ಕನಿಷ್ಠ ವೇತನ ನಿಗದಿಗೆ ಗ್ರಾಮ ಪಂಚಾಯಿತಿ ನೌಕರರ ಒತ್ತಾಯ

ದಾವಣಗೆರೆ ಜಿಲ್ಲಾ ಕಾರ್ಮಿಕ ಇಲಾಖೆ ಕಚೇರಿ ಎದುರು ಪ್ರತಿಭಟನೆ

ಸುದ್ದಿ360, ದಾವಣಗೆರೆ, ಜು.13:  ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಠ ವೇತನ ನಿಗದಿ ಮತ್ತು ಬಾಕಿ ವೇತನಕ್ಕೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರ ಸಂಘ (ಸಿಐಟಿಯು ಸಂಯೋಜಿತ) ವತಿಯಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ನಗರದ ಪಿಬಿ ರಸ್ತೆಯ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಇರುವ ಕಾರ್ಮಿಕ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದ  ಗ್ರಾಮ ಪಂಚಾಯಿತಿ ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಕಗೆ ಒತ್ತಾಯಿಸಿ, ಕಾರ್ಮಿಕ ಸಚಿವರಿಗೆ, ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಕಾರ್ಮಿಕ ಇಲಾಖೆ ಮತ್ತು ಕಾರ್ಮಿಕ ಆಯುಕ್ತರಿಗೆ  ಜಿಲ್ಲಾ ಕಾರ್ಮಿಕ ಅಧಿಕಾರಿ ಮೂಲಕ ಮನವಿ ಸಲ್ಲಿಸಿದರು.

ಈ ವೇಳೆ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಸಿ. ಶ್ರೀನಿವಾಸಚಾರ್ ಮಾತನಾಡಿ, ಬಿಲ್ ಕಲೆಕ್ಟರ್, ಕಂಪ್ಯೂಟರ್ ಆಪರೇಟರ್, ವಾಟರ್ ಮನ್, ಜವಾನರು ಹಾಗೂ ಸ್ವಚ್ಛತಾಗಾರು ಹೀಗೆ ಜಿಲ್ಲೆಯಲ್ಲಿ 195 ಗ್ರಾಮ ಪಂಚಾಯಿತಿಗಳಿಂದ ಸುಮಾರು 2000ಕ್ಕೂ ಹೆಚ್ಚು ನೌಕರರಿದ್ದು, ಇವರಿಗೆ ಸರಿಯಾದ ಸಮಯಕ್ಕೆ ವೇತನ ಆಗುತ್ತಿಲ್ಲ. ಮತ್ತು 2016ರಿಂದ ಈಚೆಗೆ ವೇತನ ಪರಿಷ್ಕರಣೆಯೂ ಆಗಿರುವುದಿಲ್ಲ. ಅಗತ್ಯ ವಸ್ತುಗಳ ಬೆಲೆ ದಿನೇ ದಿನೇ ಗಗನಕ್ಕೇರಿದ್ದು ನೌಕರರಿಗೆ ಜೀವನ ನಿರ್ವಹಣೆ ದುಸ್ತರವಾಗಿದೆ. ಕೂಡಲೇ ಸರ್ಕಾರ ಸಮಾನ ಕೆಲಸಕ್ಕೆ ಸಮಾನ ವೇತನ ನಿಗದಿಗೊಳಿಸುವಂತೆ ಆಗ್ರಹಿಸಿದರು.

ಸಿಐಟಿಯು ಜಿಲ್ಲಾ ಸಂಚಾಲಕ ಆನಂದರಾಜ್ ಕೆ.ಎಚ್. ಮಾತನಾಡಿ, ಕಾನೂನಿನ್ವಯ ಐದು ವರ್ಷಕ್ಕೆ ಅನುಗುಣವಾಗಿ ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಠ ವೇತನ ಪರಿಷ್ಕರಣೆ ಮಾಡಿ, ಬಿಲ್ ಕಲೆಕ್ಟರ್ಗೆ ರೂ. 38,021-86, ವಾಟರ್ ಮನ್ ಗೆ ರೂ. 33,062-50, ಅಟೆಂಡರ್ / ಜವಾನರಿಗೆ ರೂ. 28,750-00, ಸ್ವಚ್ಛತೆಗಾರರಿಗೆ ರೂ. 25,000-00 ನಿಗದಿ ಮಾಡಬೇಕು. 2016ರಿಂದ ಕನಿಷ್ಟ ವೇತನ ಜಾರಿ ಮಾಡಿದ ಸರ್ಕಾರದ ಆದೇಶದಂತೆ ನೌಕರರಿಗೆ ಕನಿಷ್ಟ ವೇತನ ಮತ್ತು ತುಟ್ಟಿ ಭತ್ಯೆ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾದ ನೌಕರರಿಗೆ ಉಪದಾನ ವೇತನ ಪಾವತಿಸಬೇಕೆಂದು ಒತ್ತಾಯಿಸಿದರು.

ಸಹಾಯಕ ಕಾರ್ಮಿಕ ಅಧಿಕಾರಿ ವೀಣಾರವರು ಮನವಿ ಸ್ವೀಕರಿಸಿ ಕಾರ್ಮಿಕರ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು.

ಸಂಘದ ಜಿಲ್ಲಾ ಉಪಾಧ್ಯಕ್ಷ ಜಿ.ಎಸ್. ಬಸವರಾಜ್ ಬೇಡಿಕೆ ಮನವಿಯನ್ನು ಓದಿ ಹೇಳಿದರು. ಚನ್ನಗಿರಿ ತಾ. ಅಧ್ಯಕ್ಷ ಭೀಮಾ ನಾಯಕ, ಹರಿಹರ ತಾಲ್ಲೂಕು ಸಮಿತಿ ಅಧ್ಯಕ್ಷ ಗೋವಿಂದರಾಜು, ಜಗಳೂರು ಮಹಾಂತೇಶ್, ನ್ಯಾಮತಿಯ ಲೋಕೇಶ್, ಹೊನ್ನಾಳಿಯ ಚಂದ್ರಪ್ಪ, ದಾವಣಗೆರೆ ತಾಲ್ಲೂಕು ಅಧ್ಯಕ್ಷ ತಿಪ್ಪಣ್ಣ, ಸಂಘಟನೆಯ ಸಹ ಸಂಚಾಲಕ ಶ್ರೀನಿವಾಸಮೂರ್ತಿ ಇತರರು ಇದ್ದರು.

admin

admin

Leave a Reply

Your email address will not be published. Required fields are marked *

error: Content is protected !!