‘ವನ್ಯಜೀವಿ ಸಾಕಾಣಿಕೆ ಲೈಸನ್ಸ್ ಬಹಿರಂಗಪಡಿಸಿ – ಅಮಾಯಕರನ್ನು ಕೈಬಿಡಲು ಆಗ್ರಹ

ಸುದ್ದಿ360  ದಾವಣಗೆರೆ ಡಿ.27: ಕಲ್ಲೇಶ್ವರ ರೈಸ್ ಮಿಲ್ ಆವರಣದಲ್ಲಿ ಶೆಡ್ಯೂಲ್ಡ್ ವನ್ಯಜೀವಿಗಳನ್ನು ಅಕ್ರಮವಾಗಿ ಸಾಕಾಣಿಕೆ ಮಾಡಲಾಗಿದ್ದ ಪ್ರಕರಣದಲ್ಲಿ ಸ್ಥಳದ ಮಾಲೀಕ ಎಸ್.ಎಸ್. ಮಲ್ಲಿಕಾರ್ಜುನ ಅವರನ್ನು ಆರೋಪಿ ನಂ.-1ನ್ನಾಗಿ ನಮೂದಿಸಲಾಗಿಲ್ಲ. ಅಲ್ಲದೆ ಇಲ್ಲಿ ಹೊಟ್ಟೆಪಾಡಿಗಾಗಿ ಕೆಲಸ ನಿರ್ವಹಿಸುತ್ತಿದ್ದ ಕೆಲಸಗಾರರನ್ನು ಆರೋಪಿಯನ್ನಾಗಿ ಮಾಡಲಾಗಿದೆ ಎಂದು ಎಂದು ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತ ರಾವ್ ಜಾಧವ್‌ ಆರೋಪಿಸಿದರು.

ವನ್ಯಜೀವಿಗಳು ಸಿಕ್ಕಿರುವ ರೈಸ್ ಮಿಲ್ಲು ಯಾರ ಒಡೆತನದಲ್ಲಿ ಇದೆ ಎಂಬುದನ್ನು ಎಸ್‍ಎಸ್‍ ಮಲ್ಲಿಕಾರ್ಜುನ್ ಅವರು  ಹೇಳಲಿ. ವನ್ಯಜೀವಿಗಳ ಸಾಕಾಣಿಕೆಗೆ ಅಧಿಕೃತ ಲೈಸನ್ಸ್ ಇದ್ದರೆ ಬಹಿರಂಗವಾಗಿ ತಿಳಿಸಲಿ. ಹಾಗೆಯೇ ವನ್ಯಜೀವಿಗಳ ಸಾಕಾಣಿಕೆಗೆ ಸಂಬಂಧಿಸಿದಂತೆ ನಿರ್ವಹಿಸಿರುವ ದಾಖಲೆಗಳನ್ನು ಬಹಿರಂಗಗೊಳಿಸಲಿ.

ಯಶವಂತ ರಾವ್ ಜಾಧವ್, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷರು, ದಾವಣಗೆರೆ.

ಜಿಲ್ಲಾ ವರದಿಗಾರರ ಕೂಟದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಎಸ್‍ ಎಸ್ ಮಲ್ಲಿಕಾರ್ಜುನ್ ಅವರು ತಮ್ಮ ರಾಜಕೀಯ ಹಾಗೂ ಹಣದ ಪ್ರಭಾವದಿಂದ  ಆರೋಪಿ ನಂ.1 ಸ್ಥಾನದಿಂದ ನುಣುಚಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ ಇದಕ್ಕೆ ಸಾತ್‍ ಕೊಡುತ್ತಿರುವ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಬೇಕು ಮತ್ತು ಜಾಗದ ಮಾಲೀಕರನ್ನು ಆರೋಪಿಯನ್ನಾಗಿ ಮಾಡಬೇಕು ಎಂದು ಅವರು ಆಗ್ರಹಿಸಿದರು.

