ಸುದ್ದಿ360, ದಾವಣಗೆರೆ, ಜು.14: ಕಾಂಗ್ರೆಸ್ ನವರು ಕ್ಷುಲ್ಲಕ ರಾಜಕಾರಣದಲ್ಲಿ ತಲ್ಲೀನರಾಗಿದ್ದಾರೆ. ನಾನು ಕಛೇರಿಗೆ ಬರುತ್ತೇನೊ ಇಲ್ಲವೊ ಎಂಬುದನ್ನು ತಿಳಿಯಲು ಸಿಸಿ ಕ್ಯಾಮೆರಾ ಫೂಟೇಜ್ ಪರಿಶೀಲಿಸಲಿ, ಇಲ್ಲವೇ ನಾನು ಕಛೇರಿಗೆ ಬಂದು ಹೋಗುವುದನ್ನು ಗಮನಿಸಲು ಯಾರಾನ್ನಾದರು ನೇಮಕ ಮಾಡಿಕೊಳ್ಳಲಿ ಎಂದು ವಿರೋಧ ಪಕ್ಷದವರ ಆರೋಪಕ್ಕೆ ಮಹನಗರ ಪಾಲಿಕೆ ಮೇಯರ್ ಜಯಮ್ಮ ಗೋಪಿನಾಯ್ಕ ಕಟುವಾಗಿ ಪ್ರತಿಕ್ರಿಯಿಸಿದರು.
ಪಾಲಿಕೆ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಪಕ್ಷ ನಾಯಕ ಹಾಗೂ ಸದಸ್ಯರ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ಸಾಮಾನ್ಯ ಕುಟುಂಬದ ದಲಿತ ಮಹಿಳೆಯೊಬ್ಬಳು ಮೇಯರ್ ಸ್ಥಾನ ಅಲಂಕರಿಸಿರುವುದನ್ನು ಸಹಿಸದ ವಿಪಕ್ಷದವರು ಇಂತಹ ಸತ್ಯಕ್ಕೆ ದೂರವಾದ ಆರೋಪ ಮಾಡುತ್ತಿದ್ದಾರೆ. ನಾನು ಕಚೇರಿಗೆ ಬರುವುದಿಲ್ಲ, ಫೋನ್ ಕರೆಗಳಿಗೆ ಉತ್ತರಿಸುವುದಿಲ್ಲ, ಜನರ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ ಎಂದು ಇಲ್ಲಸಲ್ಲದ ಆರೋಪದಲ್ಲಿ ನಿರತರಾಗಿದ್ದಾರೆ ಎಂದರು.
‘ನಾನು ಪ್ರತಿ ದಿನ ಬೆಳಗ್ಗೆ 11ಕ್ಕೆ ಕಚೇರಿಗೆ ಬಂದು 2 ಗಂಟೆವರೆಗೂ ಇಲ್ಲೇ ಇದ್ದು ಕೆಲಸ ಮಾಡುತ್ತೇನೆ. ನಂತರ 4 ಗಂಟೆಗೆ ಮತ್ತೆ ಕಚೇರಿಗೆ ಆಗಮಿಸಿ ಕೆಲವೊಮ್ಮೆ 9 ಗಂಟೆವರೆಗೂ ಇಲ್ಲೇ ಇರುತ್ತೇನೆ. ‘ಮಳೆಗಾಲ ಆರಂಭವಾದಾಗಿನಿಂದ ನಗರದಲ್ಲಿ ಚೇಂಬರ್ ಕಟ್ಟಿಕೊಂಡು ನೀರು ಉಕ್ಕುವ ಸಮಸ್ಯೆ ಹೆಚ್ಚಾಗಿದೆ. ಈ ಕುರಿತು ಸಾರ್ವಜನಿಕರು ಕರೆ ಮಾಡಿ ದೂರು ನೀಡಿದ ತಕ್ಷಣ ಎಂಜಿನಿಯರ್‌ಗಳ ಜತೆ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸುತ್ತಿದ್ದೇನೆ.
