ಶಾಮನೂರು ಶಿವಶಂಕರಪ್ಪ ಅವರ ಒಡೆತನದ 50 ಎಕರೆ ಸ್ಥಳದಲ್ಲಿ ಕಾರ್ಯಕ್ರಮ
ಸುದ್ದಿ360, ದಾವಣಗೆರೆ, ಜು.9: ಈಗಾಗಲೇ ಭಾರೀ ಪ್ರಚಾರ ಗಿಟ್ಟಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 75ನೇ ವರ್ಷದ ಜನ್ಮ ದಿನದ ಅಮೃತ ಮಹೋತ್ಸವ ಆಗಸ್ಟ್ 3ರಂದು ಬೆಳಿಗ್ಗೆ 11ಕ್ಕೆ ದಾವಣಗೆರೆ ನಗರದಲ್ಲಿ ಏರ್ಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಿದ್ಧರಾಮಯ್ಯ ಆಪ್ತರ ತಂಡ ಶನಿವಾರ ದಾವಣಗೆರೆಗೆ ದೌಡಾಯಿಸಿ ಪರಿಶೀಲನೆಯಲ್ಲಿ ತೊಡಗಿದೆ.
ಇಲ್ಲಿನ ರಾಷ್ಟ್ರೀಯ ಹೆದ್ದಾರಿ 48ರ ದಾವಣಗೆರೆ- ಹರಿಹರ ರಸ್ತೆಯ ಬಳಿ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಒಡೆತನದ 50 ಎಕರೆ ಸ್ಥಳದಲ್ಲಿ ಶನಿವಾರ ಸಿದ್ದರಾಮಯ್ಯ ಅಮೃತ ಮಹೋತ್ಸವ ಸಮಿತಿಯ ಮುಖಂಡರ ತಂಡ ಪರಿಶೀಲನೆ ನಡೆಸಿತು.
ಅಮೃತಮಹೋತ್ಸವ ಅಂಗವಾಗಿ ಸ್ಥಳ ಪರಿಶೀಲನೆಗೆ ಬಂದ ತಂಡ ನಗರದ ಬಾಪೂಜಿ ಗೆಸ್ಟ್ ಹೌಸ್ ನಲ್ಲಿ ಪತ್ರಿಕಾಗೋಷ್ಠಿನಡೆಸಿ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಬಸವರಾಜ ರಾಯರೆಡ್ಡಿ ಮಾತನಾಡಿ, ಸಿದ್ದರಾಮಯ್ಯರ ಆತ್ಮೀಯ ಸ್ನೇಹಿತರು, ಕಾಂಗ್ರೆಸ್ ಮುಖಂಡರು, ಅಭಿಮಾನಿಗಳು ಸೇರಿ ಮಾಡುತ್ತಿರುವ ಕಾರ್ಯಕ್ರಮ ಇದಾಗಿದೆ.
ಸಿದ್ದರಾಮಯ್ಯ ಅವರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಅವರಿಗೆ ಎಲ್ಲಾ ವರ್ಗದವರು ಅಭಿಮಾನಿಗಳಿದ್ದಾರೆ. ಕೆಲ ವರ್ಗದವರು, ಜನರು ಹುಟ್ಟುಹಬ್ಬ ಆಚರಣೆಗೆ ಮುಂದಾಗಿದ್ದರು. ಅದಕ್ಕೆ ಸಮ್ಮತಿಸದೆ ಎಲ್ಲಾ ವರ್ಗದ ಜನನಾಯಕ ಆದ ಕಾರಣ ಎಲ್ಲಾ ಸಮುದಾಯದವರೂ ಸೇರಿಕೊಂಡು ಅಭಿಮಾನದಿಂದ ಮಾಡುತ್ತಿದ್ದೇವೆ. ಆರ್. ವಿ. ದೇಶಪಾಂಡೆ ಅವರು ಅಮೃತ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿದ್ದಾರೆ. ಮಹಾದೇವಪ್ಪ ಅವರು ಸ್ವಾಗತ ಸಮಿತಿ ಅಧ್ಯಕ್ಷರಾಗಿದ್ದು, ಕಾರ್ಯಾಧ್ಯಕ್ಷರಾಗಿ ಶಾಮನೂರು ಶಿವಶಂಕರಪ್ಪ ಅವರು ಇದ್ದಾರೆ ಎಂದು ಬಸವರಾಜ ರಾಯರೆಡ್ಡಿ ವಿವರಿಸಿದರು.
