ಶಿಕಾರಿಪುರ ಮಾ.28: ನಿನ್ನೆ ನಡೆದ ಪ್ರತಿಭಟನೆ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಿವಾಸದ ಮೇಲೆ ನಡೆದ ಕಲ್ಲುತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಗೃಹ ಸಚಿವ ಆರಗ ಜ್ಞಾನೇಂದ್ರ ಶಿಕಾರಿಪುರಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ನಡೆಸಿ ಮಾಹಿತಿ ಕಲೆಹಾಕಿದರು.
ಸಂಸದ ಬಿ.ವೈ. ರಾಘವೇಂದ್ರ ಮತ್ತು ಎಸ್ಪಿ ಮಿಥುನ್ಕುಮಾರ್ ಅವರೊಂದಿಗೆ ಸಮಾಲೋಚನೆ ನಡೆಸಿದ ಅವರು, ತಪ್ಪು ಮಾಡಿದ ಯಾರನ್ನೂ ಬಿಡುವುದಿಲ್ಲ ಎಂದು ಎಚ್ಚರಿಕೆ ಸಂದೇಶ ರವಾನಿಸಿದರು.
ತಪ್ಪು ತಿಳುವಳಿಕೆ – ಪ್ರಚೋದನೆ
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಶಿಕಾರಿಪುರದ ಘಟನೆ ಅತ್ಯಂತ ದುರದೃ ಷ್ಟಕರ. ಕೆಲವರ ತಪ್ಪು ತಿಳುವಳಿಕೆ, ಪ್ರಚೋದನೆಯಿಂದ ಈ ಘಟನೆಯಾಗಿದ್ದು, ಈ ಕಾರಣಕ್ಕಾಗಿಯೇ ಶಿಕಾರಿಪುರದಲ್ಲಿ ಯಡಿಯೂರಪ್ಪ ಮನೆ ಮೇಲೆ ದಾಳಿಯಾಗಿದೆ ಎಂದು ಹೇಳಿದರು.
ಯಡಿಯೂರಪ್ಪನವರು ಬಂಜಾರ ಜನಾಂಗದವರ ಅಭಿವೃದ್ಧಿ ಮಾಡಲು ಶ್ರಮಿಸಿದ್ದಾರೆ. ಸೂರಗೊಂಡನಕೊಪ್ಪ ಮತ್ತು ಅಭಿವೃದ್ಧಿ ನಿಗಮ ಸ್ಥಾಪಿಸಿದ್ದರು. ಜನಾಂಗದ ಎಲ್ಲಾ ಅಭಿವೃದ್ಧಿಗೆ ಕೈ ಜೋಡಿಸಿದ್ದಾರೆ ಎಂದು ತಿಳಿಸಿದ ಸಚಿವರು, ಘಟನೆಯಲ್ಲಿ ಪಾಲ್ಗೊಂಡವರ ಮೇಲೆ ಆಕ್ಷನ್ ತೆಗೆದುಕೊಳ್ಳಬೇಡಿ, ತಪ್ಪು ತಿಳುವಳಿಕೆಯಿಂದ ಈ ರೀತಿ ಮಾಡಿದ್ದಾರೆ. ನಾನು ಅವರ ಜೊತೆ ಮಾತಾಡುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಘಟನೆಯಲ್ಲಿ ನಮ್ಮ ಪೊಲೀಸರ ಮೇಲೂ ಹಲ್ಲೆಯಾಗಿದ್ದು ನನಗೆ ನೋವಾಗಿದೆ ಎಂದರು.
ಘಟನೆಯಲ್ಲಿ ಗಾಯಗೊಂಡಿರುವ ಎರಡು ಮೂರು ಜನ ಪೊಲೀಸರು ಆಸ್ಪತ್ರೆಯಲ್ಲಿದ್ದಾರೆ. ಪೊಲೀಸರ ಮೇಲೆ ಹಲ್ಲೆ ನಡೆಸಿ ಕಾನೂನು ಕೈಗೆತ್ತಿಕೊಂಡಿದ್ದಾರೆ. ಎಂದು ಬೇಸರ ವ್ಯಕ್ತಪಡಿಸಿದ ಅವರು, ಇದು ಅನಿರೀಕ್ಷಿತ ಘಟನೆ. ಘಟನೆಯನ್ನು ಪೊಲೀಸರು ನಿಯಂತ್ರಣಕ್ಕೆ ತಂದಿದ್ದಾರೆ ಎಂದರು.
ಪೊಲೀಸರು ತಾಳ್ಮೆ ವಹಿಸಿದ್ದಕ್ಕೆ ಪೆಟ್ಟು ತಿನ್ನುವಂತಾಗಿದೆ. ಹೀಗಿದ್ದರೂ ನಮ್ಮ ಪೊಲೀಸರು ಬೇಗ ನಿಯಂತ್ರಣಕ್ಕೆ ತಂದಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆದಿದೆ. ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
ಉದ್ದೇಶಪೂರ್ವಕವಾಗಿ ದಾಳಿ ನಡೆದಿರುವುದು ನಮಗೆ ಕಂಡುಬಂದಿದೆ ಚುನಾವಣೆಯಲ್ಲಿ ಬೇಳೆ ಬೇಯಿಸಿಕೊಳ್ಳೋಕೆ ಕೆಲ ಪಕ್ಷದವರು ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿದರು.
ಪೊಲೀಸರ ತನಿಖೆಯಿಂದ ಇದು ಹೊರಬರಲಿದೆ. ನಾಲ್ಕೈದು ಕೇಸು ಇದ್ದವರು ಸಹ ನಿನ್ನೆಯ ಘಟನೆಯಲ್ಲಿ ಭಾಗಿಯಾಗಿದ್ದರು. ಅಮಾಯಕರನ್ನು ಪ್ರಚೋದನೆ ಮಾಡಿ ಗಲಾಟೆ ಮಾಡಿಸಿದ್ದಾರೆ. ಯಾರಿಗಾದರೂ ತಾಲೂಕು ಕಚೇರಿಗೆ ಬಂದು ಮನವಿ ಸಲ್ಲಿಸಲು ಅವಕಾಶ ಇರುತ್ತದೆ. ಆದರೆ, ಈ ರೀತಿ ಘಟನೆ ನಡೆಯಬಾರದು ಎಂದರು.
ಈ ಸಂದರ್ಭದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.