ಸುದ್ದಿ360, ದಾವಣಗೆರೆ, ಜು.07: ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಉತ್ತಮ ನಿರ್ವಹಣೆ ನಡೆಯುತ್ತಿದ್ದು, ಯಾವುದೇ ಗಂಭೀರ ಸಮಸ್ಯೆ ಇಲ್ಲ ಎಂದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಎರಡೂ ಜಿಲ್ಲೆಗಳ ಕಾರ್ಯ ನಿರ್ವಹಣೆಯನ್ನು ಪ್ರಶಂಸಿಸಿದರು. ಇದು ಔಪಚಾರಿಕ ಭೇಟಿಯಾಗಿದ್ದು, ಇಂದಿನ ಸಭೆಯಲ್ಲಿ ಕೆಲವು ಸಲಹೆ ಸೂಚನೆಗಳನ್ನು ನೀಡಲಾಗಿದ್ದು, ಇಲಾಖೆಯಲ್ಲಿ ಉತ್ತಮ ಕೆಲಸ ಮಾಡಿದವರಿಗೆ ಗುರುತಿಸಿ ರಿವಾರ್ಡ್ ನೀಡುವ ಮೂಲಕ ಕರ್ತವ್ಯದಕ್ಷತೆ ಹೆಚ್ಚುವಂತೆ ಮೋಟಿವೇಟ್ ಮಾಡುವ ನಿಟ್ಟಿನಲ್ಲಿ ಇಂದು ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ದಾವಣಗೆರೆ ಹಾಗೂ ಚಿತ್ರದುರ್ಗ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕೋಮುಭಾವನೆ ಕೆರಳಿಸುವ ಘಟನೆಗಳು ಕೆಲವು ಕಡೆ ನಡೆಯುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿನ ಮಾಹಿತಿಯಿಂದ ಇಂತಹ ಘಟನೆಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ಹೆಚ್ಚಿನ ನಿಗಾ ಇಡುವ ಕೆಲಸ ಆಗಬೇಕಿದೆ. ಈ ಹಿನ್ನೆಲೆಯಲ್ಲಿ ಸಣ್ಣ ಸಣ್ಣ ವಿಚಾರಗಳು ಗಂಭೀರ ಸ್ವರೂಪ ಪಡೆಯುವ ಸಾಧ್ಯತೆ ಇದ್ದು, ಯಾವ ವಿಚಾರವನ್ನೂ ನಿರ್ಲಕ್ಷಿಸದೆ ಸೂಕ್ತ ರೀತಿಯ ಕಾನೂನು ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚನ ನೀಡಲಾಗಿದೆ. ಹಳ್ಳಿ ಮತ್ತು ನಗರ ಪ್ರದೇಶಗಳಲ್ಲಿ ಬೀಟ್ ವ್ಯವಸ್ಥೆಯನ್ನು ಹೆಚ್ಚಿಸಲು ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.
ಹುಬ್ಬಳ್ಳಿಯ ಸ್ಟಾರ್ ಹೋಟೆಲ್ನಲ್ಲಿ ನಡೆದ ಚಂದ್ರಶೇಖರ ಗುರೂಜಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೋಟೆಲಿನ ಸೆಕ್ಯೂರಿಟಿ ವ್ಯವಸ್ಥೆ ಅಷ್ಟೊಂದು ಸರಿಯಾಗಿ ಇಟ್ಟುಕೊಂಡಿಲ್ಲದ ಕಾರಣ ದುಷ್ಕರ್ಮಿಗಳಿಗೆ ಮಾರಕ ಅಸ್ತ್ರಗಳನ್ನು ಆ ವ್ಯಾಪ್ತಿಯಲ್ಲಿ ಕೊಂಡೊಯ್ಯಲು ಆಸ್ಪದವಾಗಿದೆ. ತರಬೇತಿ ಹೊಂದಿದ ರಕ್ಷಣಾ ಸಿಬ್ಬಂದಿಯನ್ನು ಅಳವಡಿಸಿಕೊಳ್ಳಬೆಕು. ಖಾಸಗಿ ಸೆಕ್ಯೂರಿಟಿ ಏಜೆನ್ಸಿಯವರು ಸಿಬ್ಬಂದಿಗೆ ಉತ್ತಮ ತರಬೇತಿ ನೀಡಬೇಕು. ಖಾಸಗಿ ಭದ್ರತಾ ಏಜೆನ್ಸಿಗಳು ತುಂಬ ಹಳೆಯ ವಿಧಾನದ ತರಬೇತಿ ನೀಡಲಾಗುತ್ತಿದ್ದು, ಇಲಾಖೆ ಸೂಚಿಸಿ ಆಧುನಿಕ ತರಬೇತಿ ವಿಧಾನವನ್ನು ಕೈಗೊಳ್ಳದ ಭದ್ರತಾ ಏಜೆನ್ಸಿಗಳ ಲೈಸನ್ಸ್ ರದ್ದುಪಡಿಸಲಾಗುವುದು ಎಂದರು.
