ಸುದ್ದಿ360 ದಾವಣಗೆರೆ, ಆ.4: ಈಗಿರುವ ತುಂಡು ಭೂಮಿಯೇ ನಮ್ಮ ಜೀವನಾಧಾರ. ಸರಕಾರ ನಮಗೆ ಎಷ್ಟೇ ಹಣ ನೀಡಿದರೂ ಭೂಮಿ ಬಿಟ್ಟುಕೊಡಲು ನಾವು ಸಿದ್ಧರಿಲ್ಲ ಎಂಬುದಾಗಿ ತಾಲೂಕಿನ ಮೆಳ್ಳೇಕಟ್ಟೆ, ಅಣಜಿ ಮತ್ತು ಲಿಂಗಾಪುರ ಗ್ರಾಮಗಳ ರೈತರು ಇಂದು 45 ನಿಮಿಷಗಳ ಕಾಲ ಜಿಲ್ಲಾಡಳಿತ ಭವನ ವೃತ್ತದಲ್ಲಿ ಪಿಬಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಮೆಳ್ಳೇಕಟ್ಟೆ, ಅಣಜಿ, ಲಿಂಗಾಪುರ ಗ್ರಾಮಗಳ ವ್ಯಾಪ್ತಿಯಲ್ಲಿ ಕೈಗಾರಿಕಾ ಕಾರಿಡಾರ್ ನಿರ್ಮಾಣದ ಉದ್ದೇಶದಿಂದ 1156 ಎಕರೆ ಫಲವತ್ತಾದ ಕೃಷಿ ಭೂಮಿ ಸ್ವಾಧೀನಕ್ಕೆ ಮುಂದಾಗಿರುವ ಕೆಐಎಡಿಬಿ ಕ್ರಮ ಖಂಡಿಸಿದರು. ಏನೇ ಆದರೂ ನಮ್ಮ ಕೊನೆಯುಸಿರು ಇರುವತನಕ ನಮ್ಮ ಜೀವನಾಧಾರವಾಗಿರುವ ಭೂಮಿಯನ್ನು ಬಿಡೆವು ಎಂಬುದಾಗಿ ಘೋಷಣೆ ಹಾಕಿದ ರೈತರು ಮೊದಲು ಅಣಜಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.
ಕೃಷಿಗೆ ಅನುಕೂಲವಾಗುವಂತೆ ಈ ಹಿಂದೆ 22 ಕೆರೆಗಳಿಗೆ ನೀರುಣಿಸುವ ಯೋಜನೆ ಅಡಿ 650 ಕೋಟಿ ರೂ.ಗಳನ್ನು ಸರಕಾರವೇ ನೀಡಿದೆ. ಈಗ ಅದೇ ಯೋಜನೆ ಅಡಿ ಈ ಭಾಗದ ನಾಲ್ಕು ಕೆರೆಗಳು ತುಂಬಿವೆ. ಇದರಿಂದ ಖುಷಿಗೊಂಡಿದ್ದ ರೈತರು ಇದೀಗ ಸರ್ಕಾರದ ಕೈಗಾರಿಕಾ ಕಾರಿಡಾರ್ ಯೋಜನೆಯಿಂದ ರೈತರ ಜೀವನಕ್ಕೆ ಖುತ್ತು ತಂದಿದೆ. ನಮ್ಮದು ಎ ಗ್ರೇಡ್ ಭೂಮಿ. ಇಲ್ಲಿ ಒಂದು ಅಥವಾ ಎರಡು ಎಕರೆ ಭೂಮಿ ಹೊಂದಿರುವ ಸಣ್ಣ ಹಿಡುವಳಿದಾರರೇ ಹೆಚ್ಚಾಗಿದ್ದಾರೆ. ಸರಕಾರ ಭೂ ಸ್ವಾಧೀನ ಆದೇಶ ಹಿಂಪಡೆಯದಿದ್ದರೆ ಕೊನೆ ಉಸಿರಿರುವವರೆಗೂ ಹೋರಾಟ ಮಾಡಲು ನಾವು ಸಿದ್ಧರಿದ್ದೇವೆ.
ಡಿ.ಟಿ. ಹನುಮಂತಪ್ಪ, ರೈತ.
ನಂತರ ಟ್ರ್ಯಾಕ್ಟರ್‌ಗಳಲ್ಲಿ ನಗರದ ಪಿಬಿ ರಸ್ತೆಯ ಗಾಂಧಿ ವೃತ್ತದಲ್ಲಿ ಬಂದು ಜಮಾಯಿಸಿದ ರೈತರು, ಅಲ್ಲಿಂದ ಅರುಣ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು ಅಲ್ಲಿಂದ ನೇರವಾಗಿ ಟ್ರ್ಯಾಕ್ಟರ್, ಇತರೆ ವಾಹನಗಳಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದರು. ಜಿಲ್ಲಾಡಳಿತ ಭವನ ವೃತ್ತದಲ್ಲಿ ಪಿಬಿ ರಸ್ತೆ ತಡೆ ನಡೆಸಿದ ರೈತರು, ಡಿಸಿ ಸ್ಥಳಕ್ಕೆ ಬಂದು ಮನವಿ ಆಲಿಸುವಂತೆ ಒತ್ತಾಯಿಸಿದರು. ಸುಮಾರು 45 ನಿಮಿಷ ರಸ್ತೆ ತಡೆ ನಡೆಸಿದ್ದರಿಂದ ವಾಹನ ದಟ್ಟಣೆ ಹೆಚ್ಚಾಗಿ ಸಂಚಾರಕ್ಕೆ ತೊಂದರೆಯಾಯಿತು. ಬಳಿಕ ಸ್ಥಳಕ್ಕೆ ಬಂದ ಅಪರ ಜಿಲ್ಲಾಧಿಕಾರಿಗಳು ರೈತರಿಂದ ಮನವಿ ಸ್ವೀಕರಿಸಿದರು.
