ಎಲ್ಲಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು – ಕವಿವಾಣಿ ಸ್ಮರಿಸಿದ ಸಿಎಂ

ಸುದ್ದಿ360 ಹೈದರಾಬಾದ್ ಜು.02: ಎಲ್ಲಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು.’’ಎಂಬ ಕವಿವಾಣಿಯಂತೆ ಕನ್ನಡನಾಡಿನಿಂದ ಹೈದರಾಬಾದಿನಲ್ಲಿ ನೆಲೆಸಿದ್ದರೂ ಕನ್ನಡದ ಕಂಪು ಹಾಗೂ ಭಾಷೆಯನ್ನು ಬಿಟ್ಟಿಲ್ಲ. ನಮಗಿಂತ ಅಚ್ಚಕಟ್ಟಿನ ಕನ್ನಡದ ಪ್ರೇಮಿಗಳು ನೀವು’ ಎಂದು ಮುಖ್ಯಮಂತ್ರಿಗಳು ಬಸವರಾಜ ಬೊಮಾಯಿ ಅವರು ತಿಳಿಸಿದರು.

ಅವರು ಇಂದು ಕಾಚಿಗುಡದ ಲಿಂಗಂಪಲ್ಲಿಯಲ್ಲಿರುವ ನೃಪತುಂಗ ಶಾಲೆಯಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಮಾತನಾಡಿದರು. ನೃಪತುಂಗ ಕನ್ನಡದ ಆದಿಕವಿಯ ಹೆಸರಿನಲ್ಲಿ ಸಂಸ್ಥೆಯನ್ನು ಕಟ್ಟಿ ಸಾವಿರಾರು ಮಕ್ಕಳಿಗೆ ವಿದ್ಯೆ ನೀಡುತ್ತಿರುವುದು ದೊಡ್ಡ ಕೆಲಸ. ಇದರ ಸ್ಥಾಪಕರಿಗೆ ಹಾಗೂ ಪದಾಧಿಕಾರಿಗಳು ಅಭಿನಂದನೆಗೆ ಅರ್ಹರು.

ಹೈದರಾಬಾದಿನ ಕನ್ನಡ ಸಂಘದ ಸಮುದಾಯ ಭವನ ನಿರ್ಮಾಣಕ್ಕೆ ನೆರವು:

ಹೈದರಾಬಾದಿನಲ್ಲಿರುವ ಕನ್ನಡ ಸಂಘಕ್ಕೆ ಸಮುದಾಯ ಭವನ ನಿರ್ಮಾಣ ಮಾಡಲು ನೆರವು ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸರ್ಕಾರ ನಿಮ್ಮೊಂದಿಗಿದೆ

ನಿಮ್ಮ ಆಗುಹೋಗುಗಳಲ್ಲಿ ಸರ್ಕಾರ ನಿಮ್ಮೊಂದಿಗಿದೆ. ನಿಮ್ಮ ಸಂಸ್ಥೆಗಳಿಗೆ, ಸಂಘಟನೆಗಳಿಗೆ ಸರ್ಕಾರ ನೆರವಾಗುತ್ತದೆ. ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸುವ ಎಲ್ಲಾ ಕಾರ್ಯಗಳಿಗೆ ಸರ್ಕಾರ ಬೆಂಬಲವಾಗಿ ನಿಲ್ಲಲಿದೆ. ಸೊಲ್ಲಾಪುರ, ಗೋವಾ, ಕಾಸರಗೋಡು ಗಳಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲು ಅನುದಾನ ನೀಡಲಾಗಿದ್ದು, ಅಂತೆಯೇ ಇಲ್ಲಿಯೂ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಇಲ್ಲಿನ ಕನ್ನಡದ ಮಕ್ಕಳ ವಿದ್ಯಾರ್ಜನೆಗಾಗಿಯೂ ಅಗತ್ಯ ನೆರವು ಒದಗಿಸಲು ಸಿದ್ಧ ತಾಯಿನಾಡಿನಿಂದ ದೂರ ಬಂದಿದ್ದರೂ ತಾಯಿನಾಡನ್ನು ಮರೆತಿಲ್ಲ. ಮುಂದಿನ ಪೀಳಿಗೆಗೂ ಅದೇ ಸಂಬಂಧವನ್ನು ಉಳಿಸುವುದು ಅಗತ್ಯ. ಕನ್ನಡನಾಡು ಹಾಗೂ ಸರ್ಕಾರ ನಿಮ್ಮ ಜೊತೆಗೆ ಇದೆ. ಗಡಿಭಾಗದ ಹಲವಾರು ಸಮಸ್ಯೆಗಳು ನನ್ನ ಗಮನಕ್ಕೆ ಬಂದಿದೆ. ಅವುಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ. ಗಡಿ ಅಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪಿಸಲಾಗಿದ್ದು, ಅದರ ಅಧ್ಯಕ್ಷರನ್ನು ಇಲ್ಲಿಗೆ ಕಳುಹಿಸಿಕೊಟ್ಟು ಅಗತ್ಯವಿರುವ ನೆರವನ್ನು ಒದಗಿಸಲಾಗುವುದು ಎಂದರು.

