ಅಮೃತ ಮಹೋತ್ಸವಕ್ಕೆ ಕ್ಷಣಗಣನೆ – ಸಕಲ ಸಿದ್ಧತೆಗಳೊಂದಿಗೆ ಎಸ್‌ಎಸ್ ಅರಮನೆ ಆವರಣ

ಮಹೋತ್ಸವದ ಸಿದ್ಧತೆ ಕುರಿತು ಸುದ್ದಿಗೋಷ್ಠಿಯಲ್ಲಿ ಎಚ್.ಎಂ. ರೇವಣ್ಣ ಮಾಹಿತಿ

ಸುದ್ದಿ360 ದಾವಣಗೆರೆ, ಆ.02: ನಾಳೆ (ಆ.3) ನಡೆಯುವ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವ ನಿಮಿತ್ತ ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿನ ಶಾಮನೂರು ಶಿವಶಂಕರಪ್ಪ ಪ್ಯಾಲೆಸ್ ಆವರಣದಲ್ಲಿ ಸಕಲ ಸಿದ್ಧತೆಗಳೊಂದಿಗೆ ವೇದಿಕೆ ಸಜ್ಜಾಗಿದೆ ಎಂದು ಮಹೋತ್ಸವದ ವಾಹನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ ತಿಳಿಸಿದರು.

ನಗರದಲ್ಲಿ ಇಂದು ವರದಿಗಾರರ ಕೂಟದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಮಾರಂಭದ ಸಿದ್ಧತೆ ಕುರಿತು ಮಾಹಿತಿ ನೀಡಿ, ಅಮೃತ ಮಹೋತ್ಸವಕ್ಕೆ ಸಂಬಂಧಿಸಿದ ಎಲ್ಲ ಸಿದ್ಧತೆಗಳು ಈಗಾಗಲೆ ಪೂರ್ಣಗೊಂಡಿವೆ. ದೂರದೂರುಗಳಿಂದ ಬರುವ ಕಾರ್ಯಕರ್ತರು, ಅಭಿಮಾನಿಗಳಿಗೆ ಯಾವುದೇ ತೊಂದರೆ ಆಗದ ರೀತಿ ಸಕಲ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.

ಅಮೃತ ಮಹೋತ್ಸವ ವೇದಿಕೆಯಲ್ಲಿ ಯಾವಾಗ ಏನು…?

ಅಂದು ಬೆಳಗ್ಗೆ 10 ಗಂಟೆಗೆ ಕಾರ‍್ಯಕ್ರಮ ಆರಂಭವಾಗಲಿದ್ದು, 10.30ರಿಂದ ತಿಂಡಿ-ಊಟ ಬಡಿಸುವಿಕೆ ಪ್ರಾರಂಭವಾಗುತ್ತದೆ. 10.00ರಿಂದ 11.30ರವರೆಗೆ ಹಂಸಲೇಖ, ಸಾದುಕೋಕಿಲ, ಸಂಗೀತ ಕಟ್ಟಿ ಮತ್ತು ತಂಡದವರಿಂದ ಸಂಗೀತ ಕಾರ್ಯ‍್ಯಕ್ರಮ, 11.30ರಿಂದ 1.00 ಗಂಟೆವರೆಗೆ ಪಕ್ಷದ ಹಿರಿಯ ನಾಯಕರ ಭಾಷಣ ಇರಲಿದ್ದು, 1.00 ಗಂಟೆಗೆ ಪ್ರಮುಖ ವೇದಿಕೆ ಕಾರ‍್ಯಕ್ರಮ ಪ್ರಾರಂಭವಾಗಲಿದೆ.

ವೇದಿಕೆ ಹಾಗೂ ಪೆಂಡಾಲ್ ವ್ಯವಸ್ಥೆ

ಸಮಾರಂಭದಲ್ಲಿ ಮೂರು ಮಹಾ ವೇದಿಕೆಗಳ ವ್ಯವಸ್ಥೆ ಮಾಡಲಾಗಿದ್ದು, ಪ್ರಮುಖ ವೇದಿಕೆಯಲ್ಲಿ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಎಲ್ಲಾ ಪ್ರಮುಖ ನಾಯಕರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಇದರ ಎಡಭಾಗದಲ್ಲಿನ ವೇದಿಕೆಯಲ್ಲಿ ಎಂಎಲ್‌ಎ, ಎಂಎಲ್‌ಸಿ, ಸಂಸದರು ಮತ್ತು ಹಿರಿಯ ನಾಯಕರು ಹಾಗೂ ಬಲ ಭಾಗದ ವೇದಿಕೆಯಲ್ಲಿ ಕಾಂಗ್ರೆಸ್ ಪದಾಧಿಕಾರಿಗಳು, ಕುರುಬ ಸಂಘ ಸೇರಿ ವಿವಿಧ ಸಂಘಟನೆ ಪದಾಧಿಕಾರಿಗಳು ಆಸೀನರಾಗುತ್ತಾರೆ. ವೇದಿಕೆಯಲ್ಲಿ ಯಾರು ಎಲ್ಲಿ ಕುಳಿತುಕೊಳ್ಳಬೇಕು ಎಂಬುದನ್ನು ನೋಡಿಕೊಳ್ಳಲು 300 ಸ್ವಯಂಸೇವಕರನ್ನು ನಿಯೋಜಿಸಲಾಗಿದೆ.

