ಸುದ್ದಿ360 ಶಿವಮೊಗ್ಗ, ಜೂ.20: ಸಂಸ್ಕೃತಿ ಮತ್ತು ಸಮಾಜ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಸಮಾಜ ಕ್ಕಿಂತ ಸಂಸ್ಕೃತಿ ಹೆಚ್ಚು ಪ್ರಧಾನವಾಗುತ್ತದೆ. ತರ್ಕ ವಿಲ್ಲದೆ ವಿಚಾರವಿಲ್ಲ. ವೈಚಾರಿಕ ತರ್ಕ ಅವರವರ ವ್ಯಕ್ತಿತ್ವಕ್ಕೆ ಬಿಟ್ಟಿದ್ದು ಎಂದು ಹಿರಿಯ ಸಾಹಿತಿಗಳಾದ ಪ್ರೊ. ಅರವಿಂದ ಮಾಲಗತ್ತಿ ಅಭಿಪ್ರಾಯಪಟ್ಟರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನೇತೃತ್ವದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮತ್ತು ಸಹ್ಯಾದ್ರಿ ವಿಹಾರ ವಿಚಾರ ವೇದಿಕೆ ಸಹಕಾರದಲ್ಲಿ ಗೋಪಿಶೆಟ್ಟಿಕೊಪ್ಪ ದಲ್ಲಿರುವ ಸಾಹಿತ್ಯ ಗ್ರಾಮದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಡಾ. ಸಣ್ಣರಾಮ ಅಭಿನಂದನಾ ಸಮಿತಿ ನೀಡಿದ ದತ್ತಿ ಕಾರ್ಯಕ್ರಮದಲ್ಲಿ ದತ್ತಿಯ ಆಶಯದಂತೆ ಸಮಕಾಲೀನ ಸಾಮಾಜಿಕ ಸಾಂಸ್ಕೃತಿಕ ಬಿಕ್ಕಟ್ಟುಗಳು ವಿಚಾರವಾಗಿ ಉಪನ್ಯಾಸ ನೀಡಿದರು.
ಮನುಷ್ಯನ ವಿಚಾರಗಳು ಬದಲಾಗುತ್ತಿರುತ್ತವೆ. ಗಾಂಧಿಯವರ ಎಲ್ಲಾ ವಿಚಾರಗಳು ನಮಗಿರಲಿ ಎನ್ನುವುದಕ್ಕಿಂತ ಅವುಗಳಲ್ಲಿನ ವಿಚಾರಗಳ ಆಯ್ಕೆ ನಮ್ಮದಾಗಿರುತ್ತದೆ. ಕಾಲ ಬದಲಾವಣೆಯ ಜೊತೆಗೆ ಆಯ್ಕೆಯಲ್ಲಿನ ಮೌಲ್ಯಗಳು ಕಾಣುತ್ತಿವೆ ಎಂದು ವಿವರಿಸಿದರು.
ಪ್ರತಿಯೊಬ್ಬರಿಗೂ ಸಂವಿಧಾನ ಹಕ್ಕು ಕೊಟ್ಟಿದ್ದು ಸಂವಿಧಾನಕ್ಕೆ ಬದ್ಧವಾಗಿರುವ ಮೌಲ್ಯಗಳನ್ನು ಪ್ರತಿನಿಧಿಸುವ ಆಲೋಚನೆಗಳು ಅಗತ್ಯ ಎಂದು ಅವರು ಹೇಳಿದರು. ಮೌಲ್ಯಗಳನ್ನು ಪ್ರತಿನಿಧಿಸುವ, ವೈಚಾರಿಕ ಬದಲಾವಣೆಯೊಂದಿಗೆ ಜನಮುಖಿಯಾಗಿ ರಾಷ್ಟ್ರದ ಅಭಿವೃದ್ಧಿಯನ್ನು ಕಾಣಬೇಕು. ಸಂಪ್ರದಾಯದಲ್ಲೂ ಪ್ರಗತಿಪರ ವಾದಿಗಳಿದ್ದಾರೆ. ಅವರು ಅಲ್ಲಿಯೇ ಅನೇಕ ವಿರೋಧಗಳನ್ನು ಮಾಡುತ್ತಿರುತ್ತಾರೆ. ಅವರಿಗೆ ಆ ಚೌಕಟ್ಟನ್ನು ಬಿಟ್ಟು ಹೊರಬರಲು ಸಾಧ್ಯವಿಲ್ಲ. ಸಾಂಪ್ರದಾಯಿಕ ಪ್ರಗತಿಪರರು ಇರುವುದರಿಂದ ಪ್ರಗತಿಪರರಿಗೆ ನೆರವಾಗುತ್ತೆ, ಪರಿಣಾಮ ಬೀರುತ್ತೆ. ಬದಲಾವಣೆ, ವೈಚಾರಿಕತೆಯ ನಡುವೆ ನಮ್ಮದೇ ಗೋಡೆಕಟ್ಟುತ್ತಿದ್ದೇವೆ. ಗೋಡೆ ಮೀರಿ ಕೊಡುಕೊಳ್ಳಲು ಅವಕಾಶವಾಗಬೇಕು. ಮುಕ್ತ ಚರ್ಚೆಗೆ, ಸಂವಾದಕ್ಕೆ ಮುಖಾ ಮುಖಿಯಾಗಬೇಕು ಎಂದು ಹೇಳಿದರು.
