ಸುದ್ದಿ360 ದಾವಣಗೆರೆ, ಆ.07: ನಗರದ ಸವಿತಾ ಕ್ಷೇಮಾಭಿವೃದ್ಧಿ ಸಂಘದಿಂದ ಸವಿತಾ ಸಮಾಜದ ಎಸ್ಸೆಸ್ಸೆಲ್ಸಿ, ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆ.9ರಂದು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಂಘದ ಉಪಾಧ್ಯಕ್ಷ ಪಿ.ಬಿ.ವೆಂಕಟಾಚಲಪತಿ ಮಾತನಾಡಿ, ಅಂದು ಬೆಳಿಗ್ಗೆ 10.30ಕ್ಕೆ ನಗರದ ರೋಟರಿ ಸಭಾಂಗಣದಲ್ಲಿ 9ನೇ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದ್ದು, ಸಂಘದ ಅಧ್ಯಕ್ಷ ಪಿ.ಜಿ.ನಾಗರಾಜ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಭೀಮಸೇನ, ಆಕಾಶವಾಣಿ ಕಲಾವಿದ ಎನ್.ಕೆ.ಶ್ರೀನಿವಾಸ್, ಎಸ್.ಪ್ರಕಾಶ್, ಬಾಲರಾಜ್ ಬಿ. ಉಪ್ಪಲ, ಎನ್.ರಂಗಸ್ವಾಮಿ ಆಗಮಿಸುವರು ಎಂದು ತಿಳಿಸಿದರು.
ಸವಿತಾ ಸಮಾಜವು ಅರ್ಥಿಕವಾಗಿ, ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದೆ ಉಳಿದ ಕಡಿಮೆ ಜನಸಂಖ್ಯೆ ಇರುವ ಅಸಂಘಟಿತ ಜನಾಂಗ. ನಮಗೆ ಸರ್ಕಾರದಿಂದ ದೊರೆಯಬೇಕಾದ ಸವಲತ್ತುಗಳು ದೊರೆಯುತ್ತಿಲ್ಲ. ಆದ್ದರಿಂದ ಸರ್ಕಾರವು ನಮ್ಮ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು. ಕಟ್ಟಡ ಕಾರ್ಮಿಕರಿಗೆ ನೀಡುತ್ತಿರುವ ಎಲ್ಲಾ ಸೌಲಭ್ಯ ನೀಡಬೇಕು. ಸವಿತಾ ಸಮಾಜ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ನೀಡಬೇಕು. ಜಾತಿ ನಿಂದನೆ ಪದವನ್ನು ಬಳಸಿ ನಮಗೆ ಮಾನಸಿಕ ನೋವನ್ನು ಉಂಟುಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸವಿತಾ ಸಮಾಜದ ಪಿ.ಜಿ.ನಾಗರಾಜ್, ಎನ್.ವಿ.ರಾಜೇಂದ್ರ ಕುಮಾರ್, ಪಿ. ನಾರಾಯಣಪ್ಪ, ಎನ್.ರಾಜು ಇದ್ದರು.