ಕರ್ನಲ್ ರವೀಂದ್ರನಾಥರ ಹೆಸರನ್ನು ಅಮರವಾಗಿಸಿದ ದಾವಣಗೆರೆ ಮಹಾನಗರ ಪಾಲಿಕೆ

ಕ್ಲಾಕ್ ಸರ್ಕಲ್ ಇನ್ನುಮುಂದೆ ಕರ್ನಲ್ ರವೀಂದ್ರನಾಥ ಸರ್ಕಲ್

ಸುದ್ದಿ360 ದಾವಣಗೆರೆ, ಜು.23: ನಗರದ ರಿಂಗ್ ರಸ್ತೆಯಲ್ಲಿ ಇದುವರೆಗೂ ಕ್ಲಾಕ್ ಸರ್ಕಲ್‌ ಎಂದು ಹೆಸರಿಸುತ್ತಿದ್ದ ವೃತ್ತಕ್ಕೆ ‘ಕರ್ನಲ್ ಎಂ.ಬಿ. ರವೀಂದ್ರನಾಥ ವೃತ್ತ’ ಎಂದು ನಾಮಕರಣ ಮಾಡುವ ಮೂಲಕ ಕಾರ್ಗಿಲ್ ವಿಜಯದ ರೂವಾರಿ ರವೀಂದ್ರನಾಥ ಅವರ ಹೆಸರನ್ನು ದಾವಣಗೆರೆ ಮಹಾನಗರ ಪಾಲಿಕೆ ಅಮರವಾಗಿಸಿದೆ.

ಇದರಿಂದ ಕಾರ್ಗಿಲ್ ಯುದ್ಧದ ವೇಳೆ ದೇಶಕ್ಕೆ ಪಾಕ್ ಸೇನೆ ವಿರುದ್ಧ ಮೊದಲ ಜಯ ದೊರಕಿಸಿದ ಖ್ಯಾತಿ ಹೊಂದಿರುವ ಕರ್ನಲ್ ರವೀಂದ್ರನಾಥ್ ಅವರ ಹೆಸರನ್ನು ನಗರದ ವೃತ್ತವೊಂದಕ್ಕೆ ಕರ್ನಲ್ ಎಂ.ಬಿ. ರವೀಂದ್ರನಾಥ ಅವರ ಹೆಸರಿಡಬೇಕೆನ್ನುವ ನಿವೃತ್ತ ಸೈನಿಕರು, ಕರ್ನಲ್ ಕುಟುಂಬ ಹಾಗೂ ಅಭಿಮಾನಿಗಳ ಬಹುದಿನದ ಬೇಡಿಕೆ ಇಂದು ಈಡೇರಿದೆ.

ಈ ಹಿಂದೆ ನಗರದ ಯಾವುದೇ ರಸ್ತೆ, ವೃತ್ತಗಳಿಗೆ ಒಂದೇ ಕುಟುಂಬದ ಸದಸ್ಯರ ಹೆಸರಿಡುವ ಸಂಪ್ರದಾಯವಿತ್ತು. ಪಾಲಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಈ ಪದ್ಧತಿಗೆ ತೆರೆ ಬಿದ್ದಿದೆ. ನಿಜವಾದ ಸಾಧಕರ ಹೆಸರುಗಳನ್ನು ರಸ್ತೆ, ವೃತ್ತಗಳಿಗೆ ಇರಿಸುವ ಮೂಲಕ ಸಾಧಕರ ಯಶೋಗಾಥೆಯನ್ನು ಯುವಜನತೆಗೆ ತಿಳಿಸುವ ಮತ್ತು ಯುವಕರಲ್ಲಿ ಸ್ಪೂರ್ತಿ ತುಂಬುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

ರಿಂಗ್ ರಸ್ತೆಯ ನಿಜಲಿಂಗಪ್ಪ ಬಡಾವಣೆಯ ಅಮರ್ ಜವಾನ್ ಸ್ಮಾರಕ ಉದ್ಯಾನವನದ ಬಳಿ ಸಂಸದ ಜಿ.ಎಂ. ಸಿದ್ದೇಶ್ವರ ಹಾಗೂ ಶಾಸಕ ಎಸ್.ಎ. ರವೀಂದ್ರನಾಥ್, ನಾಮಫಲಕ ಅನಾವರಣದ ಮೂಲಕ ವೃತ್ತಕ್ಕೆ ಕರ್ನಲ್ ರವೀಂದ್ರನಾಥ್ ಅವರ ಹೆಸರಿಡುವ ಸಮಾರಂಭಕ್ಕೆ ಚಾಲನೆ ನೀಡಿದರು.

ಸಂಸದ ಸಿದ್ದೇಶ್ವರ ಮಾತನಾಡಿ, ಕಾರ್ಗಿಲ್ ವಿಜಯ ದಿನದ ಹೊಸ್ತಿಲಲ್ಲೇ ಈ ಶುಭ ಕಾರ್ಯ ನೆರವೇರಿರುವುದು ಅರ್ಥಪೂರ್ಣ. ಈ ಮೂಲಕ ಕಾರ್ಗಿಲ್ ವಿಜಯದ ರೂವಾರಿ ಹೆಸರು ಅಮರವಾಗಿದೆ ಎಂದರು.