50 ಎಕರೆ ವಿಸ್ತೀರ್ಣದ ಎಸ್‌ಎಸ್ ಪ್ಯಾಲೆಸ್ ಮೈದಾನದಲ್ಲಿ 5 ಬೃಹತ್ ಪೆಂಡಾಲ್‌ಗಳು, 4 ಲಕ್ಷ ಚೇರ್‌ಗಳನ್ನು ಈಗಾಗಲೇ ಹಾಕಲಾಗಿದೆ. ಮೂರು ವಾಟರ್ ಪ್ರೂಫರ್ ಸೇರಿದಂತೆ ಐದು ಅತಿ ದೊಡ್ಡ ಪೆಂಡಾಲ್‌ಗಳು, ಅಡುಗೆ ಕೋಣೆ, ಅಡುಗೆ ಕೌಂಟರ್‌ಗಳು ನಿರ್ಮಾಣಗೊಂಡಿವೆ. ಊಟಕ್ಕೆ ಮೂರು ಕೌಂಟರ್ ಇದ್ದು, ಊಟ ಬಡಿಸಲು  ಸಾವಿರಾರು ಸ್ವಯಂ ಸೇವಕರು ಇದ್ದಾರೆ. ಯಾವ ಕಾರಣಕ್ಕೂ ನೂಕುನುಗ್ಗಲಾಗದಂತೆ ವ್ಯವಸ್ಥಿತವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. 1500 ಬಾಣಸಿಗರು ಈಗಾಗಲೇ ಆಗಮಿಸಿದ್ದು, 6.50 ಲಕ್ಷ ಜನರಿಗೆ ಅಡುಗೆ ತಯಾರಿಯಲ್ಲಿ ತೊಡಗಿದ್ದಾರೆ ಎಂದು ಹೇಳಿದರು.

ವಾಹನಗಳ ನಿಲ್ದಾಣಕ್ಕೆ 300 ಎಕರೆ ಜಮೀನು

ಕಾರ‍್ಯಕ್ರಮ ಸ್ಥಳದ ಸುತ್ತಲಿನ ಜಾಗದಲ್ಲಿ 300 ಎಕರೆ ಪ್ರದೇಶದಲ್ಲಿ  ವಾಹನ ನಿಲುಗಡೆಗೆ  ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ 1500 ಕೆಎಸ್ ಆರ್ ಟಿಸಿ ಬಸ್ ಬರಲಿವೆ. ಬೆಳಗಾವಿ ಹಾಗೂ ಬೆಂಗಳೂರು ಭಾಗದಿಂದ ಬರುವವರ ವಾಹನ ನಿಲುಗಡೆ ಪ್ರತ್ಯೇಕ ವ್ಯವಸ್ಥೆ. ಬಸ್ಸು, ಕ್ರೂಸರ್, ಕಾರು ಹಾಗೂ ದ್ವಿಚಕ್ರ ವಾಹನ ನಿಲುಗಡೆಗೆ ಪ್ರತ್ಯೇಕ ಸ್ಥಳವನ್ನು ಮೀಸಲಿರಿಸಲಾಗಿದೆ. ಇನ್ನು ಸಮಾರಂಭಕ್ಕೆ ಆಗಮಿಸುವ ರಾಜ್ಯದ ನಾನಾ ಭಾಗಗಳ ಜನರು ತಮ್ಮ ವಾಹನಗಳನ್ನು ನಿಲ್ಲಿಸಲು 300 ಎಕರೆ ಜಮೀನಿನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಅಮೃತ ಮಹೋತ್ಸವ ಸಮಿತಿ ಪದಾಧಿಕಾರಿಗಳಾದ ಅಶೋಕ್, ಅಪ್ಪಾಜಿ ನಾಡಗೌಡ, ಪ್ರಕಾಶ್ ರಾಥೋಡ್, ರಾಜ್ಯ ಕುರುಬ ಸಂಘದ ಅಧ್ಯಕ್ಷ ಸುಬ್ಬಣ್ಣ, ರಾಜ್ಯ ಹಿಂದುಳಿದ ಜಾತಿಗಳ ಒಟ್ಟೂಟದ ರಾಜ್ಯಾಧ್ಯಕ್ಷ ರಾಮಚಂದ್ರಪ್ಪ, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಇತರರು ಇದ್ದರು.

admin

admin

Leave a Reply

Your email address will not be published. Required fields are marked *

error: Content is protected !!