ಡಿ.ಎಸ್. ಎಸ್. ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಡಾ. ಸಣ್ಣರಾಮ ಅವರು ಬರೆದ ಎರಡು ಕೃತಿಗಳನ್ನು ಲೋಕಾರ್ಪಣೆಗೊಳಿಸಿದರು. ನಂತರ ಅವರು ಮಾತನಾಡಿ, ಸಾಂಸ್ಕೃತಿಕ ಲೋಕ ಸಶಕ್ತವಾಗಿ ಎದ್ದುನಿಲ್ಲದಿದ್ದರೆ ರಾಜಕಿಯ ನಾಯಕರು ತಾಂಡವವಾಡುತ್ತಾರೆ. ರಾಜಕಿಯ ಶಕ್ತಿ ಬದಲಾ ಗಲು ಸಾಮಾಜಿಕ, ಸಾಂಸ್ಕೃತಿಕ ಲೋಕ ಸಕ್ರಿಯವಾಗಬೇಕು. ರಾಜಕಾರಣದ ಭಾಷೆ ಮುಂದಾಗಿದೆ. ಅದು ಸಾಂಸ್ಕೃತಿಕ ಬಲಿಪಡೆಯುತ್ತಿದೆ. ಭಾಷೆ ಮನಸ್ಸು ಪರಿವರ್ತಿಸದೆ ಕತ್ತು, ಕೈ, ಕಾಲು ತೆಗೆಯುವ ಮಾತನಾಡುತ್ತಿದೆ ಎಂದರು.
ಸಣ್ಣರಾಮ ಅವರು ಬರೆದ ‘ಮಹಾಮೌನ’ ಕವನ ಸಂಕಲನವನ್ನ ಕುರಿತು ಕನ್ನಡ ಪ್ರಾಧ್ಯಾ ಪಕ ಡಾ. ಪ್ರಕಾಶ್ ಮರ್ಗನಹಳ್ಳಿ ಮಾತನಾಡಿ ದರು. ಕಥಾ ಸಂಕಲನ ‘ಕತ್ತಲೆ ಪಿಸುಮಾತು’ ಕೃತಿ ಕುರಿತು ಸಾಗರ ಇಂದಿರಾಗಾಂಧಿ ಪ್ರಥಮ ದರ್ಜೆಕಾಲೇಜಿನ ಪ್ರಾಧ್ಯಾಪಕರಾದ ಪ್ರೊ. ಬಿ. ಎಲ್. ರಾಜು ಮಾತನಾಡಿದರು.
ಹಿರಿಯ ಸಾಹಿತಿಗಳಾದ ಡಾ. ಸಣ್ಣರಾಮ, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ವಿಶ್ವನಾಥ ಕಾಶಿ ಉಪಸ್ಥಿತರಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ತಾ. ಕಸಾಪ ಅಧ್ಯಕ್ಷೆ ಮಹಾದೇವಿ ಸ್ವಾಗತಿಸಿದರು.