ವನ್ಯಜೀವಿಯನ್ನು ಕೊಂದು ತಿಂದ ಪ್ರಕರಣ ಮಾತ್ರವಲ್ಲದೆ ತಮ್ಮ ಫಾರಂ ಹೌಸ್ ನಲ್ಲಿ ವನ್ಯಜೀವಿಗಳನ್ನು ಅಕ್ರಮವಾಗಿ ಇರಿಸಿಕೊಂಡಿದ್ದ ದಾವಣಗೆರೆಯ ಕಾಂಗ್ರೆಸ್ ಮುಖಂಡ ಎಸ್‌.ಎಸ್. ಮಲ್ಲಿಕಾರ್ಜುನ್ ಅವರನ್ನು ವನ್ಯಜೀವಿ ಕಾನೂನು ಪ್ರಕಾರ ಬಂಧಿಸುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ದಾವಣಗೆರೆ ಜಿಲ್ಲೆಯ ಬಿಜೆಪಿ ಮುಖಂಡರು ರಾಜ್ಯದ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ, ಗೃಹ ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಈ ಕುರಿತಂತೆ ವಿಧಾನ ಮಂಡಲದ ಉಭಯ ಸದನಗಳಲ್ಲಿ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಚರ್ಚೆ ಮಾಡಲು ನಮ್ಮ ನಾಯಕರು ಸಿದ್ಧರಿದ್ದಾರೆ. ಮಾಜಿ ಸಚಿವ ಎಸ್‌.ಎಸ್. ಮಲ್ಲಿಕಾರ್ಜುನ ಹಾಗೂ ದಾವಣಗೆರೆಯ ವಲಯ ಅರಣ್ಯ ಅಧಿಕಾರಿ ಮತ್ತು ಬೆಂಗಳೂರಿನ ಸಿಸಿಬಿ ಪೊಲೀಸ್‌ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕೆಂದು ಒತ್ತಾಯಿಸಲಾಗಿದೆ ಎಂದರು.

ಗಾಳಿಯಲ್ಲಿ ಗುಂಡು ಹೊಡೆಯದೇ ದಾಖಲೆ ತನ್ನಿ

ನೀವು ಭ್ರಷ್ಟಾಚಾರ ರಹಿತರಾಗಿದ್ದರೆ ನಿಮ್ಮ ದಾಖಲೆ ನೀವು ತನ್ನಿ, ನಾನು ತರುತ್ತೇನೆ. ನಾನು ಭ್ರಷ್ಟಾಚಾರ ಮಾಡಿದ್ದರೆ ಅದರಿಂದ ಆಗುವ ನಷ್ಟವನ್ನು ತುಂಬಿಕೊಡಲು ನಾನು ಸಿದ್ದ. ಹಾಗೆಯೇ ನಿಮ್ಮ ವಿರುದ್ಧ ಭ್ರಷ್ಟಾಚಾರ ಸಾಬೀತಾದರೆ ನೀವು ನಷ್ಟ ತುಂಬಿಕೊಡಲು ಸಿದ್ಧರಿದ್ದರೆ ಬನ್ನಿ ಬಹಿರಂಗವಾಗಿ ಹೇಳಿಕೆ ನೀಡಿ.  ಸಾರ್ವಜನಿಕರನ್ನು ಗೊಂದಲಕ್ಕೀಡು ಮಾಡಬೇಡಿ ಎಂದು ಯಶವಂತ ರಾವ್ ಜಾಧವ್‌ ಹೇಳಿದರು.

ಗುತ್ತಿಗೆದಾರರ ಅಧ್ಯಕ್ಷ ಕೆಂಪಣ್ಣ ಅವರಿಗೂ ಕಾಂಗ್ರೆಸ್ ಪಕ್ಷಕ್ಕೂ ಏನು ಸಂಬಂಧ? ಕೆಂಪಣ್ಣ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲೆ ಇಲ್ಲದ ಪರಿಣಾಮವಾಗಿ ಕೋರ್ಟಿನ ಆದೇಶದ ಮೇರೆಗೆ ಬಂಧನ ಮಾಡಲಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಕೋರ್ಟಿನ ಬಗ್ಗೆ ಕಾಳಜಿ ಇಲ್ಲ. ಪ್ರಕರಣದ ತನಿಖೆಯ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಸುದ್ದಿಗೋಷ್ಟಿಯಲ್ಲಿ ದೂಡಾ ಅಧ್ಯಕ್ಷ ಎ.ವೈ.ಪ್ರಕಾಶ್, ಮೇಯರ್ ಜಯಮ್ಮ, ರಾಜನಹಳ್ಳಿ ಶಿವಕುಮಾರ್, ಲೋಕಿಕೆರೆ ನಾಗರಾಜ್, ಎಲ್.ಡಿ.ಗೋಣಪ್ಪ, ಸೋಗಿ ಶಾಂತಕುಮಾರ್, ಎಸ್‌.ಟಿ.ವೀರೇಶ್, ರಾಕೇಶ್ ಜಾಧವ್‌, ಚೇತನ್ ಇತರರು ಇದ್ದರು.

admin

admin

Leave a Reply

Your email address will not be published. Required fields are marked *

error: Content is protected !!