ನಾಟ್ಯ, ಸಾಹಿತ್ಯರಂಗದಲ್ಲಿ ಅಭಿವೃದ್ಧಿಯ ದೃಷ್ಟಿಯಿಂದ ಎಲ್ಲರನ್ನು ಒಂದುಗೂಡಿಸುವ ಕೆಲಸವನ್ನು ಅದ್ಭುತವಾಗಿ ಮಾಡಲಾಗಿದೆ. 90 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇಲ್ಲಿದ್ದು, 6 ಲಕ್ಷಕ್ಕಿಂತ ಹೆಚ್ಚು ಮತದಾರರು ಇಲ್ಲಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಸಂಖ್ಯೆ ಬಹಳ ಮುಖ್ಯ. ಆದರೆ ಸಂಖ್ಯೆಗಿಂತಲೂ ಸತ್ವ ಬಹಳ ಮುಖ್ಯ . ರಾಜ್ಯದ ಎಲ್ಲ ಜನ ಎಷ್ಟು ಸುಸಂಸ್ಕøತವಾಗಿ ಮತ್ತೊಂದು ರಾಜ್ಯದಲ್ಲಿರಬಹುದು. ತಮ್ಮ ದುಡಿಮೆಯನ್ನು ಅರಸಿ ಬಂದರೂ ಇಲ್ಲಿಯ ಎಲ್ಲಾ ಆಗುಹೋಗುಗಳಲ್ಲಿ ಬೆರೆತು, ಸಾಮಾಜಿಕ ವಾತಾವರಣದಲ್ಲಿ ಬೆರೆತು, ತಾವೂ ವಿವಿಧ ಕ್ಷೇತ್ರಗಳಲ್ಲಿ ಮುಂದೆ ಬಂದು ತಾವು ಮಾಡುವ ಕೈಂಕರ್ಯದ ಜೊತೆಗೆ ಕನ್ನಡ, ಭಾಷೆ, ಕನ್ನಡತನವನ್ನು ಎತ್ತಿಹಿಡಿದಿರುವುದು ಅಭಿನಂದಾರ್ಹ ಎಂದರು.

ನಮ್ಮ ಹೃದಯಗಳು ಒಂದೇ

ಕನ್ನಡ ಮತ್ತು ಸುತ್ತಮುತ್ತಲಿನ ರಾಜ್ಯಗಳ ಅನ್ಯೋನ್ಯ ಸಂಬಂಧ ಇತಿಹಾಸ ಸಾರುತ್ತದೆ. ಗಡಿ ನಮ್ಮನ್ನು ಬೇರೆ ಮಾಡಿದರೂ ನಮ್ಮ ಹೃದಯಗಳು ಒಂದೇ ಆಗಿದೆ. ಕನ್ನಡ ಎಂಬ ಭಾವ ಬಹಳ ದೊಡ್ಡದು. ಹುಟ್ಟಿರುವ ಸ್ಥಳ, ಮನೆ, ಕುಟುಂಬ, ನಾವು ಓದಿದ ಪಾಠ ಕಲಿಸಿದ ಗುರುಗಳು, ಗೆಳೆಯರ ಬಳಗ ನಮ್ಮನ್ನು ಕಟ್ಟಿ ಹಾಕುತ್ತದೆ. ಕನ್ನಡ ಭಾಷೆ ಶ್ರೀಮಂತ ಭಾಷೆ. ಅತ್ಯಂತ ಆದಿಕಾಲದ ಭಾಷೆ. ಭಾರತದ ಭಾಷೆಗಳಲ್ಲಿ ಅತ್ಯಂತ ಪ್ರಾಚೀನ ಭಾಷೆ ಕನ್ನಡ ಎಂಬುದಕ್ಕೆ ಪುರಾವೆಗಳೂ ಇವೆ. ಕಾಲಕಾಲಕ್ಕೆ ಅದನ್ನು ಕವಿಗಳು, ಲೇಖಕರು, ಅದನ್ನು ಶ್ರೀಮಂತಗೊಳಿಸಿದ್ದಾರೆ. ಕನ್ನಡಿಗರ ಸಾಧನೆ ವಿಶ್ವಮಟ್ಟದಲ್ಲಿ ಆಗಿದೆ. ಅತಿ ಹೆಚ್ಚಿನ ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿದ್ದೇವೆ. ಹಲವಾರು ರಂಗಗಳಲ್ಲಿ ಕನ್ನಡಿಗರು ದೇಶವಿದೇಶಗಳಲ್ಲಿ ಸಾಧನೆ ಮಾಡಿದ್ದಾರೆ. ಬೇರೆ ದೇಶಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕನ್ನಡ ಸಂಘಗಳಿವೆ. ನಾವು ಎಲ್ಲೇ ಹೋದರೂ ನಮ್ಮತನವನ್ನು ಬಿಟ್ಟುಕೊಡುವುದಿಲ್ಲ. ಸ್ವಾಭಿಮಾನವನ್ನು ಬಿಟ್ಟುಕೊಡುವುದಿಲ್ಲ. ಕನ್ನಡಿಗರ ಜೀವನಗುಣಮಟ್ಟವನ್ನು ಹೆಚ್ಚಿಸಲು ಇನ್ನಷ್ಟು ಗಟ್ಟಿಯಾಗಿ ಕನ್ನಡ ನಾಡನ್ನು ಕಟ್ಟುವ ಸಂಕಲ್ಪವನ್ನು ಮಾಡುವುದಾಗಿ ತಿಳಿಸಿದರು.

admin

admin

Leave a Reply

Your email address will not be published. Required fields are marked *

error: Content is protected !!