ಇತ್ತೀಚೆಗೆ ಶಿರಮನಹಳ್ಳಿ ರಸ್ತೆಯ ಬಡಾವಣೆಯಲ್ಲಿ ಚೇಂಬರ್ ಉಕ್ಕಿತ್ತು. ಆಗ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ತೆರಳಿ, ರಾತ್ರಿ 11 ಗಂಟೆವರೆಗೂ ಅಲ್ಲೇ ಇದ್ದು ಚೇಂಬರ್ ಸರಿ ಮಾಡಿಸಿ ಬಂದಿದ್ದೇನೆ. ಆದರೆ, ಇದಾವುದೂ ಕಾಂಗ್ರೆಸಿಗರ ಕಣ್ಣಿಗೆ ಕಾಣುವುದಿಲ್ಲ. ಎಂದು ಆರೋಪಿಸಿದರು.
ಕರೆ ಸ್ವೀಕರಿಸಿ ಸ್ಪಂದಿಸಿದ್ದೇನೆ
ಯಾರೇ ಕರೆ ಮಾಡಿದರೂ ಸ್ವೀಕರಿಸಿ ಸಮಸ್ಯೆ ಆಲಿಸುತ್ತೇನೆ. ನಾನು ಒಬ್ಬ ಗೃಹಿಣಿಯೂ ಆಗಿದ್ದು, ಕೆಲವೊಮ್ಮೆ ಕರೆಯನ್ನು ನನ್ನ ಪತಿ ಸ್ವೀಕರಿಸಿದ್ದಾರೆ ನಂತರ ನಾನೂ ಮಾತನಾಡಿ, ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿದ್ದೇನೆ. ಇದನ್ನು ಕಂಡು ಪ್ರತಿಪಕ್ಷದವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಕಾರಣ, ಸುಳ್ಳು ಆರೋಪ ಮಾಡಿ ಒಬ್ಬ ಮಹಿಳೆಯನ್ನು ಅವಮಾನಿಸುತ್ತಿದ್ದಾರೆ ಎಂದು ಮೇಯರ್ ಜಯಮ್ಮ ಗೋಪಿನಾಯ್ಕ ದೂರಿದರು.
ಸಾರ್ವಜನಿಕರು ತಮ್ಮ ಕುಂದು ಕೊರತೆಗಳ ಪರಿಹಾರಕ್ಕಾಗಿ ಮತ್ತು ತಕ್ಷಣದ ಕ್ರಮಕ್ಕಾಗಿ ಪಾಲಿಕೆಯ ವಾಟ್ಸ್ ಅಪ್ ಸಂಖ್ಯೆ 8277234444ನ್ನು ಸಂಪರ್ಕಿಸಬಹುದಾಗಿದೆ ಇಲ್ಲವೇ ಲ್ಯಾಂಡ್ ಲೈನ್ ಸಂಖ್ಯೆ 234444 ಗೆ ಸಂಪರ್ಕಿಸ ಬಹುದಾಗಿದೆ ಎಂದು ಆರೋಗ್ಯ ಸ್ಥಾಯಿ ಸಮಿತಿ ಸದಸ್ಯರಾದ ಶಿವಾನಂದ ಆರ್ ತಿಳಿಸಿದರು.
ಅನುದಾನ ಹಂಚಿಕೆಯಲ್ಲಿ ತಾರತಮ್ಯ ಇಲ್ಲ
ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ರಾಜೇಶ್ ಜಾಧವ್ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಎಲ್ಲಾ ವಾರ್ಡ್ಗಳಿಗೂ ಅನುದಾನ ಹಂಚಿಕೆ ಮಾಡಲಾಗಿದೆ. ಬಿಜೆಪಿ ಶಾಸಕರ ಅನುದಾನದಲ್ಲಿ ಕಾಂಗ್ರೆಸ್ ಪಾಲಿಕೆ ಸದಸ್ಯರ ವಾರ್ಡ್ಗಳಿಗೆ ಅನುದಾನ ಬಿಡುಗಡೆ ಮಾಡಿದ್ದೇವೆ. ಅನುದಾನ ಹಂಚಿಕೆಯಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ. ಎಲ್ಲಿ ಅವಶ್ಯಕತೆ ಇದೆಯೋ ಅಲ್ಲಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಆದರೂ ಕಾಂಗ್ರೆಸ್ ವಾರ್ಡ್ಗೆ ಅನುದಾನ ನೀಡುವಲ್ಲಿ ತಾರತಮ್ಯ ಎಸಗಲಾಗುತ್ತಿದೆ ಎಂದು ಕಾಂಗ್ರೆಸಿಗರು ಆರೋಪಿಸಿರುವುದು ಶುದ್ಧ ಸುಳ್ಳು. ಅವರ ಈ ಸುಳ್ಳು ಆರೋಪ ಹೀಗೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಇದನ್ನು ಸತ್ಯ ಮಾಡಿ ತೋರಿಸಬೇಕಾಗುತ್ತದೆ ಎಂದು ರಾಜೇಶ್ ಜಾಧವ್ ಎಚ್ಚರಿಸಿದರು.
