ಶಾಸಕ ಎಂಪಿಆರ್ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ
ಸುದ್ದಿ360 ಹೊನ್ನಾಳಿ,ಜು.04: ರಾಜಸ್ಥಾನದ ಟೈಲರ್ ಕನ್ಹಯ್ಯಲಾಲ್ ಹತ್ಯೆ ಪ್ರಕರಣ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪ್ರಾಣ ಬೆದರಿಕೆ ಹಾಕಿರುವುದನ್ನು ಖಂಡಿಸಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ನೇತೃತ್ವದಲ್ಲಿ ತಾಲೂಕು ಬಿಜೆಪಿ ಘಟಕದಿಂದ ಸೋಮವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಇಲ್ಲಿನ ಹಿರೇಕಲ್ಮಠದ ಶಾಸಕರ ಮನೆಯಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಶಾಸಕರನ್ನೊಳಗೊಂಡಂತೆ ಬಿಜೆಪಿ ಕಾರ್ಯಕರ್ತರು ಜಿಟಿ ಜಿಟಿ ಮಳೆಯಲ್ಲಿಯೆ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಅಲ್ಲಿಂದ ತಾಲೂಕು ಕಚೇರಿವರೆಗೆ ತೆರಳಿ ತಹಸೀಲ್ದಾರ್ ರಶ್ಮಿ ಜೆ.ಹಾಲೇಶ್‌ಗೆ ಮನವಿ ಸಲ್ಲಿಸಿದರು.
ರಾಜಸ್ಥಾನದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಆಗ್ರಹ
ಈ ವೇಳೆ ಮಾತನಾಡಿದ ಶಾಸಕ ರೇಣುಕಾಚಾರ್ಯ, ಕನ್ಹಯ್ಯಲಾಲ್ ರನ್ನು ಕೊಲೆ ಮಾಡಿರುವ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರಿಗೆ ಪ್ರಾಣ ಬೆದರಿಕೆ ಹಾಕಿದವರನ್ನು ಬಂಧಿಸಿದರೆ ಸಾಲದು, ಅವರನ್ನು ಗುಂಡಿಕ್ಕಿ ಕೊಲ್ಲಬೇಕು. ಕನ್ಹಯ್ಯಲಾಲ್ ತನಗೆ ಜೀವ ಬೆದರಿಕೆ ಇದೆ ಎಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರೂ ಗಂಭೀರವಾಗಿ ತೆಗೆದುಕೊಳ್ಳದ ಕಾಂಗ್ರೆಸ್ ಈ ಹತ್ಯೆಗೆ ನೇರ ಹೊಣೆ. ಕೂಡಲೇ ರಾಷ್ಟ್ರಪತಿಗಳು ರಾಜಸ್ಥಾನದ ಕಾಂಗ್ರೆಸ್ ಸರಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಜಾರಿ ಮಾಡುವಂತೆ ಆಗ್ರಹಿಸಿದರು.
ದೇಶದ್ರೋಹಿಗಳ ವಿರುದ್ಧ ನಮ್ಮ ಹೋರಾಟ
ಎಲ್ಲಾ ಮುಸ್ಲಿಂಮರು ದೇಶ ದ್ರೋಹಿಗಳಲ್ಲ, ದೇಶದ್ರೋಹದ ಕೆಲಸ ಮಾಡುವವರ ವಿರುದ್ಧ ನಮ್ಮ ಹೋರಾಟ. ದೇಶದ ವಿಚಾರ ಬಂದಾಗ ನಮ್ಮ ಪ್ರಾಣವನ್ನು ನೀಡಲು ನಾವು ಸಿದ್ಧ. ರಾಹುಲ್‌ಗಾಂಧಿಯವರನ್ನು ಇಡಿ ಕಚೇರಿಗೆ ಕರೆದ ತಕ್ಷಣ ಪ್ರತಿಭಟನೆ ಮಾಡುವವರು ಕನ್ಹಯ್ಯ ಲಾಲ್ ಹತ್ಯೆ ಮಾಡಿದಾಗ ಏಕೆ ಪ್ರತಿಭಟನೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಕೆ. ಸುರೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂತರಾಜ್ ಪಟೇಲ್, ಶಿವಾನಂದ್, ತಾಲೂಕು ಪ್ರಧಾನ ಕಾರ್ಯದರ್ಶಿ ಸಿಕೆ ರವಿ, ಪುರಸಭೆ ಅಧ್ಯಕ್ಷ ರಂಗಪ್ಪ, ಪುರಸಭೆ ಸದಸ್ಯರು, ತಾಪಂ ಮಾಜಿ ಅಧ್ಯಕ್ಷರು ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.