ಕುಟುಂಬ ರಾಜಕಾರಣದ ‘ಕತ್ತಿ’ ಝಳಪಿಸಿದ ಸಚಿವ ಉಮೇಶ್ ಕತ್ತಿ
ಸುದ್ದಿ360 ವಿಜಯಪುರ, ಜು.25: ಪ್ರಧಾನಿ ಮೋದಿ ಹಾಗೂ ಯೋಗಿ ಇವರು ಕುಟುಂಬ ಇಲ್ಲದ ನಾಯಕರು. ನಾವೆಲ್ಲ ಕುಟುಂಬ ರಾಜಕಾರಣದಿಂದಲೇ ಬಂದವರು. ಕುಟುಂಬ ರಾಜಕಾರಣ ಇರೋದೆ ನಿಜ ಎಂದು ಅರಣ್ಯ ಹಾಗೂ ಆಹಾರ, ನಾಗರಿಕ ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಉಮೇಶ ಕತ್ತಿ ಪ್ರತಿಕ್ರಿಯಿಸಿದ್ದಾರೆ.
ಇಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ನಾವೆಲ್ಲ ಕುಟುಂಬ ರಾಜಕಾರಣದಿಂದ ಬಂದವರು. ನನ್ನ ತಂದೆ ರಾಜಕಾರಣದಲ್ಲಿ ಇದ್ದರು, ಈಗ ನಾನೂ ಇದ್ದೇನೆ. ಯಡಿಯೂರಪ್ಪ ರಾಜಕಾರಣದಲ್ಲಿದ್ದರು, ಈಗ ಅವರ ಪುತ್ರ ವಿಜಯೇಂದ್ರ ಕೂಡ ರಾಜಕಾರಣದಲ್ಲಿದ್ದಾರೆ ಎಂದು ಕುಟುಂಬ ರಾಜಕಾರಣವನ್ನು ಸಮರ್ಥಿಸಿಕೊಂಡಿದ್ದಾರೆ.
ಬಿ.ಎಸ್. ಯಡಿಯೂರಪ್ಪ ನಿವೃತ್ತಿ ಘೋಷಣೆಗೆ ಸಂಬಂಧಿಸಿದಂತೆ ಮಾತನಾಡಿ, ಯಡಿಯೂರಪ್ಪ ಅವರಿಗೆ ವಯಸ್ಸು 80 ಆಗಿದೆ. ಈಗಲೂ ದುಡಿಯುವ ತಾಕತ್ತು, ಹಂಬಲ ಇದೆ. ಪಕ್ಷದ ನಿಯಮಾನುಸಾರ ನಿವೃತ್ತಿ ಘೋಷಿಸಿ, ಪುತ್ರನಿಗೆ ರಾಜಕೀಯ ಸ್ಥಾನಮಾನ ಕಲ್ಪಿಸಲು ತೀರ್ಮಾನಿಸಿದ್ದಾರೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ- ಚಟ ತೀರಿಸ್ಕೋಳ್ಳೋರು ತೀರಿಸ್ಕೊಳ್ಳಲಿ
ಕಾಂಗ್ರೆಸ್ ನಲ್ಲಿ ಹೆಚ್ಚುತ್ತಿರುವ ಸಿಎಂ ಪೈಪೋಟಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಕತ್ತಿ, ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ. ಹೀಗಾಗಿ ಸಿಎಂ ಅಭ್ಯರ್ಥಿ ನಾನೆ ಎಂದು ಯಾರ್ಯಾರು ಹೇಳ್ಕೋತಾರೋ ಹೇಳ್ಕೊಂಡು ಚಟ ತೀರಿಸಿಕೊಳ್ಳಲಿ ಎಂದಿದ್ದಾರೆ.
ನಾನೂ ಆಕಾಂಕ್ಷಿ
ಇನ್ನು ಬಿಜೆಪಿಯಲ್ಲಿ ಯಾರಾದರೂ ಸಿಎಂ ಆಗಬಹುದು. ದಲಿತರೂ ಆಗಬಹುದು. ನನಗೂ ಸಿಎಂ ಗಾದಿ ಏರುವ ಹಂಬಲ ಇದೆ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.