ಸುದ್ದಿ360 ದಾವಣಗೆರೆ ಮಾ.18: ಹಗಲು ದರೋಡೆ ಮಾಡುವವರು ಕಾಂಗ್ರೆಸ್ ನವರು ಆದರೆ ಬಿಜೆಪಿ ಮೇಲೆ ಗೂಬೆ ಕೂರಿಸುತ್ತಾರೆ ಎಂದು ಬಿಜೆಪಿ ಮುಖಂಡ ಯಶವಂತ್ ರಾವ್ ಜಾಧವ್ ಹರಿಹಾಯ್ದರು.
ಅವರು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾವು ಮಾಡಿರುವ ಅಭಿವೃದ್ಧಿ ಕಾರ್ಯಗಳೇ ನಮ್ಮ ಶಕ್ತಿ, ಇದರಿಂದಲೇ ಜನರು ನಮ್ಮನ್ನು ಗೆಲ್ಲಿಸಿದ್ದಾರೆ ಎನ್ನುವ ಶಾಮನೂರು ಶಿವಶಂಕರಪ್ಪ ಹಾಗೂ ಮಲ್ಲಿಕಾರ್ಜುನ್ ಅವರು ಸೀರೆ, ಕುಕ್ಕರ್ ಗಳನ್ನು ನೀಡುವ ಮೂಲಕ ಮತದಾರರಿಗೆ ಆಮಿಷ ಒಡ್ಡುತ್ತಿರುವುದಾದರೂ ಯಾಕೆ ಎಂದು ಪ್ರಶ್ನಿಸಿದರು.
ಎಸ್ಸೆಸ್ ಹಾಗೂ ಮಲ್ಲಿಕಾರ್ಜುನ್ ಅವರ ವತಿಯಿಂದ ಹಂಚಿದ್ದರು ಎನ್ನಲಾದ ಸೀರೆ, ಕುಕ್ಕರ್ ಗಳನ್ನು ಪ್ರದರ್ಶಿಸಿದ ಅವರು, ದಾವಣಗೆರೆ ನಾಯಕರು ನಾವೇ, ಅಭಿವೃದ್ಧಿಯ ಹರಿಕಾರರು ನಾವೇ ಎಂದು ಹೇಳಿಕೊಳ್ಳುವವರು, ಬಿಜೆಪಿಯ 40 ಪರ್ಸೆಂಟ್ ಕುರಿತು ಟೀಕಿಸುವವರು ಅಭಿವೃದ್ಧಿ ಮಾಡಿರುವ ಹಿನ್ನೆಲೆಯಲ್ಲಿ ಮತ ಕೇಳಬೇಕಿತ್ತು. ಅದು ಬಿಟ್ಟು ಕಳಪೆ ಕುಕ್ಕರ್, ಕಡಿಮೆ ದರದ ಸೀರೆ ಹಂಚಿ ಮತದಾರರಿಗೆ ಆಮಿಷ ಒಡ್ಡುವ ರೀತಿ ಸರಿಯೇ ಎಂದು ಆಕ್ಷೇಪಿಸಿದರು.
ಅಕ್ರಮ ಆಸ್ತಿ ನಿರ್ವಹಣೆಗಾಗಿ ಅಪ್ಪ ಮಗ ಚುನಾವಣೆಗೆ
ಮೊದಲು ಇವರ ಆಸ್ತಿ ಎಷ್ಟಿತ್ತು, ಈಗ ಎಷ್ಟಿದೆ ಇದು ಎಲ್ಲರಿಗೂ ತಿಳಿದ ವಿಷಯ. ಗಳಿಸಿರುವ ಅಕ್ರಮ ಆಸ್ತಿಗಳನ್ನು ನಿರ್ವಹಣೆ ಮಾಡಲು ಇವರಿಗೆ ಅಧಿಕಾರ ಬೇಕು. ಹಾಗಾಗಿಯೇ ಅಪ್ಪ, ಮಗ ಇಬ್ಬರೂ ಚುನಾವಣೆಗೆ ನಿಲ್ಲುತ್ತಾರೆ ಎಂದರು.
