ಸುದ್ದಿ360 ದಾವಣಗೆರೆ: ದಕ್ಷಿಣ ವಿಧಾನಸಭೆ ಕ್ಷೇತ್ರದ ಹಿರಿಯ ಶಾಸಕರು, ಅಖಿಲ ಭಾರತ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷರೂ ಆದ ಶಾಮನೂರು ಶಿವಶಂಕರಪ್ಪನವರು ಇದೇ ಜೂ.16ರಂದು 93 ವಸಂತಗಳನ್ನು ಪೂರೈಸಲಿದ್ದಾರೆ. ಈ ಪ್ರಯುಕ್ತ ಅವರ ಅಭಿಮಾನಿ ಬಳಗ ನಗರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಎಸ್‌ಎಸ್ ಜನ್ಮದಿನದ ಪ್ರಯುಕ್ತ ವಿನ್ಯಾಸಗೊಳಿಸಿರುವ ಲೋಗೋ ಬಿಡುಗಡೆ ಮಾಡಿ ಮಾತನಾಡಿದ ಅವರು, ಎಸ್‌ಎಸ್ ಜನ್ಮದಿನದ ಅಂಗವಾಗಿ ಅಂದು ನಗರದ ಎಲ್ಲ ಅನಾಥಾಶ್ರಮ, ವೃದ್ಧಾಶ್ರಮಗಳ ನಿವಾಸಿಗಳಿಗೆ ಸಿಹಿ ಊಟ, ಗೋಶಾಲೆ ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಮಾಡಲಾಗಿದೆ. ಕೆಲವು ವೃದ್ಧಾಶ್ರಮ, ಅನಾಥಾಶ್ರಮದವರು ನಿವಾಸಿಗಳಿಗೆ ಬಟ್ಟೆ, ಸೋಪು ಮತ್ತಿತರ ಅಗತ್ಯ ವಸ್ತುಗಳನ್ನು ನೀಡುವಂತೆ ಕೇಳಿದ್ದು, ಅವುಗಳನ್ನೂ ಒದಗಿಸಲಾಗುವುದು. ಇದರೊಂದಿಗೆ ನಗರದ ಹಲವೆಡೆ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
1000 ಸಸಿ ನೆಡುವ ಕಾರ್ಯ
ಮಹಾನಗರ ಪಾಲಿಕೆ ಪ್ರತಿಪಕ್ಷದ ಮಾಜಿ ನಾಯಕ ಗಡಿಗುಡಾಳ್ ಮಂಜುನಾಥ್ ಮಾತನಾಡಿ, ನಗರದಲ್ಲಿ 1000 ಸಸಿಗಳನ್ನು ನೆಡಲಾಗುವುದು. ಜನುಮದಿನದಂದು ಆರಂಭವಾಗುವ ಸಸಿ ನೆಡುವ ಕಾರ್ಯ ಒಂದು ವಾರಗಳತನಕ ನಡೆಯಲಿದೆ ಇದರೊಂದಿಗೆ ಜೂ.16ರಂದು ಎಂಸಿಸಿ ಎ ಬ್ಲಾಕ್‌ನಲ್ಲಿರುವ ವೃದ್ಧಾಶ್ರಮಕ್ಕೆ ಒಂದು ತಿಂಗಳಿಗೆ ಆಗುವಷ್ಟು ಕಿರಾಣಿ ಸಾಮಗ್ರಿ ನೀಡಲಾಗುವುದು ಎಂದು ತಿಳಿಸಿದರು.
93 ಮಂದಿಗೆ ಸನ್ಮಾನ
ದಾವಣಗೆರೆ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್ ಮಾತನಾಡಿ, ಶಾಮನೂರು ಶಿವಶಂಕರಪ್ಪ ಅವರ ಜನ್ಮ ದಿನದಂದು ದಕ್ಷಿಣ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯ ಪಕ್ಷದ ಹಿರಿಯ ಮುಖಂಡರು, ಮಹಿಳೆಯರು, ನಾನಾ ಕ್ಷೇತ್ರಗಳ ಸಾಧಕರು ಸೇರಿ 93 ಮಂದಿಯನ್ನು ಸನ್ಮಾನಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ಮಲ್ಲಿಕಾರ್ಜುನ್, ಮಹಿಳಾ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಾಕ್ಷಾಯಿಣಮ್ಮ, ಕವಿತಾ ಚಂದ್ರಶೇಖರ್, ಬ್ಲಾಕ್ ಅಧ್ಯಕ್ಷರಾದ ಶುಭಮಂಗಳ, ರಾಜೇಶ್ವರಿ, ರಾಜು ಭಂಡಾರಿ, ಯುವರಾಜ್, ಶ್ರೀಕಾಂತ್ ಬಂಗೇರ ಉಪಸ್ಥಿತರಿದ್ದರು.