ಸುದ್ದಿ360 ನಾಗಪುರ: ನಮ್ಮಲ್ಲಿನ ಎಟಿಎಂಗಳಲ್ಲಿ ಹಣ ಇದೆ ಅಂದ್ರೇ ದೊಡ್ಡ ವಿಷಯ. ಇನ್ನು ಆ ಎಟಿಎಂ ಹಣ ಕೊಟ್ಟಿತೆಂದರೆ ಅದೃಷ್ಟವೇ ಸರಿ. ಕೆಲವೊಮ್ಮೆ ನಮ್ಮ ಹಣ ನಮಗೆ ಕೊಡಲು ಎಟಿಎಂಗಳು ಸತಾಯಿಸುತ್ತವೆ. ಸಿಟಿಯಲ್ಲಿರುವ ಅಷ್ಟೂ ಎಟಿಎಂ ಕೇಂದ್ರಗಳನ್ನು ಸುತ್ತಾಡಿ ಬಂದರೂ ಒಂದು ಗರಿ ಗರಿ ನೋಟು ಹುಟ್ಟುವುದಿಲ್ಲ. ಹೀಗಿರುವಾಗ ಕಿತ್ತಳೆ ನಾಡು ನಾಗಪುರ ಜಿಲ್ಲೆಯಲ್ಲೊಂದು ಎಟಿಎಂ ಪವಾಡವನ್ನೇ ಸೃಷ್ಟಿಸಿದೆ! ಗ್ರಾಹಕರೊಬ್ಬರು 10,000 ರೂ. ಕೇಳಿದರೆ ಆ ಎಟಿಎಂ ಬರೋಬ್ಬರಿ 50,000 ರೂ. ದಯಪಾಲಿಸಿದೆ!!
ಇದು ಆಶ್ಚರ್ಯವಲ್ಲ ಪರಮಾಶ್ಚರ್ಯ!
ಪಕ್ಕದ ರಾಜ್ಯ ಮಹಾರಾಷ್ಟ್ರದ ನಾಗಪುರ ಜಿಲ್ಲೆಯಿಂದ 33 ಕಿ.ಮೀ ದೂರದಲ್ಲಿರುವ ಖಾಪರಕೇಡ ಎಂಬ ಪಟ್ಟಣದ ಖಾಸಗಿ ಬ್ಯಾಂಕ್ ಎಟಿಎಂನಲ್ಲಿ ಈ ಅಚ್ಚರಿಯ ಘಟನೆ ನಡೆದಿದೆ.
ಪಟ್ಟಣದ ನಿವಾಸಿಯೊಬ್ಬರು ಎಟಿಎಂನಲ್ಲಿ 500 ರೂ. ಬಿಡಿಸಿಕೊಳ್ಳಲು ಹೋದಾಗ, ಆ ಕರುಣಾಮಯಿ ಎಟಿಎಂ 2,500 ಕೊಟ್ಟು ಕಳುಹಿಸಿತ್ತು. 1,000 ರೂ. ಬಿಡಿಸಲು ಹೋದ ಮತ್ತೊಬ್ಬ ವ್ಯಕ್ತಿಗೆ 5,000 ರೂ. ಕೊಟ್ಟಿತ್ತು. ಈ ವಿಷಯ ಕ್ಷಣಾರ್ಧದಲ್ಲಿ ಪಟ್ಟಣದ ತುಂಬಾ ಹರಡಿ, ಸಾವಿರಾರು ಜನ ಡೆಬಿಟ್ ಕಾರ್ಡ್ ಹಿಡಿದು ಎಟಿಎಂ ಎದುರು ಸಾಲಾಗಿ ನಿಂತರು. ಈ ನಡುವೆ ಮುನ್ನುಗ್ಗಿ ಎಟಿಎಂ ಕೇಂದ್ರದೊಳಗೆ ಹೋದ ವ್ಯಕ್ತಿಯೊಬ್ಬ10,000 ಎಂಟ್ರಿ ಮಾಡಿ 50,000 ತೆಗೆದುಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾನೆ!!
ಎಂದೂ ಇಲ್ಲದ ಜನ ಅಂದು ಸಾವಿರಾರು ಸಂಖ್ಯೆಯಲ್ಲಿ ಎಟಿಎಂ ಎದುರು ಜಮಾಯಿಸಿರುವುದನ್ನು ಕಂಡ ಬ್ಯಾಂಕ್ ಉದ್ಯೋಗಿಯೊಬ್ಬರು ಸಾಲಿನಲ್ಲಿ ನಿಂತಿದ್ದ ವ್ಯಕ್ತಿಯನ್ನು ಕೇಳಿದಾಗ ವಿಷಯ ತಿಳಿದಿದೆ. ಕೂಡಲೇ ಆ ಬ್ಯಾಂಕ್ ಉದ್ಯೋಗಿ ಪೊಲೀಸರಿಗೆ ಫೋನ್ ಮಾಡಿ ದೂರು ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಎಟಿಎಂ ಕೇಂದ್ರಕ್ಕೆ ಬೀಗ ಹಾಕಿ ಜನರನ್ನು ಅಲ್ಲಿಂದ ಓಡಿಸಿದ್ದಾರೆ. ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು ಎಂದು ಸ್ಥಳೀಯರೊಬ್ಬರು ಮಾಹಿತಿ ನೀಡಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಒಂದಕ್ಕೆ ಐದು ಪಟ್ಟು ಹಣ ನೀಡುವ ಮಾಹಿತಿ ತಿಳಿದು ನೂರಾರು ಜನರು ಎಟಿಎಂನಲ್ಲಿ ಹಣ ಬಿಡಿಸಿಕೊಂಡಿದ್ದಾರೆ. ತಾಂತ್ರಿಕ ಸಮಸ್ಯೆಯಿಂದಾಗಿ ಎಟಿಎಂ ಹೆಚ್ಚುವರಿ ಹಣ ನೀಡುತ್ತಿತ್ತು. ಎಟಿಎಂ ಯಂತ್ರದಲ್ಲಿ 100 ರೂ. ಮುಖಬೆಲೆ ನೋಟು ಇರಿಸುವ ಜಾಗದಲ್ಲಿ ತಪ್ಪಾಗಿ 500 ರೂ. ನೋಟುಗಳನ್ನು ಇರಿಸಿದ್ದರಿಂದ ಈ ಪ್ರಮಾದವಾಗಿದೆ ಎಂದು ಬ್ಯಾಂಕ್ ಅಧಿಕಾರಿ ಹೇಳಿದ್ದಾರೆ. ಹೆಚ್ಚುವರಿ ಹಣವನ್ನು ಆಯಾ ವ್ಯಕ್ತಿಗಳ ಬ್ಯಾಂಕ್ ಖಾತೆಯಿಂದ ಮುರಿದುಕೊಳ್ಳುವುದಾಗಿಯೂ ಅಧಿಕಾರಿ ಮಾಹಿತಿ ನೀಡಿದ್ದಾರೆ.