ನೆರೆದವರ ಕಣ್ಣಾಲಿಗಳು ತೇವವಾದ ಕ್ಷಣ

ವೀರಚಕ್ರ ಪುರಸ್ಕೃತ ಕರ್ನಲ್ ರವೀಂದ್ರನಾಥ ಅವರ ಅಕ್ಕ ಸರೋಜಮ್ಮ, ಕಾರ್ಗಿಲ್ ಯುದ್ಧದ ಮೊದಲ ಜಯದ ಬಗ್ಗೆ ಸಹೋದರ ರವೀಂದ್ರನಾಥ ಹೇಳಿದ್ದ ರೋಚಕ ಸಂಗತಿಯನ್ನು ನೆನದರು. ‘ಕಾರ್ಗಿಲ್‌ನ ಟೋಲೋರಿಂಗ್ ಪರ್ವತ ಪಾಕ್ ವಶದಲ್ಲಿದ್ದ ದಿನಗಳವು, ಅದನ್ನು ಮರಳಿ ಪಡೆಯಲು ಭಾರತದ ಹಲವು ಬೆಟಾಲಿಯನ್‌ಗಳು ವಿಫಲವಾಗಿದ್ದವು. ಆಗ ರವೀಂದ್ರನಾಥ ಕಮಾಂಡಿಂಗ್ ಆಫೀಸರ್ ಆಗಿದ್ದ ರಜಪೂತ್ ರೈಫಲ್ಸ್ 2ನೇ ಬೆಟಾಲಿಯನ್‌ಗೆ ಪರ್ವತ ವಶಕ್ಕೆ ಪಡೆಯುವ ಹೊಣೆ ನೀಡಲಾಯಿತು. ಈ ಕಾರ್ಯಕ್ಕೆ 8 ದಿನಗಳ ಸಮಯ ಕೋರಿದ ರವಿ, ತನ್ನ ತಂಡದ ಸದಸ್ಯರ ಪರಾಕ್ರಮದಿಂದಾಗಿ ಟೋಲೋರಿಂಗ್ ಪರ್ವತವನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಇದು ಕಾರ್ಗಿಲ್ ಯುದ್ಧದ ವೇಳೆ ಭಾರತಕ್ಕೆ ದೊರೆತ ಮೊಟ್ಟ ಮೊದಲ ಜಯವಾಗಿತ್ತು. ಆದರೆ ತನ್ನ ಬೆಟಾಲಿಯನ್‌ನ ಹಲವು ವೀರ ಯೋಧರು ಹುತಾತ್ಮರಾದ ಕಾರಣ ರವಿ ಆ ವಿಜಯವನ್ನು ಸಂಭ್ರಮಿಸಿರಲಿಲ್ಲ’ ಎಂದು ಹೇಳಿದರು. ಈ ವೇಳೆ ಅಲ್ಲಿ ನೆರೆದಿದ್ದ ಅನೇಕ ದೇಶ ಭಕ್ತರ ಕಣ್ಣಾಲಿಗಳು ತೇವಗೊಂಡವು.

ಈ ವೇಳೆ ಹಾಜರಿದ್ದ ಕರ್ನಲ್ ಕುಟುಂಬದ ರಾಜೇಂದ್ರ, ಕರ್ನಲ್ ಎಂ.ಬಿ. ರವೀಂದ್ರನಾಥ ವೃತ್ತದ ನಿರ್ವಹಣೆಯ ಹೊಣೆಯನ್ನು ತಮ್ಮ ಕುಟುಂಬವೇ ವಹಿಸಿಕೊಳ್ಳುವ ಇಚ್ಛೆಯನ್ನು ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಮೇಯರ್ ಹಾಗೂ ಆಯುಕ್ತರು ಸಮ್ಮತಿಸಿದರು.

ಮೇಯರ್ ಜಯಮ್ಮ ಗೋಪಿನಾಯ್ಕ, ಉಪ ಮೇಯರ್ ಗಾಯತ್ರಿ ಬಾಯಿ, ಧೂಡ ಅಧ್ಯಕ್ಷ ಕೆ.ಎಂ. ಸುರೇಶ್, ಆಯುಕ್ತ ವಿಶ್ವನಾಥ ಮುದ್ದಜ್ಜಿ, ಮಾಜಿ ಮೇಯರ್ ಎಸ್.ಟಿ. ವೀರೇಶ್, ಪ್ರತಿಪಕ್ಷ ನಾಯಕ ಜಿ.ಎಸ್. ಮಂಜುನಾಥ ಗಡಿಗುಡಾಳ್, ಸದಸ್ಯರಾದ ರೇಖಾ ಸುರೇಶ್, ಎ. ನಾಗರಾಜ್, ಪ್ರಸನ್ನ ಕುಮಾರ್, ಕೆ.ಎಂ. ವೀರೇಶ್, ರಾಜನಹಳ್ಳಿ ಶಿವಕುಮಾರ್, ನಿವೃತ್ತ ಸೈನಿಕರ ಸಂಘದ ಸತ್ಯಪ್ರಕಾಶ್ ಇತರರು ಉಪಸ್ಥಿತರಿದ್ದರು.

admin

admin

Leave a Reply

Your email address will not be published. Required fields are marked *

error: Content is protected !!