ಸುಗಮ ಸಂಚಾರಕ್ಕೆ ಕ್ರಮ: ಎಸ್ ಪಿ ರಿಷ್ಯಂತ್

ಸುದ್ದಿ360 ದಾವಣಗೆರೆ.ಜು.05: ದಿನೇ ದಿನೇ ಹೆಚ್ಚುತ್ತಿರುವ ಜನಸಂಖ್ಯೆಯ ಜೊತೆಗೆ ಅಗತ್ಯ ವಾಹನಗಳ ಸಂಖ್ಯೆಯೂ ಹೆಚ್ಚುತ್ತಿದೆ. ಇದು ರಸ್ತೆಗಳಲ್ಲಿ ವಾಹನದಟ್ಟಣೆಗೂ ಕಾರಣವಾಗಿದೆ. ಇದರ ಜೊತೆಗೆ ಸಂಚಾರ ನಿಯಮ ಪಾಲಿಸದಿರುವ ಮತ್ತು ಎಲ್ಲೆಂದರಲ್ಲಿ ವಾಹನ ನಿಲ್ಲಿಸುವವರಿಗೆ ದಂಡ ವಿಧಿಸುವ ಮತ್ತು ಸುಗಮ ಸಂಚಾರಕ್ಕೆ ಇಲಾಖೆ ಕೈಗೊಂಡಿರುವ ಕ್ರಮಗಳ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಸಿ.ಬಿ. ರಿಷ್ಯಂತ್ ಮಾಹಿತಿ ನೀಡಿದರು.

ನಗರದ ಬಡಾವಣೆ ಪೊಲೀಸ್ ಠಾಣೆ ಆವರಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡೆಂಟಲ್ ಕಾಲೇಜು, ಹದಡಿ, ಶಾಮನೂರು ರಸ್ತೆ ಸೇರಿ ನಗರದ ಪ್ರಮುಖ ಮಾರ್ಗಗಳ ಎರಡೂ ಬದಿ ವಾಹನ ನಿಲ್ಲಿಸುವುದರಿಂದ  ಇತರೆ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಕಾರಣ ರಸ್ತೆಯ ಒಂದು ಬದಿ ನಿಲುಗಡೆ ವ್ಯವಸ್ಥೆ ಮಾಡಲಾಗಿದ್ದು, ನೋ ಪಾರ್ಕಿಂಗ್‌ನಲ್ಲಿ ವಾಹನ ನಿಲ್ಲಿಸುವವರಿಗೆ ಸ್ಥಳದಲ್ಲೇ ದಂಡ ವಿಧಿಸಲಾಗುತ್ತಿದೆ ಎಂದು ತಿಳಿಸಿದರು.

ವಾಹನ ಸವಾರರು ತಮ್ಮ ವಾಹನಗಳನ್ನು ಎಲ್ಲೆಂದರಲ್ಲಿ ಅಂಗಡಿ, ಹೋಟೆಲ್ ಮತ್ತು ಇತರೆಡೆಗಳಲ್ಲಿ ಹೋಗುವಾಗ ಕಿರಿದಾದ ರಸ್ತೆಗಳಲ್ಲಿಯೇ ತಮ್ಮ ವಾಹನ ನಿಲ್ಲಿಸಿ ಹೋಗುತ್ತಾರೆ. ಇದು ಬೇರೆ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತದೆ. ನಗರಾದ್ಯಂತ ಇಂತಹ ಸಮಸ್ಯೆ ಸಮಸ್ಯೆ ಎದುರಾಗುವಂತಹ 36 ಸ್ಥಳಗಳನ್ನು ಗುರುತಿಸಲಾಗಿದ್ದು, ಈ ಸ್ಥಳಗಳಲ್ಲಿ ಇಲಾಖೆ ಸಿಬ್ಬಂದಿ ಗಸ್ತಿನಲ್ಲಿ ಇರುತ್ತಾರೆ ಮತ್ತು ಸಂಚಾರಕ್ಕೆ ತೊಂದರೆ ಮಾಡುವ ವಾಹನಗಳ ಮಾಲಿಕರ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ ಎಂದರು.

