ಸುದ್ದಿ360 ದಾವಣಗೆರೆ, ಏ.5: ಬಿಜೆಪಿ ರೈತ ಮೋರ್ಚಾ ಜಿಲ್ಲಾ ಸಮಾವೇಶ ಏ.6ರಂದು ಮಧ್ಯಾಹ್ನ 3 ಗಂಟೆಗೆ ನಗರದ ಮಾಗನೂರು ಬಸಪ್ಪ ಮೈದಾನದಲ್ಲಿ ಆಯೋಜಿಸಲಾಗಿರುವುದಾಗಿ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಸಂಸದೆ ಶೋಭಾ ಕರಂದ್ಲಾಜೆ, ರೈತ ಮೋರ್ಚಾದ ರಾಜ್ಯಾಧ್ಯಕ್ಷ ಈರಣ್ಣ ಕಡಾಡಿ, ಸಂಸದ ಜಿ.ಎಂ. ಸಿದ್ದೇಶ್ವರ್, ಶಾಸಕ ಎಸ್.ಎ. ರವಿಂದ್ರನಾಥ್ ಸೇರಿದಂತೆ ಬಿಜೆಪಿ ಶಾಸಕರು, ಸಚಿವರು ಪಾಲ್ಗೊಳ್ಳಲಿರುವುದಾಗಿ ಹೇಳಿದರು.
ನನ್ನನ್ನೂ ಒಳಗೊಂಡಂತೆ ದಾವಣಗೆರೆ ಉತ್ತರಕ್ಕೆ ಹಲವರು ಆಕಾಂಕ್ಷಿಗಳಿದ್ದೇವೆ. ನಾವು ಪಕ್ಷದ ನಿಲುವಿಗೆ ಬದ್ಧರಾಗಿದ್ದೇವೆ. ಪಕ್ಷ ಯಾರಿಗೆ ಟಿಕೇಟ್ ಕೊಟ್ಟರೂ ಸಹ ಅವರನ್ನು ಗೆಲ್ಲಿಸಲು ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ. ಎಸ್.ಎ. ರವೀಂದ್ರನಾಥ್ ಅವರು ಆರೋಗ್ಯದ ಸಮಸ್ಯೆಯ ಕಾರಣ ಚುನಾವಣೆಯಿಂದ ಹಿಂದೆ ಸರಿಯುವುದಾಗಿ ಹೇಳಿದ್ದಾರೆ. ಒಂದು ವೇಳೆ ಮತ್ತೊಮ್ಮೆ ರವೀಂದ್ರನಾಥ್ ಅವರೇ ಸ್ಪರ್ಧಿಸುವುದಾದರೆ ನಾವು ಅವರಿಗೆ ಮೊದಲ ಆದ್ಯತೆ ನೀಡಿ ಗೆಲ್ಲಿಸುತ್ತೇವೆ.
– ಲೋಕಿಕೆರೆ ನಾಗರಾಜ್, ಜಿಲ್ಲಾಧ್ಯಕ್ಷ, ಬಿಜೆಪಿ ರೈತ ಮೋರ್ಚಾ
ಜಿಲ್ಲಾ ರೈತ ಮೋರ್ಚಾ ಸಮಾವೇಶವು ಈ ಮೊದಲು ಹೊನ್ನಾಳಿಯಲ್ಲಿ ನಿಗದಿಯಾಗಿತ್ತು, ಆದರೆ, ಕಾರಣಾಂತರಗಳಿಂದ ದಾವಣಗೆರೆಯಲ್ಲಿಯೇ ಮಾಡಲಾಗುತ್ತಿದೆ, ಸಮಾವೇಶದಲ್ಲಿ ಸುಮಾರು 8-10 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
ಉತ್ತರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಎಸ್. ಮಲ್ಲಿಕಾರ್ಜುನ್ ಸೋಲಿನ ಭೀತಿಯಿಂದಾಗಿ ಕುಕ್ಕರ್, ಸೀರೆ ಹಂಚು ಮೂಲಕ ಜನರನ್ನು ಮರುಳು ಮಾಡಲು ಹೊರಟಿದ್ದಾರೆ. ಆ ಮೂಲಕ ಗೆಲುವು ಸಾಧಿಸುವ ಭ್ರಮೆಯಲ್ಲಿದ್ದಾರೆ. ಹಣದ ಮೇಲೆ ವಿಶ್ವಾಸವಿರುವ ಅವರು ಹಣದಿಂದ ಮತದಾರರನ್ನು ಕೊಂಡುಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಆದರೆ ಜನರು ಈಗ ಜಾಗೃತರಾಗಿದ್ದಾರೆ. ನಾವು ಸರ್ಕಾರದ ರಿಪೋರ್ಟ್ ಕಾರ್ಡನ್ನು ಜನರಿಗೆ ತಲುಪಿಸಿ ಮತ ಕೇಳುತ್ತೇವೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸುದ್ದಿಗೋಷ್ಠಿಯಲ್ಲಿ ಬಾತಿ ಶಿವಕುಮಾರ್, ಅಣಜಿ ದೊಡ್ಡೇಶ್, ಶ್ಯಾಗಲೆ ದೇವೆಂದ್ರಪ್ಪ, ಶಿವಪ್ರಕಾಶ್, ಎಸ್.ಪಿ. ಶ್ರೀನಿವಾಸ್, ವೀರಣ್ಣ ಕೊಂಡಜ್ಜಿ, ಪಾಲಿಕೆ ಸದಸ್ಯ ಎಸ್. ಮಂಜ್ಯಾ ನಾಯ್ಕ್, ನಾಗರಾಜ್ ಇತರರು ಇದ್ದರು.