ಎಲ್ಲಾ ರೈತಸಂಘಟನೆಗಳು ಒಂದಾಗಲಿವೆ : ಎಚ್.ಆರ್. ಬಸವರಾಜಪ್ಪ

ಸುದ್ದಿ360 ದಾವಣಗೆರೆ.ಜು.01: ನನ್ನನ್ನು ರಾಜ್ಯಾಧ್ಯಕ್ಷನಾಗಿ ಆಯ್ಕೆ ಮಾಡಿದ ಮೇಲೆ ಎಲ್ಲಾ ರೈತ ಸಂಘಟನೆಗಳು ಒಂದಾಗುವ ಆಸಕ್ತಿ ತೋರಿವೆ. ನಾವೆಲ್ಲರೂ ಒಂದಾಗಲಿದ್ದೇವೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಎಚ್.ಆರ್. ಬಸವರಾಜಪ್ಪ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನೇಕ ಸಂಘಟನೆಗಳ ಮುಖಂಡರು ನಮಗೆ ಕರೆ ಮಾಡಿ ಮಾತನಾಡಿ, ತಮ್ಮ ಜಿಲ್ಲೆಗಳಿಗೆ ಭೇಟಿನೀಡುವಂತೆ ಆಹ್ವಾನ ನೀಡಿದ್ದಾರೆ. ಎಲ್ಲಾ ಸಂಘಟನೆಗಳು ಒಂದಾಗಿ ಒಗ್ಗಟ್ಟಿನಿಂದ ಮುಂದೆ ಸಾಗಿ, ರೈತರ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಿದ್ದೇವೆ ಎಂದರು.

ಒಗ್ಗಟ್ಟಿನಿಂದ ಹೋರಾಟ

ಇದುವರೆಗೂ ಎಷ್ಟು ಬಾರಿ ಹೋರಾಟ ನಡೆಸಿದರೂ ಮೂರು ಕೃಷಿ ಕಾಯ್ದೆಗಳನ್ನು ರಾಜ್ಯ ಸರ್ಕಾರ ಇದುವರೆಗೂ ಹಿಂಪಡೆದಿಲ್ಲ. ನಾವುಗಳು ಒಗ್ಗಟ್ಟಾಗಿ ಹೋರಾಟ ಮಾಡುವ  ಮೂಲಕ ಈ ಕಾಯ್ದೆಗಳನ್ನು ರದ್ದುಗೊಳಿಸೋಣ ಎಂಬುದಾಗಿ ಎಚ್ ಆರ್ ಬಸವರಾಜಪ್ಪ  ರೈತರಿಗೆ ಕರೆ ನೀಡಿದರು.

ಆರೋಪ ಹೊತ್ತಿರುವ ಕೋಡಿಹಳ್ಳಿ ಚಂದ್ರಶೇಖರ್ ಹಸಿರು ಶಾಲು ಧರಿಸದಿರಲಿ

ಹಣ ಪಡೆಯುವ ಮೂಲಕ ರಾಜ್ಯದ ಎರಡು ಪ್ರಮುಖ ಹೋರಾಟಗಳಿಗೆ ತಿಲಾಂಜಲಿ ಇಟ್ಟಿದ್ದಾರೆ ಎಂಬ ಆರೋಪ ಹೊತ್ತಿರುವ ಕೋಡಿಹಳ್ಳಿ ಚಂದ್ರಶೇಖರ್, ತಮ್ಮ ಮೇಲಿನ  ಆರೋಪದಿಂದ ಮುಕ್ತರಾಗುವವರೆಗೂ  ರೈತರ ಘನತೆಯ ಚಿಹ್ನೆ ಯಾಗಿರುವ ಹಸಿರು ಶಾಲನ್ನು ಧರಿಸಬಾರದು ಎಂದು ಅವರು ಆಗ್ರಹಿಸಿದರು.

ಕೆಎಸ್ ಆರ್ ಟಿಸಿ ಮುಷ್ಕರ ನಿಲ್ಲಿಸಲು 35ಕೋಟಿ ರೂ. ಲಂಚ ಪಡೆದಿದ್ದಾರೆ ಹಾಗೂ ಮೂರು ಕೃಷಿ ಕಾಯ್ದೆ ವಿರುದ್ಧದ ಹೋರಾಟ ನಿಲ್ಲಿಸಲು 2,500 ಕೋಟಿ ರೂಪಾಯಿ ಪಡೆದಿದ್ದಾರೆ ಎಂದು ಸುದ್ದಿ ವಾಹಿನಿಯೊಂದರಲ್ಲಿ ಸ್ಟಿಂಗ್ ಆಪರೇಶನ್ ಮೂಲಕ ಕೋಡಿಹಳ್ಳಿ ವಿರುದ್ಧ  ಆರೋಪಿಸಲಾಗಿತ್ತು. ಆದರೆ ಕೋಡಿಹಳ್ಳಿಯವರು ಈ ಆರೋಪಗಳನ್ನು ಅಲ್ಲಗಳೆಯುವ ಪ್ರಯತ್ನ ಮಾಡಿಲ್ಲ. ಕೋಡಿಹಳ್ಳಿಯವರಿಗೆ ಮರ್ಯಾದೆ ಇದೆಯೋ ಇಲ್ಲವೋ ಗೊತ್ತಿಲ್ಲ. ಇದ್ದಿದ್ದರೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ, ತನಿಖೆಗೆ ಒತ್ತಾಯಿಸಬೇಕಿತ್ತು. ಆರೋಪಿಸಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಬೇಕಿತ್ತು. ಆದರೆ ಅವರು ಅದನ್ನು ಮಾಡಲಿಲ್ಲ. ಇದೆಲ್ಲಾ ನೋಡಿದರೆ ಪರೋಕ್ಷವಾಗಿ ಈ ಆರೋಪಗಳನ್ನು ಅವರು ಒಪ್ಪಿಕೊಂಡಂತಿದೆ ಎಂದರು.

