ಸುದ್ದಿ360 ದಾವಣಗೆರೆ, ಜೂ.20: ನಗರದ ಹದಡಿ ರಸ್ತೆಯಲ್ಲಿರುವ ಸರಕಾರಿ ಐಟಿಐ ಕಾಲೇಜಿನಲ್ಲಿ ಕಾಲೇಜು ಉನ್ನತೀಕರಣದ ಶಿಲಾಫಲಕವನ್ನು ಶಾಸಕ ಎಸ್.ಎ. ರವೀಂದ್ರನಾಥ ಸೋಮವಾರ ಅನಾವರಣಗೊಳಿಸಿದರು.
ಭಾರತ ಸ್ವಾತಂತ್ರ‍್ಯೋತ್ಸವ ಅಮೃತ ಮಹೊತ್ಸವದ ಅಂಗವಾಗಿ ರಾಜ್ಯಾದ್ಯಂತ ತಾಂತ್ರಿಕ ಕೇಂದ್ರಗಳನ್ನಾಗಿ ಉನ್ನತೀಕರಿಸಿರುವ 150 ಐಟಿಐಗಳ ಲೋಕಾರ್ಪಣೆ ಅಂಗವಾಗಿ ನಗರದ ಐಟಿಐ ಕಾಲೇಜಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಟಾಟಾ ಟೆಕ್ನಾಲಜೀಸ್ ಲಿಮಿಟೆಡ್ ಮತ್ತು ಇತರೇ 20 ಉದ್ಯಮ ಪಾಲುದಾರರ ಸಹಯೋಗದೊಂದಿಗೆ ಕರ್ನಾಟಕ ಸರಕಾರ, ರಾಜ್ಯದ 150 ಸರಕಾರಿ ಕೈಗಾರಿಕಾ ತರಬೇತಿ ಕೇಂದ್ರಗಳನ್ನು ತಾಂತ್ರಿಕ ಕೇಂದ್ರಗಳನ್ನಾಗಿ ಪರಿವರ್ತಿಸಿದ್ದು, ಇದು ದೇಶದಲ್ಲೇ ವಿನೂತನ ಯೋಜನೆಯಾಗಿದೆ.
ರಾಜ್ಯಾದ್ಯಂತ ಕೈಗಾರಿಕೆ 4.0 ತಂತ್ರಜ್ಞಾನಕ್ಕೆ ಅಗತ್ಯವಿರುವ ನುರಿತ ಮಾನವ ಸಂಪನ್ಮೂಲ ಒದಗಿಸುವ ಕೋರ್ಸ್ಗಳ ಮೂಲಕ ವಾರ್ಷಿಕ 20,000 ಮತ್ತು ಅಲ್ಪಾವಧಿ ಕೋರ್ಸ್ಗಳ ಮೂಲಕ ಒಂದು ಲಕ್ಷ ನುರಿತ ಮಾನವ ಸಂಪನ್ಮೂಲ ಸೃಷ್ಟಿಸುವ ಗುರಿ ಹೊಂದಲಾಗಿದೆ. ಯೋಜನೆಯಿಂದಾಗಿ ಐಟಿಐ ವಿದ್ಯಾರ್ಥಿಗಳಿಗೆ ಕೈಗಾರಿಕೆಗಳಲ್ಲಿ ಹೆಚ್ಚು ಹೆಚ್ಚು ಉದ್ಯೋಗಾವಕಾಶ ಮತ್ತು ಉದ್ಯಮಶೀಲತಾ ಅವಕಾಶಗಳು ಲಭ್ಯವಾಗಲಿವೆ.
ವಿವಿಧ ಹೊಸ ಕೋರ್ಸ್ಗಳ ಆರಂಭ
ಅತ್ಯಾಧುನಿಕ ತಂತ್ರಜ್ಞಾನ ವಲಯಗಳ ಸ್ವಯಂಚಾಲಿತ ಹಾಗೂ ನಿಯಂತ್ರಿತ ಕೈಗಾರಿಕಾ ಉತ್ಪನ್ನ, ವಿನ್ಯಾಸ ಹಾಗು ಋಜುವಾತು, ಅಡಿಟೀವ್ ಉತ್ಪಾದನೆ, ಕೈಗಾರಿಕಾ ರೋಬೊಟಿಕ್ಸ್ ಹಾಗೂ ಆರ್ಕ್ ವೆಲ್ಡಿಂಗ್ಸ್, ಅತ್ಯಾಧುನಿಕ ಪ್ಲಂಬಿಂಗ್, ವಾಹನ ಉತ್ಪದನೆ ಹಾಗೂ ಬ್ಯಾಟರಿ ವಾಹನಗಳು, ಇಂಟರ್‌ನೆಟ್ ಆಫ್ ಥಿಂಗ್ಸ್ ಎಂಬ ಹೊಸ ಕೋರ್ಸ್‍ಗಳನ್ನು ನಗರದ ಐಟಿಐನಲ್ಲಿ ಆರಂಭಿಸಲಾಗಿದೆ. ಇದರೊಂದಿಗೆ ಪ್ರಸಕ್ತ ಸಾಲಿನಿಂದ ಅಡ್ವಾನ್ಸಡ್ ಸಿಎನ್‌ಸಿ ಮೆಷಿನಿಂಗ್ ಟೆಕ್ನಿಷಿಯನ್, ಮೆಕ್ಯಾನಿಕ್ ಬ್ಯಾಟರಿ ಎಲೆಕ್ಟಿಕ್ ವೆಹಿಕಲ್, ಇಂಡಸ್ಟ್ರಿಯಲ್ ರೋಬೊಟಿಕ್ಸ್ ಮತ್ತು ಡಿಜಿಟಲ್ ಮ್ಯಾನುಫ್ಯಾಕ್ಟರಿಂಗ್ ತರಬೇತಿ ಪ್ರಾರಂಭಿಸಲಾಗಿದೆ.
ಈ ವೇಳೆ ಅಪರ ಜಿಲ್ಲಾಕಾರಿ ಪಿ.ಎನ್. ಲೋಕೇಶ್, ಕಾಲೇಜು ಪ್ರಾಂಶುಪಾಲ ಏಕನಾಥ, ನಿರ್ಮಿತಿ ಕೇಂದ್ರದ ಎಸ್. ರವಿ, ಕಾಲೇಜು ಉಪನ್ಯಾಸಕರು, ಸಿಬ್ಬಂದಿ ಇದ್ದರು.