ಹರಿಹರ ಅಭಿವೃದ್ಧಿಗಾಗಿ ಅನುದಾನ ನೀಡಲು ಬಿಎಸ್ ಪಿ ಆಗ್ರಹ

ಸುದ್ದಿ360, ದಾವಣಗೆರೆ, ಜು.14: ಹರಿಹರ ತಾಲ್ಲೂಕಿನ ಅಭಿವೃದ್ಧಿಯ ವಿಚಾರವಾಗಿ ಉಸ್ತುವಾರಿ ಸಚಿವರಿಗೆ ಮನವಿ ಕೊಡಲು ಹೋದಾಗ ಸೂಕ್ತ ಸ್ಪಂದನೆ ವ್ಯಕ್ತಪಡಿಸದೇ ಹೋದದ್ದು ಖಂಡನೀಯ. ಇಂತಹ ಸಚಿವರನ್ನು ಬದಲಿಸಬೇಕು. ಅಲ್ಲದೇ ಹರಿಹರ ತಾಲೂಕಿನ ಅಭಿವೃದ್ಧಿಗೆ ತಕ್ಷಣವೇ ಸ್ಪಂದಿಸುವ ಮೂಲಕ ಅನುದಾನ ಬಿಡುಗಡೆ ಮಾಡುವಂತೆ ಬಿ ಎಸ್ ಪಿ ಪಕ್ಷ ದ ಜಿಲ್ಲಾಧ್ಯಕ್ಷ ಡಿ. ಹನುಮಂತಪ್ಪ ಆಗ್ರಹಿಸಿದರು.

ನಗರದಲ್ಲಿ ಗುರುವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ನೂ ಒಂದು ವಾರದೊಳಗೆ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ದಾವಣಗೆರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಲಾಗುವುದು. ಅಲ್ಲದೇ ಜಿಲ್ಲಾ ಉಸ್ತುವಾರಿ ಸಚಿವರು ದಾವಣಗೆರೆ ಜಿಲ್ಲೆಗೆ ಬಂದರೆ ಕಪ್ಪು ಬಾವುಟ ಪ್ರದರ್ಶನ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬುಧವಾರ ಜಿಲ್ಲಾ ಉಸ್ತುವಾರಿ ಸಚಿವರು ಹರಿಹರಕ್ಕೆ ಬಂದ ವೇಳೆ ತಾಲೂಕಿನ ಅಭಿವೃದ್ಧಿ ಬಗ್ಗೆ ಪ್ರಶ್ನಿಸಲಾಯಿತು. ಆದರೆ ಯಾವುದಕ್ಕೂ ಸಮಂಜಸ ಉತ್ತರ ನೀಡಲಿಲ್ಲ. ಈ ವೇಳೆ ಬಿಎಸ್ ಪಿ ಪಕ್ಷದ ಕಾರ್ಯಕರ್ತರು, ಮುಖಂಡರು ಸೇರಿದಂತೆ ಎಲ್ಲರೂ ಭೈರತಿ ಬಸವರಾಜ್ ಅವರಿಗೆ ಘೇರಾವ್ ಹಾಕಲಾಯಿತು. ಈ ವೇಳೆ ಹರಿಹರದ ಅಭಿವೃದ್ಧಿಗೆ 30 ಕೋಟಿ ನೀಡಿರುವುದಾಗಿ ಹೇಳಿದರು. ಅದರೆ, ಅವರು ಕೊಟ್ಟ ಹಣ ತುಂಗಾರತಿಯ ಗೋಪುರ ನಿರ್ಮಾಣ ಕಾರ್ಯಕ್ಕೆ ಎಂದು ತಿಳಿಸಲಾಯಿತು. ಆದರೂ ಉಸ್ತುವಾರಿ ಸಚಿವರು ಏನನ್ನೂ ಹೇಳದೆ ಹೋಗಿದ್ದು ಸರಿಯಲ್ಲ ಎಂದು ಕಿಡಿಕಾರಿದರು.

ಬೇರೆ ಜಿಲ್ಲೆಯ ಶಾಸಕರನ್ನೇ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಿದ್ದಾರೆ. ಜಿಲ್ಲೆಯಲ್ಲಿ 5 ಜನ ಬಿಜೆಪಿ ಶಾಸಕರಿದ್ದರೂ ಒಬ್ಬರಿಗೂ ಸಚಿವರಾಗುವ ಅವಕಾಶವಾಗಿಲ್ಲವೇ ಎಂದು ಪ್ರಶ್ನಿಸಿದ ಅವರಯ, ಸಂವಿಧಾನ ಉಳಿವಿಗಾಗಿ, ಸಂವಿಧಾನದ ಸಮಗ್ರ ಜಾರಿಗಾಗಿ, ಸಮಾನತೆಗಾಗಿ, ಜಿಲ್ಲೆಯ ಸಂಪೂರ್ಣ ಅಭಿವೃದ್ಧಿಗಾಗಿ ಬಹುಜನ ಸಮಾಜ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವರಿಗೆ ಹರಿಹರ ನಗರದ ನಗರಸಭೆಯ ಮುಂಭಾಗದಲ್ಲಿ ತಾಲ್ಲೂಕಿನ ಅಭಿವೃದ್ಧಿ ಬಗ್ಗೆ ಗಮನ ಸೆಳೆಯಲು ಮನವಿ ಸಲ್ಲಿಸಲು ಹೋದಾಗ ಮನವಿಯನ್ನು ಸ್ವೀಕರಿಸುವಷ್ಟು ತಾಳ್ಮೆ ಇಲ್ಲದೆ ವರ್ತಿಸಿದ್ದು ಹರಿಹರ ನಗರಸಭಾ ಅಧ್ಯಕ್ಷರು, ನಗರಸಭೆ ಸದಸ್ಯರು ನಗರದ ಅಭಿವೃದ್ಧಿ ಬಗ್ಗೆ ಚರ್ಚಿಸಲು ಮನವಿಕೊಡಲು ಬಂದು ಕೈ ಮುಗಿದು ಕೇಳಿದರೂ ಮನವಿಯನ್ನು ಕೈಯಲ್ಲಿ ಹಿಡಿದು ಮಡಿಚಿಕೊಂಡು ಮಾತನಾಡದೆ ಮುನ್ನಡೆದರು. ಇಂತಹ ವರ್ತನೆ ಸರಿಯಲ್ಲ ಎಂದು ಅಕ್ರೋಶ ವ್ಯಕ್ತ ಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಹಮ್ಮದ್ ಶೇಕ್ ಇದ್ದರು.

admin

admin

Leave a Reply

Your email address will not be published. Required fields are marked *

error: Content is protected !!