ಸುದ್ದಿ360 ದಾವಣಗೆರೆ, ಸೆ.01: ಬಂಡವಾಳಶಾಹಿ-ಸಾಮ್ರಾಜ್ಯಶಾಹಿ ಶಕ್ತಿಗಳು ಅತಿ ಹೆಚ್ಚು ಲಾಭಗಳಿಸಲು ಈ ಯುದ್ಧಗಳನ್ನು ಹುಟ್ಟುಹಾಕತ್ತಿದ್ದು, ರಷ್ಯಾ ಉಕ್ರೇನ್ ಮೇಲೆ ನಡೆಸುತ್ತಿರುವ ಯುದ್ಧ ನಿಲ್ಲಿಸಬೇಕು ಎಂದು ಒತ್ತಾಯಿಸಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ಕಾರ್ಯಕರ್ತರು ಇಂದು ನಗರದ ಮಹಾತ್ಮಾಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ವಿಶ್ವ ಕಾರ್ಮಿಕ ಸಂಘಟನೆಗಳ ಒಕ್ಕೂಟ ವರ್ಲ್ಡ್ ಫೆಡರೇಷನ್ ಆಫ್ ಟ್ರೇಡ್ ಯುನಿಯನ್ (WFTU ) ಸೆಪ್ಟೆಂಬರ್ 1 ರಂದು ‘ಶಾಂತಿಗಾಗಿ ಅಂತರಾಷ್ಟ್ರೀಯ ಕ್ರಿಯಾ ದಿನ’ ಎಂದು ಆಚರಿಸಲು ಕರೆನೀಡಿದ್ದು, ಈ ಹಿನ್ನೆಲೆಯಲ್ಲಿ ಎಐಯುಟಿಯುಸಿ ಕಾರ್ಯಕರ್ತರು ಬಂಡವಾಳವಾದ-ಸಾಮ್ರಾಜ್ಯವಾದಕ್ಕೆ ಧಿಕ್ಕಾರ ಹಾಕುತ್ತಾ, ಜಗತ್ತಿನ ಶಾಂತಿಗೆ ಮಾರಕವಾಗಿರುವ ನ್ಯಾಟೋ (NATO)ವನ್ನು ವಿಸರ್ಜಿಸುವಂತೆ ಆಗ್ರಹಿಸಿ ಶಾಂತಿ ನೆಲೆಸುವಂತಾಗಲಿ ಎಂಬ ಘೋಷಣೆಗಳೊಂದಿಗೆ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಉಕ್ರೇನ್‌ನಲ್ಲಿ ಸಾಮ್ರಾಜ್ಯಶಾಹಿ ರಷ್ಯಾದ ಮಿಲಿಟರಿ ಕಾರ್ಯಾಚರಣೆ ಹಾಗೂ ಅಮೇರಿಕಾ-ನ್ಯಾಟೋ ಸಾಮ್ರಾಜ್ಯಶಾಹಿ ಮಿಲಿಟರಿ ಶಕ್ತಿಗಳ ಕುಕೃತ್ಯದಿಂದ ಲಕ್ಷಾಂತರ ದುಡಿಯುವ ಜನರ ಜೀವ ಹಾಗೂ ಜೀವನ ಸರ್ವನಾಶಗೊಂಡ ನಂತರವಂತೂ, ಜಗತ್ತಿನ ಶಾಂತಿಗೆ ಇನ್ನಷ್ಟು ದೊಡ್ಡ ಅಪಾಯ ಬಂದೊದಗಿದೆ. ರಷ್ಯಾ, ಚೀನಾ ಹಾಗೂ ಇನ್ನಿತರ ದೇಶಗಳಲ್ಲಿ ಸಮಾಜವಾದಿ ವ್ಯವಸ್ಥೆ ಪತನವಾಗಿ, ಬಂಡವಾಳಶಾಹಿ ವ್ಯವಸ್ಥೆ ಮರುಸ್ಥಾಪನೆಗೊಂಡು, ಜಾಗತೀಕರಣ ನೀತಿಗಳು ಜಾರಿಗೊಂಡ ನಂತರ, ಜಗತ್ತಿನಾದ್ಯಂತ ದುಡಿಯುವ ವರ್ಗ ಯುದ್ಧದ ಭೀತಿಯಲ್ಲಿದ್ದಾರೆ. ಬಂಡವಾಳಶಾಹಿ-ಸಾಮ್ರಾಜ್ಯಶಾಹಿ ಶಕ್ತಿಗಳು ತಮ್ಮ ಲಾಭಕ್ಕೆ ಈ ಯುದ್ಧಗಳನ್ನು ಹುಟ್ಟುಹಾಕತ್ತಿದ್ದಾರೆ ಎಂದರು.
ದುಡಿಯುವ ಜನರ ಮೇಲೆ ನಡೆಯುತ್ತಿರುವ ಈ ದಾಳಿಗಳನ್ನು ಬಲಿಷ್ಠ ಹೋರಾಟ ಗಳ ಮೂಲಕ ಮಾತ್ರವೇ ಹಿಮ್ಮೆಟ್ಟಿಸಲು ಸಾದ್ಯವಿದೆ ಎಂದು ಪ್ರತಿಭಟನಾಕಾರರು ಹೇಳಿದರು.
ಪ್ರತಿಭಟನೆಯಲ್ಲಿ ಮಂಜುನಾಥ್ ಕೈದಾಳೆ, ಮಂಜುನಾಥ್ ಕುಕ್ಕುವಾಡ, ಎಮ್ ಆರ್ ಹಿರೇಮಠ್, ಶಿವಾಜಿರಾವ್, ವಿರೂಪಾಕ್ಷಪ್ಪ ದೊಡ್ಡಮನಿ, ರವಿಕುಮಾರ್, ಬಸವರಾಜ್, ಗಿರಿಜಮ್ಮ, ಸಿದ್ದಮ್ಮ, ಅನಿಲ್ ಕುಮಾರ್, ತುಕಾರಾಮ್, ರಾಘವೇಂದ್ರ ಇನ್ನಿತರರು ಪಾಲ್ಗೊಂಡಿದ್ದರು.