ಮೂಲಭೂತ ಸೌಲಭ್ಯಕ್ಕಾಗಿ ಆಶ್ರಯ ನಿವಾಸಿಗಳ ಒತ್ತಾಯ

ಸುದ್ದಿ360 ದಾವಣಗೆರೆ, ಸೆ.09: ಪಾಲಿಕೆ ವ್ಯಾಪ್ತಿಯ ಆವರಗೆರೆ ಬಳಿಯ ಆಶ್ರಯ ಕಾಲೋನಿಗೆ ರಸ್ತೆ ಸೇರಿದಂತೆ ಇತರೆ ಮೂಲಭೂತ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ಭಾರತ ಕಮ್ಯೂನಿಷ್ಟ್ ಪಕ್ಷ ಮತ್ತು ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಕಾಲೋನಿಯ ನಿವಾಸಿಗಳು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ನಗರದ ಡಿಸಿಎಂ ಟೌನ್‌ಶಿಪ್ ಬಳಿಯ ರೈಲ್ವೆ ಕೆಳ ಸೇತುವೆಯಲ್ಲಿ ಜಮಾಯಿಸಿದ ನಿವಾಸಿಗಳು ಎತ್ತಿನ ಸಂತೆಗೆ ಹೋಗುವ ರಸ್ತೆಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿ, ಪಾಲಿಕೆಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, 2006-07ರಲ್ಲಿ ಮಹಾನಗರ ಪಾಲಿಕೆಯ ಆಶ್ರಯ ಸಮಿತಿಯಿಂದ ಆವರೆಗೆರೆ ಸರ್ವೇ ನಂ. 321/1ಬಿ1ರಲ್ಲಿನ 1.20 ಎಕರೆ ಜಮೀನಿನಲ್ಲಿ ನಿವೇಶನಗಳನ್ನು ಅಭಿವೃದ್ಧಿ ಪಡಿಸಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಕ್ಕೆ ಸೇರಿದ 76 ಜನ ವಸತಿ ರಹಿತರಿಗೆ ನಿವೇಶನ ನೀಡಲಾಗಿತ್ತು. ಆದರೆ, ಆಶ್ರಯ ಕಾಲೋನಿಗೆ ಸಂಪರ್ಕ ರಸ್ತೆ ಸೇರಿದಂತೆ ಯಾವುದೇ ಮೂಲಭೂತ ಸೌಲಭ್ಯವನ್ನು ಪಾಲಿಕೆ ಕಲ್ಪಿಸಿಲ್ಲ. ತಕ್ಷಣ ಪಾಲಿಕೆ ರಸ್ತೆ ಸೇರಿದಂತೆ ಇತರೆ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಿಪಿಐ ಮುಖಂಡರಾದ ಎಚ್.ಜಿ. ಉಮೇಶ್, ಆವರಗೆರೆ ವಾಸು, ದೇವೇಂದ್ರಪ್ಪ, ಪರಶುರಾಮ, ದಂಡೆಪ್ಪ, ಹನುಮಂತಪ್ಪ, ಶಿವಪ್ಪ, ಬಸಣ್ಣ ಮತ್ತಿತರರು ಪಾಲ್ಗೊಂಡಿದ್ದರು.

Leave a Comment

error: Content is protected !!