ಯೋಗದಿಂದ ವ್ಯಕ್ತಿ, ಸಮಾಜ, ರಾಷ್ಟ್ರ, ವಿಶ್ವಕ್ಕೆ ಶಾಂತಿ: ಮೋದಿ

ಸುದ್ದಿ 360 ಮೈಸೂರು, ಜೂ.21:  ಸಾಂಸ್ಕೃತಿಕ ರಾಜಧಾನಿ, ಆಧ್ಯಾತ್ಮ ಮತ್ತು ಯೋಗ ಸಾಧಕರ ನೆಲೆಬೀಡು ಮೈಸೂರಿನಲ್ಲಿ 8ನೇ ವಿಶ್ವ ಯೋಗ ದಿನಾಚರಣೆ ನಡೆಯುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿ ನಮಿಸಿದ ಪ್ರಧಾನಿ ನರೇಂದ್ರ ಮೋದಿಯವರು, ದೇಶ ಮತ್ತು ವಿಶ್ವದ ಎಲ್ಲ ಸಹೃದಯರಿಗೂ 8ನೇ ವಿಶ್ವ ಯೋಗ ದಿನಾಚರಣೆ ಶುಭಾಶಯಗಳನ್ನು ಕೋರಿದರು.

8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯೋಗ ಭೂಮಿ ಮೈಸೂರಿನಲ್ಲಿ ಕಂಡ ಯೋಗದ ಬೆಳಕು ಇಂದು ವಿಶ್ವದ ಎಲ್ಲೆಡೆ ಪಸರಿಸಿದೆ. ವಿಶ್ವಕ್ಕೆ ಆರೋಗ್ಯದ ಮಹತ್ವವನ್ನು ತಿಳಿಸುತ್ತಿದೆ. ಈ ಮೊದಲು ಕೇವಲ ಮನೆಗಳಲ್ಲಿ ಮಾತ್ರ ಮಾಡಲಾಗುತ್ತಿದ್ದ ಯೋಗ ವಿಶ‍್ವಮನ್ನಣೆ ಪಡೆದಿದೆ. ಕೊರೋನಾ ಸಾಂಕ್ರಾಮಿಕ ರೋಗ ಸಮಯದಲ್ಲೂ ಕೂಡ ಯೋಗ ದಿನದ ಉತ್ಸಾಹ ಕಡಿಮೆ ಆಗಿರಲಿಲ್ಲ. ನಮ್ಮೆಲರ ಜೀವನಕ್ಕೆ ವಿಶ್ವಾಸವನ್ನು ನೀಡುತ್ತಿರುವ ಯೋಗ ಇಂದು ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿದೆ ಎಂದರು.

ಶತ ಶತಮಾನಗಳಿಂದ ಮೈಸೂರಿನಂತಹ ಭಾರತದ ಆಧ್ಯಾತ್ಮಿಕ ಕೇಂದ್ರಗಳಿಂದ ಪೋಷಿಸಿಕೊಂಡು ಬಂದಿರುವ ಯೋಗ ಶಕ್ತಿ ಇಂದು ವಿಶ್ವ ಆರೋಗ್ಯಕ್ಕೆ ದಿಕ್ಸೂಚಿಯಾಗಿದೆ. ಇಂದು ಯೋಗವು ಜಾಗತಿಕ ಸಹಕಾರಕ್ಕೆ ಪರಸ್ಪರ ಆಧಾರವಾಗುತ್ತಿದೆ. ಯೋಗವು ಮನುಕುಲಕ್ಕೆ ಆರೋಗ್ಯಕರ ಜೀವನದ ನಂಬಿಕೆಯನ್ನು ನೀಡುತ್ತಿದೆ. ಯೋಗ ಈಗ ಜಾಗತಿಕ ಹಬ್ಬವಾಗಿ ಆಚರಣೆಗೊಳ್ಳುತ್ತಿದೆ.. ಯೋಗವು ಯಾವುದೇ ವ್ಯಕ್ತಿಗೆ ಮಾತ್ರವಲ್ಲ, ಇಡೀ ಮಾನವಕುಲದ ಅಗತ್ಯತೆಯಾಗಿದೆ. ಆದ್ದರಿಂದಲೇ ಈ ಬಾರಿಯ ಅಂತರಾಷ್ಟ್ರೀಯ ಯೋಗ ದಿನದ ಥೀಮ್  ‘ಮಾನವೀಯತೆಗಾಗಿ ಯೋಗ’ಆಗಿದೆ. ಯೋಗವು ಶಾಂತಿ ತರುವಂತದಾಗಿದ್ದು, ಕೇವಲ ವ್ಯಕ್ತಿಗಳಿಗೆ ಮಾತ್ರವಲ್ಲ, ಸಮಾಜಕ್ಕೆ ಶಾಂತಿ ಸಿಗುತ್ತದೆ. ಯೋಗವು ನಮ್ಮ ರಾಷ್ಟ್ರಗಳಿಗೆ ಮತ್ತು ವಿಶ್ವಕ್ಕೆ ಶಾಂತಿಯನ್ನು ತರುತ್ತದೆ ಎಂದರು.

ಯೋಗ ಜೀವನದ ಒಂದು ಭಾಗವಲ್ಲ, ಜೀವನ ಶೈಲಿ

ಇಂದು ದೇಶದ 75 ಐತಿಹಾಸಿಕ ಕೇಂದ್ರ ಸ್ಥಳಗಳಲ್ಲಿ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ. ಯೋಗ ಜೀವನದ ಒಂದು ಭಾಗವಲ್ಲ, ಇಂದು ಯೋಗ ಜೀವನ ಶೈಲಿಯೇ ಆಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಗಾರ್ಡಿಯನ್ ರಿಂಗ್ ಆಫ್ ಯೋಗ ಮಾಡಲಾಗುತ್ತಿದೆ. ಜಗತ್ತಿನ ಹಲವು ದೇಶಗಳಲ್ಲಿ ಸುರ್ಯೋದಯದೊಂದಿಗೆ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ. ಯೋಗ ಕ್ಷೇತ್ರದಲ್ಲಿ ಹೊಸ ಹೊಸ ಪ್ರಯತ್ನಗಳು ನಡೆಯುತ್ತಿದೆ. ಇದಕ್ಕಾಗಿ ಆಯುಷ್ಮಾನ್ ಇಲಾಖೆಯಲ್ಲಿ ಸ್ಟಾರ್ಟ್​​ಅಪ್ ಕೂಡ ತರಲಾಗಿದೆ. ವಿಶ್ವದಲ್ಲಿ ರೋಗ ಮುಕ್ತಿಗೆ ಯೋಗಾಸನವೇ ಆಧಾರವಾಗಿದೆ ಎಂದು ತಿಳಿಸಿದ ಪ್ರಧಾನಿ ಮೋದಿ ಪ್ರತಿನಿತ್ಯ ಪ್ರಾಣಾಯಾಮ, ಯೋಗ ಮಾಡುವುದನ್ನು ರೂಢಿಸಿಕೊಳ್ಳುವಂತೆ ಕರೆ ನೀಡಿದರು.

admin

admin

Leave a Reply

Your email address will not be published. Required fields are marked *

error: Content is protected !!