ಮಾಜಿ ಮೇಯರ್ ಎಸ್.ಟಿ. ವೀರೇಶ್ ಮಾತನಾಡಿ, ಆನ್‌ಲೈನ್ ಮೂಲಕ ಆಸ್ತಿ ತೆರಿಗೆ ಪಾವತಿ ವ್ಯವಸ್ಥೆ ಜಾರಿಗೊಳಿಸುವ ನಿಟ್ಟಿನಲ್ಲಿ ಆಸ್ತಿ ಗುರುತು ಸಂಖ್ಯೆ (ಪಿಡಿಐ) ಗಳನ್ನು ಕಂಪ್ಯೂಟರೀಕರಣ ಗೊಳಿಸುವ ಕಾರ್ಯ ಶೇ.70ರಷ್ಟು ಪೂರ್ಣಗೊಂಡಿದೆ. ಇನ್ನೇನು ಕೆಲವೇ ದಿನಗಳಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ಆನ್‌ಲೈನ್ ಪಾವತಿ ವ್ಯವಸ್ಥೆ ಜಾರಿಯಾಗಲಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಆಡಳಿತಾವಧಿಯಲ್ಲಿ ಆಗಿರುವ ಅವೈಜ್ಞಾನಿಕ ಕಾಮಗಾರಿಗಳಿಂದ ಮಳೆಗಾಲ ಬಂದರೆ ಯುಜಿಡಿ ನೀರು ರಸ್ತೆ ಮೇಲೆ ಹರಿವಂತಾಗಿದೆ. ಅಲ್ಲದೆ ಸಾರ್ವಜನಿಕರೂ ಸಹ ಪ್ಲಾಸ್ಟಿಕ್ ಕವರ್ ಸೇರಿದಂತೆ ಪ್ಲಾಸ್ಟಿಕ್ ತ್ಯಾಜ್ಯಗಳು ಡ್ರೈನೇಜ್ ಸೇರದಂತೆ ಕ್ರಮವಹಿಸಬೇಕು. ಪಾಲಿಕೆ ಸೂಚಿಸುವ ಪರಿಸರ ಸಂಬಂಧಿತ ಸೂಚನೆಗಳನ್ನು ಪಾಲಿಸಬೇಕು ಎಂದು ಎಸ್.ಟಿ. ವೀರೇಶ್ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ತೆರಿಗೆ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಸೋಗಿ ಆರ್ ಶಾಂತಕುಮಾರ್ ಮಾತನಾಡಿ, ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿರುವ ಹೊರತಾಗಿಯೂ ಪ್ರಸ್ತುತ 30 ಕೋಟಿ ಪಾಲಿಕೆಯ ಬೊಕ್ಕಸದಲ್ಲಿದೆ. ಮಹಾನಗರ ಪಾಲಿಕೆ ದಿವಾಳಿಯಾಗಿದೆ ಎಂಬ ಪ್ರತಿಪಕ್ಷದ ಆರೋಪ ಸತ್ಯಕ್ಕೆ ದೂರವಾದುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಉಪ ಮೇಯರ್ ಗಾಯತ್ರಿ ಬಾಯಿ, ಪಾಲಿಕೆ ಸದಸ್ಯರಾದ ಕೆ.ಎಂ. ವೀರೇಶ್, ಪ್ರಸನ್ನ ಕುಮಾರ್ ಇತರರಿದ್ದರು.