ಸುದ್ದಿ360 ದಾವಣಗೆರೆ, ಜ.18: ಅಕ್ರಮ ವನ್ಯ ಜೀವಿ ಪತ್ತೆಗೆ ಸಂಬಂಧಿಸಿದಂತೆ ಕಲ್ಲೇಶ್ವರ ರೈಸ್ ಮಿಲ್ ಹೆಸರು ಹೇಳಿದ್ದು ಮಾಲು ಸಮೇತ ಸಿಕ್ಕ ಆರೋಪಿಯೇ ಹೊರತು ಬಿಜೆಪಿಯವರಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ವೀರೇಶ್ ಹನಗವಾಡಿ ಕಟುವಾಗಿ ಹೇಳಿದರು.
ಜಿಲ್ಲಾ ವರದಿಗಾರರ ಕೂಟದಲ್ಲಿ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಅಮಾಯಕರಿಗೆ ಶಿಕ್ಷೆಯಾಗಬಾರದು. ತಪ್ಪಿತಸ್ಥರಿಗೆ ಆಗಬೇಕು ಎಂಬುದು ನಮ್ಮ ಹೋರಾಟ. ಬಿಜೆಪಿಯವರಿಗೆ ಮೆದುಳಿಲ್ಲ ಎಂಬ ಮಲ್ಲಿಕಾರ್ಜುನ್ ಹೇಳಿಕೆಗೆ ಪ್ರತಿಕ್ರಿಯಿಸಿ, ಮೆದುಳು ಜಾಸ್ತಿ ಇರುವುದಕ್ಕೆ ಕೃಷ್ಮಮೃಗ, ಜಿಂಕೆ, ಮುಳ್ಳು ಹಂದಿ ಸೇರಿದಂತೆ ವನ್ಯಜೀವಿಗಳನ್ನು ಕಲ್ಲೇಶ್ವರ ರೈಸ್ ಮಿಲ್ ನಲ್ಲಿ ಇಟ್ಟಿದ್ದು. ದೊಡ್ಡ ದೊಡ್ಡ ಮಾತು ಆಡಿದರೆ ಸಾಲದು, ಸರಿಯಾದ ಭಾಷೆ ಬಳಸಬೇಕು.
ದಾವಣಗೆರೆಯಲ್ಲಿ 60 ರೈಸ್ ಮಿಲ್ಗಳಿದ್ದರೂ ಕಲ್ಲೇಶ್ವರ ರೈಸ್ ಮಿಲ್ಗೇ ಯಾಕೆ ಹೋದ್ರು, ಕಲ್ಲೇಶ್ವರ ದೇವರ ಹೆಸರಿಟ್ಟುಕೊಂಡು ಪ್ರಾಣಿ ವಧೆ ಮಾಡಿದರೆ ಹೇಗೆ? ತಪ್ಪು ಮಾಡಿಲ್ಲ ಎಂದಾದರೆ ನಿರೀಕ್ಷಣಾ ಜಾಮೀನು ಪಡೆದದ್ದಾರೂ ಯಾಕೆ ಎಂದು ಪ್ರಶ್ನಿಸಿದರು.
ಇನ್ನು ಪರ್ಸೆಂಟೇಜ್ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಆರೋಪಕ್ಕೆ ಉತ್ತರಿಸಿ, ಅವರು ಹೀಗೆ ಹಿಟ್ ಅಂಡ್ ರನ್ ಮಾಡುತ್ತಲೇ ಇರುತ್ತಾರೆ. ಸರಿಯಾದ ದಾಖಲೆಗಳಿದ್ದರೆ ಲೋಕಾಯುಕ್ತ, ನ್ಯಾಯಾಲಯಕ್ಕೆ ನೀಡಿ, ಚಾಲೆಂಜ್ ಮಾಡಲಿ. ನಾವು ರಾಜಕೀಯ ವಿರೋಧಿಗಳು ಎಂಬುದನ್ನು ಒಪ್ಪಿಕೊಳ್ಳುತ್ತೇವೆ. ನಾವು ಯಾವುದೇ ಪ್ರತಿಭಟನೆ ಮಾಡಿದರೂ ಆಧಾರ ಸಹಿತವಾಗಿ ಪ್ರತಿಭಟನೆ ಮಾಡಿದ್ದೇವೆ. ಅವರ ರೀತಿ ಯಾವುದೇ ಆಧಾರ ಇಲ್ಲದೆ ಪ್ರತಿಭಟನೆ ಮಾಡಿಲ್ಲ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್, ಮಹಾನಗರ ಪಾಲಿಕೆ ಸದಸ್ಯ ಜಿ. ಪ್ರಸನ್ನಕುಮಾರ್, ಜಿಲ್ಲಾ ಮಾಧ್ಯಮ ವಕ್ತಾರ ಡಿ.ಎಸ್. ಶಿವಶಂಕರ್, ಜಿಲ್ಲಾ ಮಾಧ್ಯಮ ಸಹ ಸಂಚಾಲಕ ನರೇಶ್ ಹೊರಟ್ಟಿ ಇದ್ದರು.