ದಾವಣಗೆರೆ ನಗರದಲ್ಲಿ ಸ್ಮಾರ್ಟ್ ಸಿಟಿಯಡಿಯಲ್ಲಿ ಸಾಕಷ್ಟು ಕಡೆ ಸಿಸಿ ಟಿವಿಯನ್ನು ಅಳವಡಿಸಲಾಗಿದೆ. ಉಳಿದಂತೆ ಬೇರೆ ಮಾಲ್ ಮತ್ತು ಹೋಟೆಲ್ ಇತರೆಡೆ ಸಿಸಿ ಟಿವಿ ಅಳವಡಿಕೆಯ ಬಗ್ಗೆ ಅಧಿಕಾರಿಗಳೊಂದಿಗೆ ಹೋಗಿ ಪರಿಶೀಲಿಸಲಾಗುವುದು ಎಂದರು.
ಮಾದಕ ವಸ್ತು ನಿಯಂತ್ರಿಸುವ ನಿಟ್ಟಿನಲ್ಲಿ ಮಾದಕ ಸೇವಿಸುವವರ ಮೇಲೆಯೂ ಕಠಿಣ ಕ್ರಮ ಜರುಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಮೊದಲು ನೌಕರರು, ವಿದ್ಯಾರ್ಥಿಗಳು ಆಗಿರುತ್ತಾರೆ ಎಂಬ ಕಾರಣದಿಂದ ಮಾದಕ ದ್ರವ್ಯ ಸೇವಿಸುವವರ ಮೇಲೆ ಮೃದು ಧೋರಣೆಯನ್ನು ಹೊಂದಲಾಗಿತ್ತು. ಆದರೆ ಈಗ ಸೂಕ್ತ ಕ್ರಮ ಜರುಗಿಸಲು ಸೂಚನೆ ನೀಡಲಾಗಿದೆ. ಅಲ್ಲದೆ ಈ ಮೊದಲು ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದವರ ಡೇಟಾವನ್ನು ತೆಗೆದು ಅವರು ಈಗ ಏನು ಮಾಡುತ್ತಿದ್ದಾರೆ ಮತ್ತು ಅವರ ಸಂಪರ್ಕದ ಮೇಲೆ ನಿಗಾ ಇಡಲಾಗುವುದು. ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಇದರ ಕುರಿತಾಗಿ ಮಾಹಿತಿ ಸಂಗ್ರಹಿಸಲಾಗುವುದು. ಸಣ್ಣ ತರಗತಿಯ ಆರು ಏಳು ತರಗತಿ ಓದುತ್ತಿರುವ ಮಕ್ಕಳಿಗೆ ಚೆನ್ನಾಗಿ ಮಾತನಾಡಿಸಿದರೆ ಅವರಿಂದ ಮಾಹಿತಿ ಸಿಗುತ್ತದೆ ದೊಡ್ಡ ತರಗತಿಯ ಮಕ್ಕಳನ್ನು ಕೇಳಿದರೆ ಮಾಹಿತಿ ಸಿಗುವುದು ಕಷ್ಟ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು.
ಇತ್ತಿಚೆಗೆ ಢಕಾಯಿತಿ, ಫಿಸಿಕಲ್ ಚೀಟಿಂಗ್ ಕಡಿಮೆಯಾಗಿದ್ದು, ಆನ್ಲೈನ್, ಸೈಬರ್ ಕ್ರೈಂ ಹೆಚ್ಚಾಗಿದ್ದು, ಈ ನಿಟ್ಟಿನಲ್ಲಿ ಇಲಾಖೆಲ್ಲಿ ಹತ್ತು ವರ್ಷಕ್ಕಿಂತ ಹೆಚ್ಚು ಸರ್ವಿಸ್ ಇರುವ ಸಿಬ್ಬಂದಿಗಳು ಕಡ್ಡಾಯವಾಗಿ ಸೈಬರ್ ಶಿಕ್ಷಣ ಕಲಿಯಬೇಕು. ಸೈಬರ್ ಅಫೆನ್ಸ್ ಕುರಿತಂತೆ ಜನರೂ ಕೂಡ ಯಾವ ಮಾಹಿತಿ ಕೊಡಬೇಕು, ಯಾವುದು ಕೊಡಬಾರದು ಎಂಬುದರ ಬಗ್ಗೆ ಜಾಗೃತಿ ವಹಿಸಬೇಕು. ಯಾವುದೇ ಗೊತ್ತಿಲ್ಲದ ನಂಬರ್ ಮತ್ತು ಇ-ಮೇಲ್, ಮೆಸೇಜ್ ಗಳಿಗೆ ಉತ್ತರಿಸುವ ಮುನ್ನ ಜಾಗರೂಕರಾಗಿರಬೇಕು. ಇಂತಹ ವಿಷಯಗಳಲ್ಲಿ ಜಾಗೃತರಾಗುವ ಮೂಲಕ ಇಲಾಖೆಯೊಂದಿಗೆ ಸಾರ್ವಜನಿಕರು ಸಹಕಸುವಂತೆ ಅವರು ಮನವಿ ಮಾಡಿದರು.
ಈ ವೇಳೆ ಪೂರ್ವ ವಲಯ ಐಜಿಪಿ ತ್ಯಾಗರಾಜನ್, ದಾವಣಗೆರೆ ಎಸ್ ಪಿ ಸಿ.ಬಿ. ರಿಷ್ಯಂತ್, ಚಿಗ್ರದುರ್ಗ ಎಸ್ ಪಿ ಪರಶುರಾಮ್ ಹಾಜರಿದ್ದರು.