ಜು.14ರಿಂದ 17ರವರೆಗೆ ದಾವಣಗೆರೆ ಜಿಲ್ಲಾ ಸಂಚಾರ
ಸುದ್ದಿ360, ದಾವಣಗೆರೆ, ಜು.13: ಭಾರತದ 75ನೇ ಸ್ವಾತಂತ್ರ‍್ಯೋತ್ಸವದ ಅಮೃತ ಮಹೋತ್ಸವ ನಿಮಿತ್ತ ಯುವಾ ಬ್ರಿಗೇಡ್ ವತಿಯಿಂದ ಸ್ವರಾಜ್ಯಕ್ಕೆ ಮುಕ್ಕಾಲು ನೂರು ಸಂಭ್ರಮಕ್ಕೆ ಕನ್ನಡ ತೇರು ಹೆಸರಿನ ತೇರು ದಾವಣಗೆರೆ ಜಿಲ್ಲೆಯಲ್ಲಿ ಜುಲೈ 14ರಂದು ದಾವಣಗೆರೆ ಜಿಲ್ಲೆ ಪ್ರವೇಶಿಸಿ 17ರವರೆಗೆ ಸಂಚರಿಸಲಿದೆ ಎಂದು ಯುವಾ ಬ್ರಿಗೇಡ್ ನ ಜಿಲ್ಲಾ ಸಂಚಾಲಕ ಕೆ.ಎಸ್. ಗಜೇಂದ್ರ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಜೂನ್ 27ರಂದು ಬೀಳಗಿಯಿಂದ ಸಂಚಾರ ಆರಂಭಿಸಿರುವ ತೇರು 100 ದಿನಗಳ ಕಾಲ ಕನ್ನಡ ತೇರು ರಾಜ್ಯಾದ್ಯಂತ 100 ದಿನಗಳ ಕಾಲ ರಾಜ್ಯದೆಲ್ಲೆಡೆ ಸಂಚರಿಸಲಿದೆ. ರಾಣೆಬೆನ್ನೂರಿನಿಂದ ಸಾಗಿ ಬರುತ್ತಿರುವ ಕನ್ನಡ ತೇರು ಜು.14 ರಂದು ದಾವಣಗೆರೆ ಜಿಲ್ಲೆಯ ಹರಿಹರ, ಬಸಾವಾಪಟ್ಟಣ, ಸಂಗಾಹಳ್ಳಿ ಪ್ರದೇಶಗಳಲ್ಲಿ ಸಂಚರಿಸಲಿದ್ದು, 15ರಂದು ಹರಪನಹಳ್ಳಿ, ಜಗಳೂರು ಪ್ರದೇಶಗಳಲ್ಲಿಯೂ ಮತ್ತು 16 ರಂದು ದಾವಣಗೆರೆ ನಗರದಲ್ಲಿ ಸಂಚರಿಸಲಿದೆ. ಜು17ರಂದು ವಿಶೇಷವಾಗಿ ಐತಿಹಾಸಿಕ ಪ್ರದೇಶಗಳಲ್ಲಿ ಸಾಗಲಿದ್ದು, ಮಾಯಕೊಂಡ, ಸಂತೆಬೆನ್ನೂರು ಹೊದಿಗೆರೆ ಪ್ರದೇಶಗಳಲ್ಲಿ ಸಂಚರಿಸಲಿದ್ದು, ನಂತರ 18ರಿಂದ ಚಿತ್ರದುರ್ಗದಲ್ಲಿ ಸಂಚಾರ ಕೈಗೊಳ್ಳಲಿದೆ ಎಂದು ತಿಳಿಸಿದರು.
ತೇರಿನ ವಿಶೇಷ
ಸ್ವರಾಜ್ಯಕ್ಕೆ ಮುಕ್ಕಾಲು ನೂರು ಸಂಭ್ರಮಕ್ಕೆ ಕನ್ನಡ ತೇರು ಹೆಸರಿನಿಂದ ಸಾಗುವ ತೇರಿನಲ್ಲಿ ಎಲ್ಇಡಿ ಟಿವಿ ಮೂಲಕ 13 ನಿಮಿಷದ ಸಾಕ್ಷ್ಯ ಚಿತ್ರವನ್ನು ಪ್ರದರ್ಶಿಸಲಾಗುವುದು. ನಮ್ಮ ಸ್ವಾತಂತ್ರ‍್ಯ ಸೇನಾನಿಗಳ ತ್ಯಾಗ, ಬಲಿದಾನವನ್ನು ಸ್ಮರಿಸುವ ನಿಟ್ಟಿನಲ್ಲಿಈ ಕಾರ್ಯಕ್ರಮ ಮೂಡಿಬಂದಿದ್ದು, ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಹೋರಾಟಗಾರರ ಕುರಿತು ಹಳ್ಳಿ ಹಳ್ಳಿಗಳಿಗೆ ತಲುಪಿಸುವ ಮೂಲಕ ಭವಿಷ್ಯದ ಪ್ರಜೆಗಳಿಗೆ ತಿಳಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ಗಜೇಂದ್ರ ಮಾಹಿತಿ ನೀಡಿದರು.
ಜು.16 ದಾವಣಗೆರೆ ನಗರದಲ್ಲಿ
ಜು. 16 ರ ಶನಿವಾರ ಬೆಳಿಗ್ಗೆ 8 ಗಂಟೆಗೆ ನಗರ ದೇವತೆ ಶ್ರೀ ದುರ್ಗಾಂಬಿಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ನಗರ ಮಟ್ಟದ ಶಾಲಾ ಕಾಲೇಜುಗಳಿಗೆ ತೆರಳಿ ಮಕ್ಕಳಿಗೆ ಸ್ವಾತಂತ್ರ‍್ಯ ಹೋರಾಟಗಾರರ ಕುರಿತು ಮಾಹಿತಿ ನೀಡಲಿದ್ದಾರೆ. ಅಂದು ಸಂಜೆ 5-30 ಕ್ಕೆ ಎಸ್. ನಿಜಲಿಂಗಪ್ಪ ಬಡಾವಣೆಯಲ್ಲಿರುವ ಅಮರ್ ಜವಾನ್ ಉದ್ಯಾನವನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಜು. 17ರ ಭಾನುವಾರದಂದು ಜಿಲ್ಲೆಯ ಐತಿಹಾಸಿಕ ಸ್ಥಳಗಳಾದ ಮಾಯಕೊಂಡ, ಸಂತೆಬೆನ್ನೂರು, ಹೊದಿಗೆರೆಯಲ್ಲಿ ಸಂಚರಿಸಲಿದೆ.
ಸುದ್ದಿಗೋಷ್ಠಿಯಲ್ಲಿ ಹೆಚ್.ಎಂ. ಚೇತನ್, ನಂದೀಶ್, ಎಸ್. ಗೋಪಾಲ್ ಎಂ, ಭೀಮಾ ಎ. ಇತರರು ಇದ್ದರು.