ಓಬಿಸಿ ಪಟ್ಟಿಯಲ್ಲಿ ಸೇರಿಸುವಂತೆ ವೀರಶೈವ ಲಿಂಗಾಯತ ಸಮುದಾಯದಿಂದ ಪ್ರತಿಭಟನೆ – ಮನವಿ

ಸುದ್ದಿ360, ದಾವಣಗೆರೆ ಆ. 01: ವೀರಶೈವ ಲಿಂಗಾಯತ ಸಮುದಾಯದ ಎಲ್ಲಾ ಪಂಗಡಗಳನ್ನು ಕೇಂದ್ರ ಸರ್ಕಾರದ ಇತರೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿ ದಾವಣಗೆರೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ಜಮಾಯಿಸಿದ ವೀರಶೈವ ಲಿಂಗಾಯುತ ಸಮುದಾಯದವರು, ಅವರಗೊಳ್ಳ ಪುರ ವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ತಾವರಗೆರೆ ಸಿದ್ಧಲಿಂಗ ಶಿವಾಚಾರ್ಯ ಶ್ರೀ, ಚನ್ನಗರಿ ಕೇದಾರ ಶಿವ ಶಾಂತವೀರ ಶ್ರೀ ಇವರುಗಳನ್ನೊಳಗೊಂಡ ಪ್ರತಿಭಟನಾಕಾರರು ಉಪವಿಭಾಗಾಧಿಕಾರಿಗಳ ಮೆರವಣಿಗೆ ಮೂಲಕ ಕಚೇರಿ ತಲುಪಿದರು. ಉಪವಿಭಾಗಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ  ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯುತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಡಾ.ಶಾಮನೂರು ಶಿವಶಂಕರಪ್ಪನವರು ಹಾಜರಿದ್ದು ಮನವಿ ಸಲ್ಲಿಸಿದರು.

ಸಿಎಂಗೆ ಅರ್ಪಿಸಲಾದ ಮನವಿಯಲ್ಲಿ ವೀರಶೈವ ಲಿಂಗಾಯತರು ಎಲ್ಲಾ ಒಳಪಂಗಡಗಳು ಒಂದೇ. ಕಳೆದ 60ವರ್ಷದಿಂದ ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಪಂಗಡಗಳನ್ನು ಕೇಂದ್ರದ ಓಬಿಸಿ ಪಟ್ಟಿಯಲ್ಲಿ ಸೇರಿಸಬೇಕು ಎಂಬ ಒತ್ತಾಯ ಇದೆ. ಸರ್ಕಾರಗಳು ಸೇರಿಸಲಾಗುತ್ತೆ ಎಂದು ಹೇಳುತ್ತಿವೆಯೇ ಹೊರತು ಅನುಷ್ಠಾನಕ್ಕೆ ಬಂದಿಲ್ಲ. ಕೂಡಲೇ ಅನುಷ್ಠಾನಕ್ಕೆ ತರಬೇಕು ಎಂದು ಒತ್ತಾಯಿಸಲಾಗಿತ್ತು.

ವೀರಶೈವ ಲಿಂಗಾಯತ ಸಮುದಾಯದಲ್ಲಿನ 16  ಉಪ ಪಂಗಡಗಳು ಮಾತ್ರ ಕೇಂದ್ರದ ಓ.ಬಿ.ಸಿ. ಪಟ್ಟಿಯಲ್ಲಿವೆ. ಆದರೆ  ಸಮುದಾಯದಲ್ಲಿ 90ಕ್ಕೂ ಹೆಚ್ಚು ಒಳಪಂಗಡಗಳಿವೆ. ಎಲ್ಲ ಒಳಪಂಗಡಗಳನ್ನು ಕೇಂದ್ರದ ಓಬಿಸಿ ಪಟ್ಟಿಯಲ್ಲಿ ಸೇರಿಸುವುದರಿಂದ ಐಎಎಸ್, ಐಪಿಎಸ್, ಐಅರ್‍ಎಸ್ ಇತರೆಡೆ ಉದ್ಯೋಗ ಅವಕಾಶಕ್ಕೆ ಅನುಕೂಲ ಆಗಲಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಸಾಕಷ್ಟು ಒಳ್ಳೆಯದಾಗಲಿದೆ. ಸರ್ಕಾರ ಕೂಡಲೇ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ರಾಷ್ಟ್ರೀಯ ಉಪಾಧ್ಯಕ್ಷರಾದ ಅಥಣಿ ಎಸ್.ವೀರಣ್ಣ, ಅಣಬೇರು ರಾಜಣ್ಣ, ಜಿಲ್ಲಾಧ್ಯಕ್ಷ ದೇವರ ಮನಿ ಶಿವಕುಮಾರ್, ಸಂದೀಪ್ ಅಣಬೇರು, ಶ್ರೀನಿವಾಸ್ ಶಿವಗಂಗಾ, ಐಗೂರು ಚಂದ್ರಶೇಖರ್, ಶುಭ ಐನಳ್ಳಿ, ಜಿ.ಶಿವಯೋಗಪ್ಪ, ಶಂಭು ಉರೇಕೊಂಡಿ, ಜಯಪ್ರಕಾಶ್ ಮಾಗಿ, ಪುಷ್ಪವಾಲಿ, ಡಿ.ಜಿ.ಶಿವಾನಂದಪ್ಪ, ಅಶ್ವಿನಿ ಕೃಷ್ಣ, ನಲವಡಿ ನವೀನ್, ಶಿವನಗೌಡ, ರೇಖಾ ಇತರರು ಇದ್ದರು.

admin

admin

Leave a Reply

Your email address will not be published. Required fields are marked *

error: Content is protected !!