಳಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ದಾವಣಗೆರೆಗೆ ಬಂದರು. ಸಮಾವೇಶ ಮುಗಿಯುತ್ತಿದ್ದರೂ ಜನ ಪ್ರವಾಹ ನಿಂತಿರಲಿಲ್ಲ. ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬ ಘೋಷಣೆಗಳು ಮೊಳಗುತ್ತಲೇ ಇತ್ತು. ಎಲ್ಲರಲ್ಲೂ ಇದೇ ವಿಚಾರದ ಬಗ್ಗೆ ಚರ್ಚೆ ನಡೆಯುತ್ತಿತ್ತು. ಎಲ್ಲರಲ್ಲೂ ಉತ್ಸಾಹ ಇಮ್ಮಡಿಸಿತ್ತು. ಈ ಕಾರ್ಯಕ್ರಮವನ್ನು ಕಾಂಗ್ರೆಸ್‌ನ ಎಲ್ಲಾ ನಾಯಕರುಗಳು ಭಾಗಿಯಾಗುವ ಮೂಲಕ ಪಕ್ಷದ ಒಗ್ಗಟ್ಟನ್ನು ಪ್ರದರ್ಶಿಸಿದ್ದು, ಮುಂದಿನ ಚುನಾವಣೆಯಲ್ಲೂ ಇದೇ ಒಗ್ಗಟ್ಟನ್ನು ಕಾಪಾಡಿಕೊಂಡು ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪವನ್ನು ತೊಟ್ಟರು.
ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿತ್ತು. ಪ್ರತಿಯೊಬ್ಬರಿಗೂ ಉಪಹಾರ, ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು. ಆದರೂ ಮಧ್ಯಾಹ್ನ 2 ಗಂಟೆ ಸಮಯದಲ್ಲಿ ಒಂದಷ್ಟು ಜನ ಅಡುಗೆ ಮಾಡುವ ಸ್ಥಳಕ್ಕೆ ದಾಳಿ ಇಟ್ಟಿದ್ದರಿಂದ ಸಮಸ್ಯೆ ಸೃಷ್ಟಿಯಾಯಿತು. ಪೊಲೀಸರು ಸಕಾಲಕ್ಕೆ ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಸಮಾವೇಶಕ್ಕೆ ಲಕ್ಷಾಂತರ ಮಂದಿ ಬಂದಿದ್ದು, ಸಮಾವೇಶ ನಡೆಯುವ ಸ್ಥಳಕ್ಕೆ ತಲುಪಲು ಕಾರ್ಯಕರ್ತರು, ಅಭಿಮಾನಿಗಳು ಹರಸಾಹಸ ಪಡುತ್ತಿದ್ದು, ಸಮಾವೇಶದ ಸ್ಥಳದಿಂದ 3 ಕಿಲೋ ಮೀಟರ್ ದೂರದಲ್ಲೇ ವಾಹನಗಳನ್ನು ನಿಲ್ಲಿಸಿ ನಡೆದುಕೊಂಡೇ ಸಮಾವೇಶ ಸ್ಥಳ ತಲುಪಿದರು. ಪ್ರತಿಯೊಬ್ಬ ಕಾರ್ಯಕರ್ತರು, ಅಭಿಮಾನಿಗಳು ದಾರಿಯುದ್ದಕ್ಕೂ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯನವರ ಪರ ಜೈಕಾರ, ಘೋಷಣೆಗಳನ್ನು ಕೂಗುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು.
ಸಿದ್ದರಾಮೋತ್ಸವದ ಬೃಹತ್ ವೇದಿಕೆಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಹೂ ಮಳೆಯ ಅದ್ದೂರಿ ಸ್ವಾಗತ ಕೋರಿದರು. ಸಿದ್ದರಾಮಯ್ಯ ಅವರನ್ನು ಅಭಿನಂದಿಸಲು ಶಾಸಕರು, ಸಂಸದರು, ಮುಖಂಡರುಗಳು ಮುಗಿ ಬಿದ್ದು, ಸಿದ್ದರಾಮಯ್ಯರ ಕೈ ಕುಲುಕಿ ಹುಟ್ಟುಹಬ್ಬದ ಶುಭಾಶಯ ಹೇಳಿದರು. ಮತ್ತೆ ಕೆಲವು ಅಭಿಮಾನಿಗಳು ಸಿದ್ದರಾಮಯ್ಯನವರಿಗೆ ಹಾರ ಹಾಕಿ, ಪೇಟ ತೊಡಿಸಿ ತಮ್ಮ ಅಭಿಮಾನ ಮೆರೆದರು.
ತರಹೇವಾರಿ ಗಿಫ್ಟ್: ಸಿದ್ದರಾಮಯ್ಯನವರಿಗೆ ಹುಟ್ಟುಹಬ್ಬದ ಉಡುಗೊರೆ ನೀಡಲು ರಾಯಚೂರಿನ ಅಭಿಮಾನಿಯೊಬ್ಬ ಕುರಿ ಮರಿ ತಂದಿದ್ದು, ಅದನ್ನು ಸಿದ್ದರಾಮಯ್ಯನವರಿಗೆ ನೀಡಿ ಸಂತಸ ಪಟ್ಟರು.
