ಸುದ್ದಿ360 ದಾವಣಗೆರೆ, ಜೂ.30: ಉದಯಪುರದಲ್ಲಿ ಕನ್ಹಯ್ಯ ಲಾಲ್ ಹೆಸರಿನ ವ್ಯಕ್ತಿಯನ್ನು ಇಸ್ಲಾಮಿಕ್ ಕೋಮುವಾದಿಗಳು ಘೋರವಾಗಿ ಹತ್ಯೆ ಮಾಡಿದ ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಎಸ್ ಯುಸಿಐ (ಸಿ) ಪಕ್ಷವು ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ಎಸ್ ಯು ಸಿ ಐ (ಸಿ) ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ಕೈದಾಳೆ ತಿಳಿಸಿದ್ದಾರೆ.
ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಕೊಲೆಯಾದ ವ್ಯಕ್ತಿಯು ಪ್ರವಾದಿ ಮುಹಮ್ಮದರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ನಾಯಕಿಯನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದ. ಇದಕ್ಕೆ ಪ್ರತೀಕಾರವಾಗಿ ಆತನನ್ನು ಹತ್ಯೆ ಮಾಡಲಾಗಿದೆ ಎಂದು ಕೊಲೆ ಆರೋಪಿಗಳು ನೀಡಿರುವ ಹೇಳಿಕೆ ವರದಿಯಾಗಿದೆ. ಈ ಪ್ರಕರಣ ರಾಜಸ್ಥಾನದ ಜನರನ್ನು ತಲ್ಲಣಗೊಳಿಸಿದ್ದು ಕೋಮು ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಮೊದಲನೆಯದಾಗಿ, ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದ್ದು, ಶೀಘ್ರ ತನಿಖೆ ನಡೆಸಿ, ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಎರಡನೆಯದಾಗಿ, ಪರಸ್ಪರ ಸ್ಪರ್ಧಾತ್ಮಕ ಕೋಮುವಾದವು ಸಮಾಜದ ಸಾಮರಸ್ಯ, ಶಾಂತಿ, ಒಗ್ಗಟ್ಟಿಗೆ ಭಂಗ ತಂದು ಜನ ಜೀವನಕ್ಕೆ ಇನ್ನಷ್ಟು ಹಾನಿಯನ್ನುಂಟು ಮಾಡುತ್ತದೆ ಎಂಬುದನ್ನು ಎರಡೂ ಧರ್ಮಗಳ ಪ್ರಜ್ಞಾವಂತ ಜನತೆ ಅರ್ಥಮಾಡಿಕೊಳ್ಳಬೇಕು. ಜನಜೀವನದ ಜ್ವಲಂತ ಸಮಸ್ಯೆಗಳಿಂದ ವಿಮುಖರನ್ನಾಗಿ ಮಾಡಲು ಕೋಮುವಾದವನ್ನು ಅಸ್ತ್ರವನ್ನಾಗಿ ಬಳಸುತ್ತಿರುವ ಆಳುವ ಪಕ್ಷಗಳ ಪಿತೂರಿಯನ್ನು ಸೋಲಿಸಲು ಐಕ್ಯ ಹೋರಾಟಗಳನ್ನು ಕಟ್ಟಲು ಜನತೆ ಮುಂದಾಗಬೇಕು ಎಂದು ನಾವು ಕರೆ ನೀಡುವುದಾಗಿ ಎಸ್ ಯು ಸಿ ಐ (ಸಿ) ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ಕೈದಾಳೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.