ವರ್ಷವಾದರೂ ಮುಗಿಯದ ರೈಲ್ವೆ ಅಂಡರ್ ಪಾಸ್
ಸುದ್ದಿ360 ದಾವಣಗೆರೆ ಮಾ.18: ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಮತ್ತು ಸಂಸದ ಜಿ.ಎಂ.ಸಿದ್ದೇಶ್ವರ ತಲಾ ಶೇ.20 ಕಮಿಷನ್ ಹಂಚಿಕೆ ಮಾಡಿಕೊಂಡಿದ್ದಾರೆ. ಶೇ.40 ಇಲ್ಲದೇ ಯಾವ ಕಾಮಗಾರಿಗಳು ಆಗುತ್ತಿಲ್ಲ. ಇದರಿಂದ ಕಾಮಗಾರಿಗಳು ಅಧೋಗತಿಯತ್ತ ಸಾಗಿವೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಇಂದು ಶನಿವಾರ ಪ್ರತಿಭಟನೆ ನಡೆಸಿದರು.
ನಗರದ ಅಶೋಕ ಟಾಕೀಸ್ ರೈಲ್ವೆ ಗೇಟ್ ಬಳಿ ನಿರ್ಮಾಣ ಆಗುತ್ತಿರುವ ಅಂಡರ್ ಪಾಸ್ ಹತ್ತಿರ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದರು.
ನಗರವೇ ಅಭಿವೃದ್ಧಿ ಆಗುವಷ್ಟು ಗುಣಮಟ್ಟದ ಕಾಮಗಾರಿಗಳು ಶಾಮನೂರು ಶಿವಶಂಕರಪ್ಪ ಮತ್ತು ಎಸ್ ಎಸ್ ಮಲ್ಲಿಕಾರ್ಜುನ್ ಅವಧಿಯಲ್ಲಿ ಆಗಿವೆ. ಎಸ್ಎಸ್ಎಂ ಸಂಸದರಾಗಿದ್ದರೆ ಗುಣಮಟ್ಟದ ರೈಲ್ವೆ ಕಾಮಗಾರಿಗಳು, ಅಂಡರ್ಪಾಸ್, ಮೇಲ್ಸೇತುವೆ ಅಲ್ಲದೆ ದಾವಣಗೆರೆಯಲ್ಲಿ ಇಷ್ಟೊತ್ತಿಗೆ ವಿಮಾನ ನಿಲ್ದಾಣ ಕೂಡ ಸ್ಥಾಪನೆ ಆಗುತ್ತಿತ್ತು.
-ದಿನೇಶ್ ಕೆ ಶೆಟ್ಟಿ
ಬಿಜೆಪಿ ನಡೆಸುತ್ತಿರುವುದು ಭ್ರಷ್ಟಾಚಾರ ಸಂಕಲ್ಪ ಯಾತ್ರೆ. ಈ ಸರಕಾರದಲ್ಲಿ ಭ್ರಷ್ಟಾಚಾರ, ಬೆಲೆ ಏರಿಕೆ, ಶೋಷಣೆ-ಹಿಂಸೆಗಳಿಂದ ಜನರ ಬದುಕು ಸರ್ವ ನಾಶವಾಗಿದೆ. ಈ ಪಕ್ಷ ಅಧಿಕಾರಕ್ಕೆ ಬಂದ ದಿನದಿಂದಲೂ ಜನರಿಗೆ ದ್ರೋಹ ಮಾಡುವುದನ್ನು ಬಿಟ್ಟು ಬೇರೆ ಏನೂ ಮಾಡಿಲ್ಲ ಎಂದು ಆರೋಪಿಸಿದರು.
ಗುತ್ತಿಗೆದಾರರಿಂದ ಶೇ.40ರಷ್ಟು ಕಮಿಷನ್ ಪಡೆಯಲಾಗುತ್ತಿದೆ ಎಂಬ ಕೆಂಪಣ್ಣನವರ ಆರೋಪಕ್ಕೆ ಮಾಡಾಳ್ ವಿರೂಪಾಕ್ಷಪ್ಪ ಪ್ರಕರಣ ಬಲವಾದ ಸಾಕ್ಷಿಯಾಗಿದೆ. ಆದರೆ ಭ್ರಷ್ಟ ಬಿಜೆಪಿ ಸರಕಾರ ತಪ್ಪೇ ಮಾಡಿಲ್ಲ ಎಂಬಂತೆ ವರ್ತಿಸುತ್ತಿದೆ ಎಂದರು.
ಸಂಸದರ ಕಮೀಷನ್ ಆಸೆಯೇ ರೈಲ್ವೆ ಅಂಡರ್ಪಾಸ್ ಕಾಮಗಾರಿ ಇಷ್ಟು ವಿಳಂಬವಾಗಲು ಕಾರಣ. ಇದು ಬಿಜೆಪಿಯ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಮತ್ತು ಸಂಸದ ಜಿ.ಎಂ. ಸಿದ್ದೇಶ್ವರ ಅವರುಗಳು ಶೇ.40 ಕಮಿಷನ್ ನೀಡದೆ ಯಾವುದೇ ಕಾಮಗಾರಿ ಆರಂಭ ಆಗಲು ಬಿಡುವುದಿಲ್ಲ ಎಂದು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾಬಾಯಿ ಮಾಲತೇಶ್, ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಶಾಮನೂರು ಟಿ.ಬಸವರಾಜ್, ವಕೀಲರ ಘಟಕದ ಅಧ್ಯಕ್ಷ ಪ್ರಕಾಶ್ ಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಯೂಬ್ ಪೈಲ್ವಾನ್ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್. ಮಲ್ಲಿಕಾರ್ಜುನ್, ಉಪಾಧ್ಯಕ್ಷ ಎಚ್.ಜಯಣ್ಣ, ಮಹ್ಮದ್ ಸಮೀವುಲ್ಲಾ, ಮಹಾನಗರ ಪಾಲಿಕೆ ಸದಸ್ಯ ಎ.ನಾಗರಾಜ್, ಮಾಜಿ ಸದಸ್ಯರಾದ ಸೀಮೇಎಣ್ಣೆ ಮಲ್ಲೇಶ್, ಚಂದ್ರಶೇಖರ್, ತಕ್ಕಡಿ ಮಂಜುನಾಥ್, ಜಮ್ನಳ್ಳಿ ನಾಗರಾಜ್, ಖಾಸಿಂಸಾಬ್, ಮೈನುದ್ದಿನ್, ಎಲ್ಎಂಎಚ್ ಸಾಗರ್, ಅಜ್ಜಪ್ಪ, ಕುಬೇರ, ರಾಘವೇಂದ್ರ ಗೌಡ, ಸಾವನ್ ಜೈನ್, ಲಾಲ್ ಆರೀಫ್, ಸುಭಾನ್ಸಾಬ್, ಅಲೆಕ್ಸಾಂಡರ್, ಮಹಿಳಾ ಮುಖಂಡರಾದ ದ್ರಾಕ್ಷಾಯಣಮ್ಮ, ರಾಜೇಶ್ವರಿ, ಆಶಾರಾಣಿ ಮುರುಳಿ, ಶುಭಮಂಗಳ, ರಾಧಾಬಾಯಿ, ಗೀತಾ ಚಂದ್ರಶೇಖರ್, ಕಮಲಮ್ಮ ಇತರರು ಇದ್ದರು.