ಮನರಂಜಿಸಿದ ಕಲಾವಿದರು: ಸಮಾವೇಶದಲ್ಲಿ ಡೊಳ್ಳು ಕುಣಿತ ಸೇರಿದಂತೆ ಜಾನಪದ ವಾದ್ಯಗಳು ಜನರನ್ನು ರಂಜಿಸಿದ್ದು, ಖ್ಯಾತ ಸಂಗೀತ ನಿರ್ದೇಶಕರಾದ ಹಂಸಲೇಖ, ಸಾಧುಕೋಕಿಲ ಸಹ ತಮ್ಮ ಗಾನಸಿರಿಯಿಂದ ನೆರೆದಿದ್ದವರಿಗೆ ಮನರಂಜನೆ ನೀಡಿದರು.
ದೇಗುಲ-ದರ್ಗಾಕ್ಕೆ ಭೇಟಿ
ಮಾಜಿ ಮುಖ್ಯಮಂತ್ರಿ ಸಿದ್ದರಾಮ್ಯಯನವರು ಸಿದ್ದರಾಮೋತ್ಸವದ ವೇದಿಕೆಗೆ ಆಗಮಿಸುವ ಮೊದಲು ದಾವಣಗೆರೆಯ ದುರ್ಗಾಂಬಿಕಾ ದೇಗುಲ ಹಾಗೂ ಹಜರತ್ ಅಲಿ ಷಾ ದರ್ಗಾಕ್ಕೂ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡರು.
ಒಗ್ಗಟ್ಟು ಪ್ರದರ್ಶಿಸಿದ ನಾಯಕರು
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರೇಷ್ಮೆ ಶಾಲು ಹೊದಿಸಿ, ಇಂದಿರಾ ಗಾಂಧಿ ಪುಸ್ತಕ ನೀಡಿ ಗೌರವಿಸಿದರು. ಇಬ್ಬರೂ ಒಗ್ಗಟ್ಟು ಪ್ರದರ್ಶಿಸಿದರು.
ಇಬ್ಬರೂ ಕೈ ಎತ್ತಿ ನಾವು ಒಟ್ಟಿಗೆ ಇದ್ದೇವೆ ಎಂಬ ಸಂದೇಶ ರವಾನಿಸಿದರು. ಅಷ್ಟೇ ಅಲ್ಲ ಒಂದಲ್ಲಾ ಎರಡು ಬಾರಿ ಆಲಿಂಗನ ಮಾಡಿ ಶುಭ ಕೋರಿದರು. ಈ ಬೆಳವಣಿಗೆಗೆ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಸಹ ತಮ್ಮ ಭಾಷಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಇಬ್ಬರೂ ಮುಖಂಡರು ವರ್ತಿಸಿದ ರೀತಿ ಹಾಗೂ ಪರಸ್ಪರ ಆಲಿಂಗನ ಮಾಡಿಕೊಂಡಿದ್ದು ತಮಗೆ ಸಂತಸ ತಂದಿದೆ ಎಂದರು.
ಸಿದ್ದರಾಮಯ್ಯ ಅವರು ಸಹ ತಮ್ಮ ಹಾಗೂ ಡಿ.ಕೆ.ಶಿ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ನಾವು ಒಟ್ಟಿಗೆ ಇದ್ದೇವೆ. ಪ್ರತಿಪಕ್ಷಗಳು ಹಾಗೂ ಕೆಲವು ಮಾಧ್ಯಮಗಳು ನನ್ನ ಹುಟ್ಟು ಹಬ್ಬಕ್ಕೆ ಡಿ.ಕೆ.ಶಿ ವಿರೋಧ ಮಾಡುತ್ತಿದ್ದಾರೆ ಎಂದು ಅನಗತ್ಯ ವಿವಾದಗಳನ್ನು ಸೃಷ್ಟಿಸುತ್ತಿವೆ. ನಾನು ಶಿವಕುಮಾರ್ ಒಟ್ಟಾಗಿ ಇದ್ದೇವೆ. ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾವು ಒಟ್ಟಿಗೆ ಇದ್ದೇವೆ ಎಂದು ಹೇಳಿದರು. ಸ್ವತಃ ಡಿ.ಕೆ. ಶಿವಕುಮಾರ್ ಅವರು ಸಹ ಸಿದ್ದರಾಮಯ್ಯ ಅವರನ್ನು ಹಾಡಿಹೊಗಳಿದರು. ಸಿದ್ದರಾಮಯ್ಯ ಕೇವಲ ಹಿಂದುಳಿದ ವರ್ಗಗಳ ನಾಯಕ ಎಂದು ಪರಿಗಣಿಸಬೇಡಿ. ಅವರು ಎಲ್ಲ ಧರ್ಮ ಹಾಗೂ ವರ್ಗಗಳ ನಾಯಕ. ರಾಜ್ಯದ ಜನರಿಗೆ ಇನ್ನಷ್ಟು ಸೇವೆ ಮಾಡುವ ಶಕ್ತಿ ಸಿದ್ದರಾಮಯ್ಯ ಅವರಿಗೆ ಸಿಗಲಿ ಎಂದು ಶುಭ ಹಾರೈಸಿದರು.