ನಂಜುಂಡಸ್ವಾಮಿ ಹಾಗೂ ಅನೇಕ ಹಿರಿಯ ರೈತ ಮುಖಂಡರುಗಳು ಕಟ್ಟಿರುವ ಈ ಸಂಘ ಅನೇಕ ಹೋರಾಟಗಳ ಮೂಲಕ ತ್ಯಾಗ, ಬಲಿದಾನ ಮಾಡಿರುವ ಸಂಘಟನೆಯಾಗಿದ್ದು, ಇಂತಹ ರೈತ ಸಂಘಟನೆಗೆ ಅಪಖ್ಯಾತಿ ಬಂದಿದೆ. ರೈತಸಂಘದ ರಾಜ್ಯ ಪದಾಧಿಕಾರಿಗಳು ಸಭೆ ಕರೆದು, ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಸಭೆಯು ಒಮ್ಮತದಿಂದ ಕೋಡಿಹಳ್ಳಿಯವರನ್ನು ವಜಾ ಮಾಡಿದೆ. ಸಂಯುಕ್ತ ಕಿಸಾನ್ ಹೋರಾಟ ಸಂಘಟನೆಯ ಸಂಚಾಲಕ ಸ್ಥಾನದಿಂದಲೂ  ಕೋಡಿಹಳ್ಳಿಯವರನ್ನು ವಜಾ ಮಾಡಿದ್ದಾರೆ.

ರಾಜ್ಯಾಧ್ಯಕ್ಷರಾಗಿದ್ದ ಕೋಡಿಹಳ್ಳಿ ಅವರು ಸಾಲಮನ್ನಾ ಸೇರಿದಂತೆ ಯಾವುದೇ ಲೆಕ್ಕಪತ್ರಗಳನ್ನು ಇದುವರೆಗೆ ಸಲ್ಲಿಸಿಲ್ಲ. ಅವರು ಕೂಡಲೇ ಲೆಕ್ಕಪತ್ರ ನೀಡಬೇಕು. ತನಿಖೆ ಮುಗಿದು ಅವರು ಆರೋಪ ಮುಕ್ತರಾಗುವವರೆಗೆ ಹಸಿರು ಶಾಲನ್ನು ಧರಿಸಬಾರದು ಎಂದು ಆಗ್ರಹಿಸಿದ ಅವರು, ಈಗಾಗಲೇ ನಮ್ಮ ಸಂಘದ ಸಂಸ್ಥಾಪಕರಲ್ಲಿ ಒಬ್ಬರಾದ ಡಾ. ಚಿಕ್ಕಸ್ವಾಮಿ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ರಚಿಸಲಾಗಿದ್ದು, ವರದಿ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಜುಲೈ 21ರಂದು ನವಲಗುಂದ ರೈತ ಹುತಾತ್ಮ  ದಿನಾಚರಣೆ , ಪದಗ್ರಹಣ ನಡೆಯಲಿದ್ದು, ಶಂಕರಪ್ಪ ಅಂಬಲಿ, ಬಡಗಲಪುರ ನಾಗೇಂದ್ರಪ್ಪ ಸೇರಿದಂತೆ ರಾಜ್ಯದ ಎಲ್ಲ ರೈತ ಮುಖಂಡರು ಆಗಮಿಸಲಿದ್ದಾರೆ. ಈ ಸಂಬಂಧ ಧಾರವಾಡದಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ ಎಂದರು.

ರಸಗೊಬ್ಬರ ಅಭಾವ

ರಾಜ್ಯದಲ್ಲಿ ಕೃತಕ ರಸಗೊಬ್ಬರ ಅಭಾವ ತಲೆದೋರಿದ್ದು, ಕಾಳಸಂತೆಯಲ್ಲಿ ಗೊಬ್ಬರ ಮಾರಾಟವಾಗುತ್ತಿದೆ ಎಂದು ತಿಳಿದು ಬಂದಿದೆ.  ಮಾರಾಟ ಮಳಿಗೆ ಮುಂದೆ ಸ್ಟಾಕ್ ವಿವರ ಪ್ರಕಟಿಸಬೇಕು. ದರಪಟ್ಟಿ ಹಾಕಬೇಕು.  ಹಾಗೂ ರೈತ ಫಸಲ್ ಬಿಮಾ ಯೋಜನೆಯಲ್ಲಿ ಬಹಳಷ್ಟು ಲೋಪದೋಷ ಗಳಿದ್ದು, ಅದನ್ನು ಸರಿಪಡಿಸಬೇಕಿದೆ. ಜಿಲ್ಲೆಯಲ್ಲಿ ಕಛೇರಿಗಳನ್ನು ತೆರೆಯಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷ ಕುರುವ ಗಣೇಶ್, ಈಚಗಟ್ಟದ ಸಿದ್ಧವೀರಪ್ಪ, ಅಂಬಳ್ಳಿ ಶಿವಪ್ಪ, ನಜೀರ್ ಸಾಬ್ ಮೂಲಿಮನೆ, ಹೊನ್ನೂರು ಮುನಿಯಪ್ಪ, ಭರಮಣ್ಣ, ಕೆಂಚನಾಯ್ಕ, ರಾಜಾನಾಯ್ಕ ಇನ್ನಿತರರಿದ್ದರು.

admin

admin

Leave a Reply

Your email address will not be published. Required fields are marked *

error: Content is protected !!