ಎಷ್ಟು ದುಡ್ಡು ಕೊಟ್ಟರೆ ನಿಮ್ಮಹಣದ ದಾಹ ತೀರುತ್ತದೆ? – ಬಿಜೆಪಿಗೆ ರಣದೀಪ್ ಸಿಂಗ್ ಸುರ್ಜಿವಾಲ ತಾಕೀತು

ಬಿಟ್ಟರೆ ಬಿಜೆಪಿಯವರು ಕರ್ನಾಟಕವನ್ನೇ ಮಾರುತ್ತಾರೆ! – ಸುರ್ಜಿವಾಲ

ಸುದ್ದಿ360 ದಾವಣಗೆರೆ ಮಾ.6: ‘ಮುಖ್ಯಮಂತ್ರಿ ಬೊಮ್ಮಾಯಿಯವರೇ, ನಳೀನ್ ಕುಮಾರ್ ಕಟೀಲ್ ಹಾಗೂ ಜೆ.ಪಿ. ನಡ್ಡಾ ಅವರೇ ನಿಮ್ಮ ಬಿಜೆಪಿಗೆ ಹಣದ ದಾಹ ಎಷ್ಟಿದೆ ಎಂಬುದನ್ನು ಹೇಳಿ. ಎಷ್ಟು ದುಡ್ಡು ಕೊಟ್ಟರೆ ನಿಮ್ಮ ದಾಹ ತೀರುತ್ತದೆ ಎಂದು ತಿಳಿಸಿಬಿಡಿ. ಕರ್ನಾಟಕದ ಜನತೆಯೊಂದಿಗೆ ನಾವೆಲ್ಲರೂ ಸೇರಿಕೊಂಡು ದೇಣಿಗೆ ಸಂಗ್ರಹಿಸಿ ನಿಮಗೆ ಹಣ ಹೊಂದಿಸಿಕೊಡುತ್ತೇವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜಿವಾಲಾ ಬಿಜೆಪಿಯ ಭ್ರಷ್ಟಾಚಾರ ಕುರಿತು ಗುಡುಗಿದ್ದಾರೆ.

ಸಭೆಯಲ್ಲಿ ಬಿಜೆಪಿ ಭ್ರಷ್ಟಾಚಾರ ನಿಲ್ಲಿಸಿ ದಾವಣಗೆರೆ ಉಳಿಸಿ ಪೋಸ್ಟರ್ ಪ್ರದರ್ಶಿಸಿದ ‘ಕೈ’ ಮುಖಂಡರು.

ನಗರದ ಎಸ್‌ಎಸ್ ಬಡಾವಣೆಯ ಬಾಪೂಜಿ ಎಂಬಿಎ ಕಾಲೇಜು ಸಭಾಂಗಣದಲ್ಲಿ ಇಂದು ನಡೆದ ಕಾಂಗ್ರೆಸ್ ಮುಖಂಡರು ಹಾಗೂ ವಿಧಾನಸಭಾ ಚುನಾವಣೆ ಆಕಾಂಕ್ಷಿಗಳ ಸಭೆಯಲ್ಲಿ ಮಾತನಾಡಿ, ಬಿಜೆಪಿಯವರ ಲಂಚದ ದಾಹ ಸ್ವತಃ ಪಕ್ಷದ ಕಾರ್ಯಕರ್ತರನ್ನೇ ಬಲಿ ಪಡೆದು, ಹೆಣ್ಣು ಮಕ್ಕಳ ಸೌಭಾಗ್ಯವನ್ನೇ ಅಳಿಸುತ್ತಿದೆ.  ದಯವಿಟ್ಟು ನೀವು ನಿಮ್ಮದೇ ಪಕ್ಷದ ಸಂತೋಷ್ ಪಾಟೀಲ್ ಅವರ ವಿಧವೆ ಪತ್ನಿಗೆ ಹಾಗೂ ಟಿ.ಎನ್. ಪ್ರಶಾಂತ್ ಅವರ ಪುತ್ರಿಗೆ ಅವರ ಹಣ ವಾಪಸ್ ನೀಡಿ ಪುಣ್ಯ ಕಟ್ಟಿಕೊಳ್ಳಿ’ ಎಂದು ಹೇಳಿದರು.

ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮಾತನಾಡಿ, ಹಿಂದಿದ್ದ ಕಾಂಗ್ರೆಸ್ ಸರಕಾರ ತಾನು ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಿದೆ ಅದೇ ರೀತಿ ಈ ಬಾರಿಯ ಭರವಸೆಗಳನ್ನೂ ಈಡೇರಿಸಲಿದೆ. ಕಾಂಗ್ರೆಸ್‌ಗೆ ಕಾರ್ಯಕರ್ತರೇ ಬಲ. ಪಕ್ಷ ಯಾರಿಗೇ ಟಿಕೆಟ್ ನೀಡಿದರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಂಬ ಭಾವನೆಯಿಂದ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿ ಗೆಲ್ಲಿಸಲು ಪಣ ತೊಡಬೇಕು ಎಂದು ಕರೆ ನೀಡಿದರು.

ಬಿಟ್ಟರೆ ಕರ್ನಾಟಕವನ್ನೇ ಮಾರುತ್ತಾರೆ!

ಈಗಾಗಲೆ ಸರಕಾರಿ ನೌಕರಿಯ ಎಲ್ಲ ಹುದ್ದೆಗಳು, ವರ್ಗಾವಣೆ ಸೇರಿದಂತೆ ಎಲ್ಲ ಹಂತದಲ್ಲಿ ಲಂಚಕ್ಕೆ ಮಾರಿಕೊಂಡಿರುವ ರಾಜ್ಯ ಬಿಜೆಪಿ ಸರ್ಕಾರ, ಮುಖ್ಯಮಂತ್ರಿ ಹುದ್ದೆಗೂ ಬೆಲೆ ನಿಗದಿ ಮಾಡಿ, ಮಾರಾಟಕ್ಕಿಟ್ಟಿದೆ. ಬಿಜೆಪಿಗರನ್ನು ಹೀಗಯೇ ಬಿಟ್ಟರೆ ಮುಂದೊಂದು ದಿನ ಕರ್ನಾಟಕವನ್ನೇ ಮಾರುವುದರಲ್ಲಿ ಅನುಮಾನವಿಲ್ಲ ಎಂದು ಸುರ್ಜಿವಾಲಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಮೇ 1ರಿಂದಲೇ ಭಾಗ್ಯಗಳ ಗ್ಯಾರಂಟಿ

ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ರಚನೆಯಾಗುವುದು ಗ್ಯಾರಂಟಿ. ಹಾಗೆಯೇ  ನಾವೀಗ ಗ್ಯಾರಂಟಿ ನೀಡಿರುವ ಗೃಹಲಕ್ಷ್ಮೀ, ಗೃಹ ಜ್ಯೋತಿ ಹಾಗೂ ಅನ್ನ ಭಾಗ್ಯ ಯೋಜನೆಗಳನ್ನು ಮೇ 1ರಿಂದಲೇ ಅನ್ವಯವಾಗುವಂತೆ  ಜಾರಿಗೊಳಿಸುತ್ತೇವೆ ಎಂದು ಭರವಸೆ ನೀಡಿದರು. ಇದೇ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಮುಂದಿನ ಎರಡು ತಿಂಗಳನ್ನು ಕರ್ನಾಟಕದ ಒಳಿತಿಗಾಗಿ ಹಾಗೂ ಕಾಂಗ್ರೆಸ್‌ಗಾಗಿ ಮೀಸಲಿಡಬೇಕು. ಪ್ರತಿ ಮನೆಗೆ ತೆರಳಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ತಲುಪಿಸಬೇಕು ಎಂದು ಕರೆ ನೀಡಿದರು.

ಇದೇ ವೇಳೆ ಪಕ್ಷದ ಗ್ಯಾರಂಟಿ ಕಾರ್ಡ್‌ಗಳನ್ನು ರಣದೀಪ್ ಸಿಂಗ್ ಸುರ್ಜಿವಲ ಬಿಡುಗಡೆ ಮಾಡಿದರು. ಸಲೀಂ ಅಹ್ಮದ್ ಸೇರಿದಂತೆ ಜಿಲ್ಲಾಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

admin

admin

Leave a Reply

Your email address will not be published. Required fields are marked *

error: Content is protected !!