ದಿ.ಜೆ.ಹೆಚ್ ಪಟೇಲ್ ಅವರು ದಾವಣಗೆರೆ ಜಿಲ್ಲೆ ಮಾಡಿರುವುದರಿಂದ ಅಭಿವೃದ್ಧಿ ಸಾಧ್ಯವಾಗಿದೆ ಹೊರತು ಇನ್ನೊಬ್ಬರಿಂದ ಅಲ್ಲ. 2001 ರಲ್ಲಿ ಕಾಂಗ್ರೆಸ್ ನವರು ಮಂತ್ರಿಯಾಗಿದ್ದ ವೇಳೆ ಯಾವ ಅನುದಾನ ತಂದಿದ್ದರು. ದಾವಣಗೆರೆ ಅಭಿವೃದ್ಧಿಯಾಗಲು ಬಿಜೆಪಿ ಅನುದಾನ ಕಾರಣ. ಜಿಲ್ಲಾಡಳಿತ ಭವನ, ಪಾರ್ಕ್ ಗಳ ಅಭಿವೃದ್ಧಿ, ರೈಲ್ವೆ, ಕೇಂದ್ರೀಯ ವಿದ್ಯಾಲಯ ಹೀಗೆ ಎಲ್ಲಾ ಇಲಾಖೆಗಳು ಬಿಜೆಪಿಯ ಅವಧಿಯಲ್ಲಿ ನಡೆದಿವೆ ಯಶವಂತ್ ರಾವ್ ಜಾಧವ್ ಎಂದು ಹೇಳಿದರು.
ದಾವಣಗೆರೆ ದಕ್ಷಿಣ ಕ್ಷೇತ್ರದ ಅಲ್ಪಸಂಖ್ಯಾತರು ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಇದುವರೆಗೂ ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ದಾರಿ ತಪ್ಪಿಸುತ್ತಿದ್ದರು. ಆದರೆ ಅವರುಗಳು ಸಹ ಈ ಬಾರಿ ಪ್ರಬುದ್ಧರಾಗಿದ್ದು, ಈಗಾಗಲೇ ಸಾವಿರಾರು ಅಲ್ಪಸಂಖ್ಯಾತರು ಬಿಜೆಪಿಗೆ ಸೇರಿದ್ದಾರೆ ಎಂದರು.
ದಕ್ಷಿಣದಲ್ಲಿ ಉತ್ತಮ ರಸ್ತೆಗಳು, ಪಾರ್ಕ್, ಆಸ್ಪತ್ರೆಗಳು. ಇಲ್ಲ. ಇನ್ನು ದಾವಣಗೆರೆಗೆ ದಾನಿಗಳ ಊರು ಎಂದು ಹೆಸರು ಬಂದಿದ್ದು ರಾಜನಹಳ್ಳಿ, ಚನ್ನಗಿರಿ, ಚಿಗಟೇರಿ ಮನೆತನಗಳಿಂದಲೇ ಹೊರತು ಇವರಿಂದ ಅಲ್ಲ. ಈ ಬಾರಿ ಅವರ ಆಸೆ ಈಡೇರುವುದಿಲ್ಲ. ಜನರಿಗೆ ಎಲ್ಲ ವಿಷಯಗಳು ಅರ್ಥವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ, ಲೋಕಿಕೆರೆ ನಾಗರಾಜ್, ರಾಜನಹಳ್ಳಿ ಶಿವಕುಮಾರ್, ಸೋಗಿ ಶಾಂತಕುಮಾರ್, ಪಿ.ಸಿ. ಶ್ರೀನಿವಾಸ್, ಎಲ್.ಡಿ. ಗೋಣೆಪ್ಪ, ಟಿಂಕರ್ ಮಂಜಣ್ಣ, ಗೋಪಾಲ್ ರಾವ್ ಮಾನೆ, ಶಿವನಗೌಡ ಪಾಟೀಲ್, ಹನುಮಂತಪ್ಪ, ಪವನ್, ಸುರೇಶ್ ಹಿಂದೆ, ಪ್ರವೀಣ್ ಇನ್ನಿತರರಿದ್ದರು.