ಕರ್ನಾಟಕ ನಂ.1 ರಾಜ್ಯವಾಗಿಸುವ ಗುರಿ: ಸಚಿವ ಸರ್ಬಾನಂದ್ ಸೋನೋವಾಲ

ಸುದ್ದಿ360 ದಾವಣಗೆರೆ ಏ. 25:  ಕರ್ನಾಟಕದ ಸರ್ವತೋಮುಖ ಅಭಿವೃದ್ಧಿ ಬಿಜೆಪಿಯ ಉದ್ದೇಶ. ರಾಜ್ಯದಲ್ಲಿ ಮತ್ತೊಮ್ಮೆ ಪಕ್ಷವನ್ನು ಅಧಿಕಾರಕ್ಕೆ ತಂದು ಕರ್ನಾಟಕವನ್ನು ದೇಶದ ನಂ.1 ರಾಜ್ಯವನ್ನಾಗಿಸುವ ಗುರಿ ನಮ್ಮದಾಗಿದೆ ಎಂದು ಕೇಂದ್ರ ಬಂದರು ಮತ್ತು ಆಯುಷ್ ಸಚಿವ ಸರ್ಬಾನಂದ್ ಸೋನೋವಾಲ ಹೇಳಿದರು.

ನಗರದ ಜಿಎಂಐಟಿ ಅತಿಥಿಗೃಹದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 9 ವರ್ಷಗಳ ಹಿಂದೆ ಭಾರತ ವಿಶ್ವದ ಅತಿ ದೊಡ್ಡ ಆರ್ಥಿಕತೆ ದೇಶಗಳ ಪೈಕಿ 11ನೇ ಸ್ಥಾನದಲ್ಲಿತ್ತು. ಪ್ರಧಾನಿ ಮೋದಿ ಆಡಳಿತದ ಅವಧಿಯಲ್ಲಿ ದೇಶ ಆರ್ಥಿಕವಾಗಿ ಪ್ರಗತಿ ಸಾಧಿಸಿದೆ ಮತ್ತು ಜಗತ್ತಿನ ಬೃಹತ್ ಆರ್ಥಿಕ ಶಕ್ತಿಯಾಗಿ ಬೆಳೆದಿದೆ ಎಂಬುದಕ್ಕೆ ಪ್ರಸ್ತುತ ಭಾರತ 5ನೇ ಸ್ಥಾನದಲ್ಲಿರುವುದೇ ಸಾಕ್ಷಿ. ಇದರೊಂದಿಗೆ ದೇಶದ ನಾಗರಿಕರಿಗೆ ಸಾಮಾಜಿಕ, ಆರ್ಥಿಕ ಭದ್ರತೆ ನೀಡಿರುವುದು ಬಿಜೆಪಿಯ ಹೆಗ್ಗಳಿಕೆ ಎಂದರು.

ವಿಪಕ್ಷಗಳು ಎಷ್ಟೇ ಆರೋಪ ಮಾಡಿದರೂ ಬಿಜೆಪಿ ಸರಕಾರ ರಾಜ್ಯ ಮತ್ತು ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುತ್ತಿರುವುದು ಸುಳ್ಳಾಗುವುದಿಲ್ಲ. ದೇಶದ ಅಭಿವೃದ್ಧಿ ಬಗ್ಗೆ ಆಗಲಿ, ಬಿಜೆಪಿ ಆಡಳಿತದ ಬಗ್ಗೆಯಾಗಲಿ ಮಾತನಾಡುವ ನೈತಿಕತೆ ಕಾಂಗ್ರೆಸ್‌ಗೆ ಇಲ್ಲ. ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಡಬಲ್ ಎಂಜಿನ್ ಸರಕಾರದಿಂದ ಆಲ್ ರೌಂಡ್ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜನತೆ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ.

ಸರ್ಬಾನಂದ್ ಸೋನೋವಾಲ, ಕೇಂದ್ರ ಬಂದರು ಮತ್ತು ಆಯುಷ್ ಸಚಿವ .

ಕಾಂಗ್ರೆಸ್ ಸುದೀರ್ಘ 55 ವರ್ಷಗಳ ಕಾಲ ದೇಶವನ್ನಾಳಿದೆ. ಭಾರತವನ್ನು ಅಭಿವೃದ್ಧಿ ಪಡಿಸಲು ಎಲ್ಲ ಅವಕಾಶಗಳಿದ್ದರೂ ಸಹ ಆಗ ಏನೂ ಮಾಡದೆ ಈಗ ಬಿಜೆಪಿ ಮೇಲೆ ಗೂಬೆ ಕೂರಿಸುತ್ತಿದೆ. ತನ್ನ ಆಡಳಿತಾವಧಿಯ ಎಲ್ಲ ಹಂತಗಳಲ್ಲೂ ವೈಫಲ್ಯ ಸಾಧಿಸಿರುವ ಕಾಂಗ್ರೆಸ್‌ಗೆ ಅಭಿವೃದ್ಧಿ ಬಗ್ಗೆ ಮಾತನಾಡಲು ನೈತಿಕತೆಯೇ ಇಲ್ಲ ಎಂದರು.

ಪಕ್ಷ ಹಾಗೂ ಸಮಾಜಕ್ಕಾಗಿ ಹಗಲಿರುಳು ದುಡಿಯುವ ಅರ್ಹ ಅಭ್ಯರ್ಥಿಗಳಿಗೆ ಬಿಜೆಪಿ ಟಿಕೆಟ್ ನೀಡಿದೆ. ಟಿಕೆಟ್ ಸಿಗದಿದ್ದ ಕಾರಣಕ್ಕೆ ಕೆಲವರು ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದರೂ ಸಹ ಇದರಿಂದ ಪಕ್ಷಕ್ಕೆ ಯಾವುದೇ ಹಾನಿ ಆಗೋದಿಲ್ಲ  ಎಂದರು.

ಬಿಜೆಪಿಗೆ ದೇಶ ಮುಖ್ಯವೇ ಹೊರತು ವ್ಯಕ್ತಿ ಮುಖ್ಯವಾಗುವುದಿಲ್ಲ. ನೀತಿ, ನಿಯತ್ತು ಮತ್ತು ನೇತಾರ ಎಂಬ ಮೂರು ಪ್ರಮುಖ ಅಂಶಗಳ ಆಧಾರದಲ್ಲಿ ಪಕ್ಷ ಮುನ್ನಡೆಯುತ್ತಿದ್ದು, ನಮ್ಮ ಮತದಾರರು, ಕಾರ್ಯಕರ್ತರು ಯಾವುದೇ ವ್ಯಕ್ತಿ ಹಿಂದೆ ಹೋಗುವುದಿಲ್ಲ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್, ದಾವಣಗೆರೆ ದಕ್ಷಿಣ ಬಿಜೆಪಿ ಅಭ್ಯರ್ಥಿ ಬಿ.ಜಿ. ಅಜಯ್ ಕುಮಾರ್, ದೂಡ ಮಾಜಿ ಅಧ್ಯಕ್ಷರಾದ ಯಶವಂತರಾವ್ ಜಾದವ್, ದೇವರಮನೆ ಶಿವಕುಮಾರ್, ರಾಜನಹಳ್ಳಿ ಶಿವಕುಮಾರ್, ವಕ್ತಾರ ಡಿ.ಎಸ್. ಶಿವಶಂಕರ್ ಇತರರು ಇದ್ದರು.

admin

admin

Leave a Reply

Your email address will not be published. Required fields are marked *

error: Content is protected !!