ಸುಸುದ್ದಿ360, ದಾವಣಗೆರೆ, ಜು.08: ಕೇಂದ್ರ ಸರ್ಕಾರವು ಗೃಹ ಬಳಕೆಯ ಗ್ಯಾಸ್ ಸಿಲೆಂಡರ್ ಬೆಲೆ ಏರಿಕೆ ನಿರ್ಧಾರ ಖಂಡಿಸಿ ಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಸಮಿತಿಯಿಂದ ನಗರದ ಗಾಂಧಿ ವೃತ್ತದ ಬಳಿ ಗುರುವಾರ ಪ್ರತಿಭಟಿಸಲಾಯಿತು.
ಕೇಂದ್ರ ಸರ್ಕಾರ ಬೆಲೆ ಏರಿಕೆ ನೀತಿಯ ವಿರುದ್ಧ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗುತ್ತಾ ಆಗ್ರೋಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಎಸ್.ಯು.ಸಿ.ಐ (ಸಿ) ಜಿಲ್ಲಾ ಸಂಘಟನಾ ಸಮಿತಿಯ ಕಾರ್ಯದರ್ಶಿ ಕಾಂ. ಕೈದಾಳೆ ಮಂಜುನಾಥ್ ರವರು ಮಾತನಾಡುತ್ತಾ “ಕೇಂದ್ರ ಸರ್ಕಾರ ಗೃಹ ಬಳಕೆಯ ಗ್ಯಾಸ್ ಸಿಲೆಂಡರ್ ಬೆಲೆಯನ್ನು ಮತ್ತೊಮ್ಮೆ ರೂ.50ರಷ್ಟು ಹೆಚ್ಚಳ ಮಾಡಿದೆ. ಇತ್ತೀಚಗಷ್ಟೆ ಮಾರ್ಚ್ ತಿಂಗಳಲ್ಲಿ ರೂ.50ರಷ್ಟು ಹೆಚ್ಚಳ ಮಾಡಿತ್ತು ಮತ್ತು ಮೇ ತಿಂಗಳಲ್ಲಿ 50ರೂ ಗಳು ಹೆಚ್ಚು ಮಾಡಿದ್ದನ್ನು ಖಂಡಿಸಿ ಪ್ರತಿಭಟನೆ ಮಾಡಿದ್ದೆವು. ಒಟ್ಟಾರೆ ಈಗ ಗೃಹ ಬಳಕೆಯ ಗ್ಯಾಸ್ ಸಿಲೆಂಡರ್ ಬೆಲೆ ರೂ.1050 ದಾಟಿದೆ. ಅಲ್ಲದೆ ವಾಣಿಜ್ಯ ಬಳಕೆಯ ಸಿಲೆಂಡರ್ ಬೆಲೆಯನ್ನು ಸಹ ಕ್ರಮವಾಗಿ ರೂ250, ರೂ.102ರಷ್ಟು ಇತ್ತೀಚಗಷ್ಟೆ ಹೆಚ್ಚಳ ಮಾಡಿತ್ತು. ಈಗಾಗಲೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನರಿಗೆ ಮೋದಿ ಸರ್ಕಾರ ಮೇಲಿಂದ ಮೇಲೆ ಬರೆ ಹಾಕುತ್ತಲೆ ಇದೆ. ಕೋವಿಡ್ ಮಹಾಮಾರಿಯಿಂದ ಬದುಕು ಕಳೆದುಕೊಂಡ ಸಾಮಾನ್ಯ ಜನರನ್ನು ಬೀದಿಗೆ ಬರುವಂತೆ ಮಾಡಿದೆ. ಈ ಸರ್ಕಾರದ ಕಣ್ಣು, ಕಿವಿಗಳು ಕೆಲಸ ಮಾಡುತ್ತಿವೆಯೇ ? ಈ ಸರ್ಕಾರಕ್ಕೆ ಕಿಂಚಿತ್ತಾದರೂ ಜನರ ಬಗ್ಗೆ ಕಾಳಜಿಯಿದೆಯೇ? ಬೆಲೆ ಏರಿಕೆಯನ್ನು ನಿಯಂತ್ರಿಸುವುದಾಗಿ ಚುನಾವಣೆಯ ಸಂದರ್ಭದಲ್ಲಿ ಉದ್ದುದ್ದ ಭಾಷಣಗಳನ್ನು ಮಾಡಿದ್ದ ಮೋದಿಯವರು ಈಗೇನು ಮಾಡುತ್ತಿದ್ದಾರೆ? ಈ ಸರ್ಕಾರ ಯಾರ ಪರವಾಗಿದೆ? ಎಂದು ಪ್ರಶ್ನಿಸಿದರು. ಕಾರ್ಪೋರೇಟ್ ಮಾಲೀಕರಿಗೆ ರಿಯಾಯಿತಿ ನೀಡುವುದರಲ್ಲಿ, ಅವರ ಸಾಲಗಳನ್ನು ಮನ್ನಾ ಮಾಡುವುದರಲ್ಲಿ ಮಾತ್ರ ಈ ಸರ್ಕಾರಕ್ಕೆ ಎಲ್ಲಿಲ್ಲದ ಉತ್ಸಾಹ”ಎಂದು ಕಿಡಿಕಾರಿದರು.
