ದಾವಣಗೆರೆ, ಏ.1: ಹುತಾತ್ಮರ ಆದರ್ಶಗಳನ್ನು ಮುನ್ನಡೆಸಲು ಎಲ್ಲರೂ ಸೇರಿ ಪಣತೊಡೋಣ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಕಾಂ. ಆವರಗೆರೆ ಚಂದ್ರು ಹೇಳಿದರು.
ಸಿ ಪಿ ಐ ಮತ್ತು ಎ ಐ ಟಿ ಯು ಸಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ನಗರಕ್ಕೆ ಸಮೀಪದ ಆವರಗೆರೆಯಲ್ಲಿ ಇಂದು ನಡೆದ ಹುತಾತ್ಮ ಕಾಂ ಶೇಖರಪ್ಪ, ಕಾಂ ಸುರೇಶ್ ರವರ 53 ನೇ ವರ್ಷದ ಹುತಾತ್ಮರ ದಿನಾಚರಣೆ ಮತ್ತು ಮಾಜಿ ಶಾಸಕರಾದ ಕಾಂ. ಪಂಪಾಪತಿ ಯವರ 21 ನೇ ವರ್ಷದ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಂ ಶೇಖರಪ್ಪ ಕಾಂ ಸುರೇಶ್ ರವರು ಕಾರ್ಮಿಕರ ಸಂಘಟನೆ ಕಟ್ಟಿ ಕಾರ್ಮಿಕರ ಹಕ್ಕುಗಳನ್ನು ಕೊಡಿಸುವಲ್ಲಿ ಮುಂದಾದಾಗ ಮಾಲಿಕರ ಕುತಂತ್ರಕ್ಕೆ ಬಲಿಯಾಗಿ ಹುತಾತ್ಮರಾದರು.ಮತ್ತು ಸಾಮಾನ್ಯ ಕಾರ್ಮಿಕರಾಗಿದ್ದ ಪಂಪಾಪತಿಯವರು ನಗರಸಭಾ ಸದಸ್ಯರಾಗಿ ನಗರಸಭಾ ಅಧ್ಯಕ್ಷರಾಗಿ ನಂತರ ದಾವಣಗೆರೆ ವಿಧಾನಸಭಾ ಕ್ಷೇತ್ರಕ್ಕೆ ಮೂರು ಬಾರಿ ಶಾಸಕರಾಗಿ ಜನ ಪರವಾಗಿ ಕೆಲಸ ಮಾಡಿ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವಂತಹ ಕೆಲಸ ಮಾಡಿದ್ದಾರೆ ಎಂದರು.
ಎ ಐ ಟಿ ಯು ಸಿ ಜಿಲ್ಲಾಧ್ಯಕ್ಷರಾದ ಕಾಂ. ರಾಘವೇಂದ್ರ ನಾಯರಿ ಮಾತನಾಡಿ ಹಿಂದೆಂದಿಗಿಂತಲೂ ಇಂದು ಕಾರ್ಮಿಕ ವರ್ಗ ಬಹಳ ಎಚ್ಚರಿಕೆಯಿಂದ ಮುನ್ನಡೆಯಬೇಕಾಗಿದೆ. ಆಳುವ ಸರ್ಕಾರಗಳು ಮತ್ತು ಮಾಲಿಕ ವರ್ಗದಿಂದ ನಿರಂತರವಾಗಿ ದುಡಿಯುವ ಜನರ ಶೋಷಣೆ ಎಲ್ಲಾ ಕಾಲದಲ್ಲೂ ನಡೆದುಕೊಂಡು ಬಂದಿದೆ ಆದ್ದರಿಂದ ಇಂದು ದುಡಿಯುವ ವರ್ಗ ಹೆಚ್ಚು ಪ್ರಜ್ಞಾವಂತರಾಗಿ ಮುನ್ನಡೆದು, ತ್ಯಾಗ ಬಲಿದಾನಗಳಿಂದ ಕಟ್ಟಿದ ನಮ್ಮ ಸಂಘಟನೆಗಳನ್ನು ಹೆಚ್ಚು ಬಲಪಡಿಸುವುದರ ಮೂಲಕ ಮುನ್ನಡೆಸಿಕೊಂಡು ಹೋಗಬೇಕಾಗಿದೆ ಎಂದರು.
ಬ್ಯಾಂಕ್ ನೌಕರರ ಸಂಘಟನೆಯ ಜಿಲ್ಲಾಧ್ಯಕ್ಷರಾದ ಕಾಂ ಬಿ ಆನಂದಮೂರ್ತಿ ಕಾಮ್ರೇಡ್ ಷಣ್ಮುಖ ಸ್ವಾಮಿ, ಎಂ ಬಿ ಶಾರದಮ್ಮ, ಸಿಪಿಐ ಜಿಲ್ಲಾ ಸಹಕಾರ್ಯದರ್ಶಿ ಕಾಂ ಅವರಗೆರೆ ವಾಸು ಇತರರು ಮಾತನಾಡಿದರು. ಎ ಐ ಟಿ ಯು ಸಿ ರಾಜ್ಯ ವರ್ಕಿಂಗ್ ಕಮಿಟಿ ಸದಸ್ಯರಾದ ಕಾಮ್ರೆಡ್ ಆನಂದ ರಾಜ್ ರವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಿಪಿಐ ಜಿಲ್ಲಾ ಸಹಕಾರ್ಯದರ್ಶಿ ಕಾಂ ಹೆಚ್ ಜಿ ಉಮೇಶ್, ಟಿ ಎಸ್ ನಾಗರಾಜ್, ಜಿಎಸ್ ಬಸವರಾಜ್, ವಿ ಲಕ್ಷ್ಮಣ, ಜಿ ಎಲ್ಲಪ್ಪ, ಜ್ಯೋತಿ ಲಕ್ಷ್ಮಿ,ಟಿ ಹೆಚ್ ನಾಗರಾಜ್,ಜಯಪ್ಪ,ಕೆಜಿ ಶಿವಮೂರ್ತಿ, ಎಸ್ ಎಸ್ ಮಲ್ಲಮ್ಮ, ವಿಶಾಲಾಕ್ಷಿ,ಮಹಮದ್ ರಫೀಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಇಫ್ಟಾ ಕಲಾವಿದರಾದ ಐರಣಿ ಚಂದ್ರು ಕುಕ್ಕವಾಡ ಮಹಾಂತೇಶ್ ಸ್ನೇಹಿತರು ಜಾಗೃತಿ ಗೀತೆ ಹಾಡಿದರು, ಕೆ ಬಾನಪ್ಪ ಎಲ್ಲರನ್ನೂ ಸ್ವಾಗತಿಸಿ ಕಾರ್ಯಕ್ರಮ ನಿರೂಪಣೆ ಮಾಡಿದರು ಕೊನೆಯಲ್ಲಿ ಎ.ತಿಪ್ಪೇಶ್ ವಂದಿಸಿದರು.