ಈ ವೇಳೆ ಮಾತನಾಡಿದ ರೈತರು, ಮೂರು ಗ್ರಾಮಗಳ ವ್ಯಾಪ್ತಿಯಲ್ಲಿ ಫಲವತ್ತಾದ ಎರೆ ಭೂಮಿ ಇದ್ದು, ರೈತರು ಅಡಕೆ, ತೆಂಗು, ಮೆಕ್ಕೆಜೋಳ ಸೇರಿ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಈ ಭಾಗದಲ್ಲಿ 1153 ಎಕರೆ ಕೃಷಿ ಭೂಮಿಯನ್ನು ಸರಕಾರ ಡಿ ನೋಟಿಫಿಕೇಷನ್ ಮಾಡಿದೆ. ಈ ಬಗ್ಗೆ ರೈತರಿಗೆ ಯಾವುದೇ ಮಾಹಿತಿ ನೀಡಿಲ್ಲ. ಇತ್ತೀಚೆಗೆ ಕರ್ನಾಟಕ ಕೈಗಾರಿಕ ಪ್ರದೇಶ ಅಭಿವೃದ್ಧಿ ಮಂಡಳಿ(ಕೆಐಎಡಿಬಿ) ಅಧಿಕಾರಿಗಳು ಒಮ್ಮಿಂದೊಮ್ಮೆಲೆ ಭೂಸ್ವಾಧೀನ ನೋಟಿಸ್ ಕೊಟ್ಟಿದ್ದರು. ಅದಕ್ಕೆ ನಾವು ಆಕ್ಷೇಪಣೆ ಸಲ್ಲಿಸಿದ್ದೇವೆ. ಆದರೂ ಅಧಿಕಾರಿಗಳು ಭೂಮಿ ಸ್ವಾಧೀನ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದಾರೆ. ಪಟ್ಟಭದ್ರ ಹಿತಾಸಕ್ತಿಗಳು ವಾಮ ಮಾರ್ಗದಲ್ಲಿ ಮುಗ್ಧ ರೈತರ ಜೀವನಾಧಾರ ಭೂಮಿಯನ್ನು ಕಸಿಯಲು ಹೊಂಚು ಹಾಕಿವೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.
ಕೆಐಎಡಿಬಿ ವಿಶೇಷ ಭೂ ಸ್ವಾಧೀನಾಧಿಕಾರಿಗಳು 1156 ಎಕರೆ ಭೂಮಿ ಸ್ವಾಧೀನ ಮಾಡಿಕೊಳ್ಳುವುದಾಗಿ ಒಟ್ಟು 258 ರೈತರಿಗೆ ನೋಟೀಸ್ ನೀಡಿದ್ದಾರೆ. ಈ ಪೈಕಿ ಮೆಳ್ಳೆಕಟ್ಟೆ ಗ್ರಾಮದ ರೈತರ 900 ಎಕರೆ ಭೂಮಿ ಇದೆ. ಈಗ ಇರುವ ಭೂಮಿ ಕಳೆದುಕೊಂಡರೆ ಯಾರಿಗೂ ಒಂದು ತುಂಡು ಭೂಮಿ ಉಳಿಯುವುದಿಲ್ಲ. ಹೀಗಾಗಿ ನೋಟಿಸ್ ಪಡೆದಿರುವ ಎಲ್ಲಾ ರೈತರು ಸಾಮೂಹಿಕ ನಾಯಕತ್ವದಲ್ಲಿ ಹೋರಾಟ ನಡೆಸುತ್ತಿದ್ದೇವೆ. ಈಗಾಗಲೇ ಸಿರಿಗೆರೆ ಶ್ರೀಗಳ ಆಶೀರ್ವಾದ ಪಡೆದು, ಒಗ್ಗಟ್ಟಾಗಿ ಹೋರಾಟ ಮಾಡುವುದಾಗಿ ಮಾತು ಕೊಟ್ಟಿದ್ದೇವೆ. ಸರಕಾರ ಎಷ್ಟೇ ಹಣ ನೀಡಿದರೂ ಭೂಮಿ ಬಿಟ್ಟುಕೊಡಲು ಸಿದ್ಧರಿಲ್ಲ ಎಂಬುದು ರೈತರ ಒಕ್ಕೊರಲ ಧ್ವನಿಯಾಗಿತ್ತು.
ಪ್ರತಿಭಟನೆಯಲ್ಲಿ ಎಸ್.ಕೆ ಚಂದ್ರಪ್ಪ, ವೀರಬಸಪ್ಪ, ಎಂ.ಎಸ್. ನಾಗರಾಜ್, ವೀರಭದ್ರಪ್ಪ, ಸಿ.ಟಿ. ಕುಮಾರ್, ರಾಜಶೇಖರ್, ಮಲ್ಲಿಕಾರ್ಜುನ, ಲಿಂಗರಾಜ್, ಶೋಭಾ, ಪವಿತ್ರಾ, ನವೀನ ಇತರರಿದ್ದರು.