ಎಸ್‌ಯುಸಿಐ (ಸಿ) ಜಿಲ್ಲಾ ಸಂಘಟನಾ ಸಮಿತಿಯ ಸದಸ್ಯರಾದ ಡಾ. ಸುನೀತ್ ಕುಮಾರ ಅವರು ಮಾತನಾಡುತ್ತಾ “ಕೇಂದ್ರ ಬಿಜೆಪಿ ಸರ್ಕಾರ ಕಳೆದ 7 ವರ್ಷಗಳಲ್ಲಿ ಕಾರ್ಪೋರೆಟ್ ಮಾಲೀಕರ ರೂ.10.7 ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ. ಶೇ.33ರಷ್ಟಿದ್ದ ಕಾರ್ಪೋರೇಟ್ ತೆರಿಗೆಯನ್ನು ಶೇ.22ಕ್ಕೆ ಇಳಿಸಿದೆ. ಅತಿ ಶ್ರೀಮಂತರ ಪಟ್ಟಿಯಲ್ಲಿ ಅಂಬಾನಿ ಹಾಗೂ ಅದಾನಿ, ಏಷಿಯಾದಲ್ಲೇ ಮೊದಲೆರೆಡು ಸ್ಥಾನದಲ್ಲಿ ಮಿಂಚುತ್ತಿದ್ದಾರೆ. ಕೋವಿಡ್‌ಯಿಂದಾಗಿ ಜನ ತತ್ತರಿಸುತ್ತಿರುವಾಗ ಅಂಬಾನಿ ಆಸ್ತಿ 3-4 ಪಟ್ಟು ಹೆಚ್ಚಾಗಿದೆ. ಇದೆಲ್ಲ ಯಾರ ಕೃಪೆಯಿಂದ? ಮೋದಿ ಸರ್ಕಾರ ಸಂಪೂರ್ಣವಾಗಿ ಜನ ವಿರೋಧಿ ಹಾಗೂ ಕಾರ್ಪೋರೇಟ್ ಮಾಲೀಕರ ಪರವಾಗಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಬಂಡವಾಳಶಾಹಿ ಪರ ನೀತಿಗಳನ್ನೇ ಬಿಜೆಪಿ ಸರ್ಕಾರ ಮುಂದುವರೆಸುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಯಾವುದೇ ವ್ಯತ್ಯಾಸಗಳಿಲ್ಲ. ಯಾವ ಪಕ್ಷ ಅಧಿಕಾರಕ್ಕೇರಿದರೂ ಜನರಿಗೆ ಸಮಸ್ಯೆಗಳಿಂದ ಮುಕ್ತಿ ಸಿಗುವುದಿಲ್ಲ. ಈ ಹಿನ್ನಲೆಯಲ್ಲಿ ಜನತೆ ಹೋರಾಟಕ್ಕೆ ಧುಮುಕಬೇಕು. ಗಲ್ಲಿ ಗಲ್ಲಿಗಳಲ್ಲಿ, ಬಡಾವಣೆಗಳಲ್ಲಿ ಜನ ಸಮಿತಿ ರಚಿಸಿಕೊಂಡು ಸಂಘಟಿತರಾಗಬೇಕು. ಜನರ ನೈಜ ಬೇಡಿಕೆಗಳಿಗಾಗಿ ಹೋರಾಟಗಳನ್ನು ಬೆಳೆಸುತ್ತಾ, ಬಂಡವಾಳಶಾಹಿ ವ್ಯವಸ್ಥೆಯನ್ನು ಕೊನೆಗೊಳಿಸುವ ಸಮಾಜವಾದಿ ಹೋರಾಟಕ್ಕೂ ತಯಾರಾಗಬೇಕಿದೆ. ಇದೊಂದೆ ಜನರಿಗಿರುವ ದಾರಿ”ಎಂದು ಕರೆ ನೀಡಿದರು.
ಪ್ರತಿಭಟನೆಯಲ್ಲಿ ಸ್ಮಿತ, ಅಭಿ, ಪೂಜಾ ನಂದಿಹಳ್ಳಿ , ಪರಶುರಾಮ್, ತಿಪ್ಪೇಸ್ವಾಮಿ ಅಣಬೇರು ಹಾಗೂ ಪಕ್ಷದ ಬೆಂಬಲಿಗರು, ನಾಗರಿಕರು ಪಾಲ್ಗೊಂಡಿದ್ದರು.