ಹೆಚ್. ಸಿ. ಮಹಾದೇವಪ್ಪ ಮಾತನಾಡಿ, ಒಬ್ಬ ನಾಯಕನ ಹುಟ್ಟುಹಬ್ಬ ಆಚರಣೆ ಮಾಡಿದ ನಿದರ್ಶನ ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲಿ ಇಲ್ಲ. ಕಳೆದ 40 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿ ಗುರುತಿಸಿಕೊಂಡಿದ್ದಾರೆ. ಮತ್ತು ಇದಕ್ಕೆ ಮೊದಲೇ ಯುವಜನ ಸಮಾಜವಾದಿ ಸಮಾಜದ ರಾಜ್ಯ ಮುಖಂಡರಾಗಿ, ಸಮಾಜವಾದದ ಸಿದ್ಧಾಂತವನ್ನು ಜನರಲ್ಲಿ ಬಿತ್ತಲು ಶ್ರಮಿಸಿದರು. ಪ್ರೊ. ನಂಜುಂಡಸ್ವಾಮಿ ಅವರ ಜೊತೆ ರೈತ ಚಳವಳಿಯಲ್ಲಿ ಪಾಲ್ಗೊಂಡವರು. ಸಮಗ್ರ ಬದಲಾವಣೆಗೆ ಕರೆಕೊಟ್ಟ ಜಯಪ್ರಕಾಶ್ ನಾರಾಯಣ್ ರ ಜೊತೆ ಸಕ್ರಿಯವಾಗಿ ಭಾಗಿಯಾದವರು. ಸಾಮಾಜಿಕ ಕಾಳಜಿ ಮೂಲಕ ಎಲ್ಲರ ಜನಪ್ರಿಯ ನಾಯಕರಾದವರು ಎಂದು ಹೇಳಿದರು.
ಸಮಿತಿಯ ಅಧ್ಯಕ್ಷ ಕೆ. ಎನ್. ರಾಜಣ್ಣ ಮಾತನಾಡಿ, ಸಿದ್ದರಾಮಯ್ಯರು ಎಂದಿಗೂ ಅದ್ಧೂರಿಯಾಗಿ ಜನುಮದಿನ ಆಚರಿಸಿಕೊಂಡವರಲ್ಲ. ಶುಭ ಸಂದರ್ಭದಲ್ಲಿ ಪಕ್ಷದ ಯಶಸ್ಸು, ಅವರ ಯಶಸ್ಸಿಗಾಗಿ ಕಾರ್ಯಕ್ರಮ
ಮಾಡುತ್ತಿದ್ದೇವೆ. ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್, ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಸರ್ಜೆವಾಲಾ, ಕೆ. ಸಿ. ವೇಣುಗೋಪಾಲ್, ಹರಿಪ್ರಸಾದ್ ಅವರು ಭಾಗವಹಿಸಲಿದ್ದಾರೆ ಎಂದು
ಹೇಳಿದರು.
ಬಿ. ಎಲ್. ಶಂಕರ್ ಮಾತನಾಡಿ ಸಿದ್ದರಾಮಯ್ಯರ ಹುಟ್ಟು ಹಬ್ಬ ನೆಪವಾಗಿದ್ದರೂ, ಕಾಂಗ್ರೆಸ್ ಪಕ್ಷವು ದೇಶಕ್ಕೆ ನೀಡಿರುವ ಕೊಡುಗೆ, ಪ್ರಧಾನ ಮಂತ್ರಿಗಳು, ಮುಖ್ಯಮಂತ್ರಿಗಳು ನೀಡಿರುವ ಕೊಡುಗೆಗೆಳು, ಜಾತ್ಯಾತೀತತೆಗೆ ಬಂದ
ಅಪಾಯ, ಸಂವಿಧಾನ ಅಡಿ ಸ್ವಾಯತ್ತ ಸಂಸ್ಥೆಗಳ ದುರುಪಯೋಗ, ಸಂವಿಧಾನಕ್ಕೆ ಆಗುತ್ತಿರುವ ಅಪಚಾರ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಈ ಬೃಹತ್ ಸಮಾವೇಶದಲ್ಲಿ ಚಿಂಥನ ಮಂಥನ ನಡೆಯಲಿದೆ. ಪಕ್ಷದ ಬಾವುಟ
ಇರುವುದಿಲ್ಲ. ಆದ್ರೆ, ಶೇಕಡಾ 90 ರಷ್ಟು ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಬರಲಿದ್ದಾರೆ. ಈ ಕಾರ್ಯಕ್ರಮದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಜೊತೆ ಈಗಾಗಲೇ ಚರ್ಚೆ ನಡೆಸಲಾಗಿದೆ. ಯಾವುದೇ ಗೊಂದಲ ಇಲ್ಲ. ಇನ್ನೆರಡು ದಿನಗಳಲ್ಲಿ ನಾವೆಲ್ಲರೂ ಸೇರಿ ಶಿವಕುಮಾರ್ ಅವರಿಗೆ ಆಹ್ವಾನ ನೀಡುತ್ತೇವೆ ಎಂದು ತಿಳಿಸಿದರು.
ಈ ವೇಳೆ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಡಾ.ಜಯಮಾಲ, ಮಾಜಿ ಸಚಿವೆ ಉಮಾಶ್ರೀ, ವಿಧಾನ ಪರಿಷತ್ ಮಾಜಿ ಸಭಾಪತಿಗಳಾದ ವಿ.ಆರ್.ಸುದರ್ಶನ್, ರಾಜ್ಯ ಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ, ಮಾಜಿ ಸಚಿವ ಹೆಚ್.ಆಂಜನೇಯ, ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಕಾಂಗ್ರೆಸ್ ನಾಯಕರಾದ ಸುಭಾಷ್ ಚಂದ್ರ, ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಸೇರಿದಂತೆ ಇತರೆ ಮುಖಂಡರು, ಕಾರ್ಯಕರ್ತರು ಇದ್ದರು.