ಕಳೆದ ಆರು ತಿಂಗಳಲ್ಲಿ 1.03 ಕೋಟಿ ದಂಡ ಸಂಗ್ರಹ

ಕಳೆದ ಆರು ತಿಂಗಳ ಅವಧಿಯಲ್ಲಿ (ಜೂ.30-2022ರವರೆಗೆ) ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ 25,000 ಪ್ರಕರಣಗಳು ದಾಖಲೆಗೊಂಡಿವೆ. ಇದರಿಂದ 1,03,91,400 ರೂ. ದಂಡ ಸಂಗ್ರಹಿಸಲಾಗಿದೆ. ಈ ಪೈಕಿ 83 ತ್ರಿಬಲ್ ರೈಡಿಂಗ್ ಪ್ರಕರಣಗಳಿಂದ 2,59,200 ರೂ. ದಂಡ ಸಂಗ್ರಹಿಸಲಾಗಿದೆ. ಅಲ್ಲದೆ ಹೆಚ್ಚು ಸದ್ದು ಮಾಡುವ ಡಿಫೆಕ್ಟಿವ್ ಸೈಲೆನ್ಸರ್ ಬಳಸಿದವರ ವಿರುದ್ಧ 52 ಪ್ರಕರಣ ದಾಖಲಾಗಿದ್ದು, ಅಷ್ಟೂ ಸೈಲೆನ್ಸರ್ ವಶಕ್ಕೆ ಪಡೆಯಲಾಗಿದೆ ಎಂದು ಎಸ್ ಪಿ ಮಾಹಿತಿ ನೀಡಿದರು.

ಹೈವೆಯಲ್ಲಿ ಲೈನ್ ಶಿಸ್ತು

ಜಿಲ್ಲೆಯ ವ್ಯಾಪ್ತಿಗೆ ಬರುವ ಒಟ್ಟು 50 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ತಡೆ ಹಾಗೂ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು ಲೈನ್ ಡಿಸಿಪ್ಲೀನ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ನಿಧಾನವಾಗಿ ಚಲಿಸುವ ಟ್ರಕ್ ಮತ್ತಿತರ ಭಾರೀ ವಾಹನಗಳು ಕಡ್ಡಾಯವಾಗಿ ರಸ್ತೆಯ ಎಡ ಭಾಗದ ಲೈನ್ ನಲ್ಲಿ, ವೇಗವಾಗಿ ಸಾಗುವ ಕಾರು ಮತ್ತಿತರ ವಾಹನಗಳು ಬಲಭಾಗದ ಲೈನ್ ನಲ್ಲಿ ಸಂಚರಿಸುವಂತೆ ಸೂಚಿಸಲಾಗಿದೆ.  ಡಿಜಿ ಸೂಚನೆಯಂತೆ ಜಿಲ್ಲೆಯಲ್ಲೇ ಮೊದಲ ಬಾರಿ ಪ್ರಾಯೋಗಿಕವಾಗಿ ಈ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.

ಮಂಗಳಮುಖಿಯರು ಜೇಬಿಗೆ ಕೈಹಾಕಿದ್ರೆ ದೂರು ಕೊಡಿ!

ಹೊರವಲಯದ ಬಾಡ ಕ್ರಾಸ್ ಬಳಿ ಮಂಗಳಮುಖಿಯರು ಸಾರ್ವಜನಿಕರ ವಾಹನ ಅಡ್ಡಗಟ್ಟಿ, ಹಣ ಕೇಳುವುದು, ಮೈ ಮುಟ್ಟುವುದು, ಜೇಬಿಗೆ ಕೈ ಹಾಕಿ ಹಣ ತೆಗೆದುಕೊಳ್ಳುತ್ತಿದ್ದಾರೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಈ ಸಂಬಂಧ ಅವರೊಂದಿಗೆ ಮಾತುಕತೆ ನಡೆಸಿದ್ದು, ಹಣ ಕೇಳುವ ನೆಪದಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡದಂತೆ ಎಚ್ಚರಿಕೆ ನೀಡಲಾಗಿದೆ. ಆದರೂ ಇಂತಹ ಘಟನೆ ನಡೆದಾಗ ದೂರು ನೀಡಿದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ರಿಷ್ಯಂತ್ ತಿಳಿಸಿದ್ದಾರೆ.

ಅಪಘಾತ ಮತ್ತು ಸಂಚಾರ ನಿಯಮ ಉಲ್ಲಂಘನೆಯಂತಹ ಪ್ರಕರಣಗಳಲ್ಲಿ ದಂಡ ವಿಧಿಸುವುದಕ್ಕಿಂತಲೂ ಹೆಚ್ಚಾಗಿ ವಾಹನ ಜಪ್ತಿ ಹಾಗೂ ಚಾಲನಾ ಪರವಾನಗಿ ಅಮಾನತು ಮಾಡಲು ಆದ್ಯತೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಮಾರಣಾಂತಿಕ ರಸ್ತೆ ಅಪಘಾತ ಎಸಗಿದ 8 ಚಾಲಕರ ಡಿಎಲ್ ಸೇರಿದಂತೆ ಒಟ್ಟು 76 ಜನರ ಡಿಎಲ್ ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಎಸ್‌ಪಿ ರಾಮಗೊಂಡ ಬಸರಗಿ, ಡಿವೈಎಸ್ ಪಿ  ನರಸಿಂಹ ತಾಮ್ರಧ್ವಜ, ಸಂಚಾರ ಸಿಪಿಐ ಅನಿಲ್ ಇತರರಿದ್ದರು.

admin

admin

Leave a Reply

Your email address will not be published. Required fields are marked *

error: Content is protected !!