ಕಾಂಗ್ರೆಸ್ ಪಕ್ಷದಲ್ಲಿ ಪಕ್ಷ ಪೂಜೆಗೆ ಆದ್ಯತೆ, ವ್ಯಕ್ತಿ ಪೂಜೆಗಲ್ಲ: ಎಸ್ ಎಸ್ ಮಲ್ಲಿಕಾರ್ಜುನ್

ಸಿದ್ದರಾಮಯ್ಯ ಅಮೃತಮಹೋತ್ಸವ ಅಭಿಮಾನಿಗಳಿಂದಲೇ ರೂಪುಗೊಂಡಿರುವ ಕಾರ್ಯಕ್ರಮ

ಸುದ್ದಿ360, ದಾವಣಗೆರೆ, ಜು.18: ಸಿದ್ದರಾಮಯ್ಯ ಅವರು ನಮ್ಮ ಬಲವಂತಕ್ಕೆ ಮಣಿದು ಅಮೃತ ಮಹೋತ್ಸವಕ್ಕೆ ಒಪ್ಪಿ  ಸಮ್ಮತಿ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಪಕ್ಷ ಪೂಜೆಗೆ ಆದ್ಯತೆ ಇದೆಯೇ ಹೊರತು ವ್ಯಕ್ತಿ ಪೂಜೆಗಲ್ಲ. ಹೀಗಾಗಿ ಸಿದ್ಧರಾಮಯ್ಯ ಅವರ ಅಮೃತ ಮಹೋತ್ಸವ ವ್ಯಕ್ತಿ ಪೂಜೆಯಲ್ಲ ಎಂದು  ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದರು.

ದಾವಣಗೆರೆಯಲ್ಲಿ ನಡೆಯಲಿರುವ ಸಿದ್ದರಾಮಯ್ಯ ಅಮೃತ ಮಹೋತ್ಸವ ಸಮಾರಂಭದ ವೇದಿಕೆ ನಿರ್ಮಾಣ ಕಾರ್ಯಕ್ರಮಕ್ಕೆ ಸೋಮವಾರ ಪೂಜೆ ನೆರವೇರಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿ, ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ಅವರ ಹುಟ್ಟುಹಬ್ಬವನ್ನು ದಾವಣಗೆರೆಯಲ್ಲೇ ಅದ್ಧೂರಿಯಾಗಿ ಆಚರಿಸಬೇಕು ಎಂದು ನಾನೂ ಸೇರಿ ಅವರ ಸಂಪುಟದಲ್ಲಿದ್ದ ಹೆಚ್ಚಿನ ಸಚಿವರು ನಿರ್ಧರಿಸಿದ್ದೆವು. ಆಗ ಅದಕ್ಕೆ ಸಿದ್ದರಾಮಯ್ಯ ಒಪ್ಪಿರಲಿಲ್ಲ. ಈಗಲೂ ಸಹ ನಮ್ಮ ಬಲವಂತಕ್ಕೆ ಒಪ್ಪಿದ್ದಾರೆ. ಆದ್ದರಿಂದ ಕಾರ್ಯಕ್ರಮದ ಸಿದ್ಧತೆ ಆರಂಭಿಸಿದ್ದೇವೆ.

ರಾಜ್ಯದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಭಿಮಾನಿಗಳಿಂದಲೇ ರೂಪು ಗೊಂಡಿರುವ ಕಾರ್ಯಕ್ರಮ  ಈ ಅಮೃತ ಮಹೋತ್ಸವ. ಇದೀಗ ಪೂಜೆ ವೇಳೆಯೇ ಅಭಿಮಾನಿಗಳಿಂದ ಒಂದು ಲಕ್ಷ ರೂ. ದೇಣಿಗೆ ಸಂಗ್ರಹವಾಗಿರುವುದಾಗಿ ಅವರು ತಿಳಿಸಿದರು.

ವೇದಿಕೆ ಮತ್ತು ಪಾರ್ಕಿಂಗ್

ನಗರದ ಹೊರವಲಯದ ಪೂನ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿನ ಜಮೀನಿನಲ್ಲಿ ಸುಮಾರು 50 ಎಕರೆಯಷ್ಟು ವಿಶಾಲವಾಗಿರುವ ಪ್ರದೇಶದ ಒಂದು ಭಾಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. 50 ಅಡಿ ಅಗಲ ಮತ್ತು 200 ಅಡಿ ಉದ್ದದ ಬೃಹತ್ ವೇದಿಕೆ ನಿರ್ಮಾಣಗೊಳ್ಳಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳೂ ಇಲ್ಲಿ ನಡೆಯುವ ಕಾರಣ ದೊಡ್ಡ ವೇದಿಕೆ ನಿರ್ಮಿಸಲಾಗುತ್ತಿದೆ. ಸುಮಾರು 500ರಿಂದ 600 ಮಂದಿ ಕೂರುವಷ್ಟು ಸ್ಥಳಾವಕಾಶ ಇರಲಿದೆ. ಆದರೆ, ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಸೇರಿದಂತೆ ರಾಷ್ಟ್ರೀಯ ನಾಯಕರು ಭಾಗವಹಿಸುವ ಕಾರಣ ವೇದಿಕೆಯಲ್ಲಿ 50ರಿಂದ 100 ಗಣ್ಯರಿಗೆ ಮಾತ್ರ ಕೂರಲು ಅವಕಾಶ ಇರುತ್ತದೆ.

ಕಾರ್ಯಕ್ರಮಕ್ಕೆ ಬರುವವರ ವಾಹನ ನಿಲುಗಡೆಗೆ ಪಕ್ಕದ ಜಮೀನು, ಲೇಔಟ್‌ಗಳನ್ನು ಬಳಸಿಕೊಳ್ಳಲು, ಭೂಮಾಲಿಕರೊಂದಿಗೆ   ಮಾತುಕತೆ ನಡೆಸಲಾಗಿದೆ. ಕಾರ್ಯಕ್ರಮ ನಡೆಯುವ ಆವರಣದಲ್ಲಿ ಒಂದು ತಾತ್ಕಾಲಿಕ ಹೆಲಿಪ್ಯಾಡ್ ಸಹ ನಿರ್ಮಾಣವಾಗಲಿದೆ ಎಂದು ಎಸ್ ಎಸ್ ಮಲ್ಲಿಕಾರ್ಜುನ್ ತಿಳಿಸಿದರು.

5ರಿಂದ 10 ಲಕ್ಷ ಜನ ಸೇರುವ ಅಂದಾಜು

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 75ನೇ ಜನ್ಮ ದಿನದ ಅಂಗವಾಗಿ ಆ.3ರಂದು ನಡೆಯಲಿರುವ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಇಂದು ಒಳ್ಳೆಯ ದಿನವಾಗಿದ್ದ ಕಾರಣ ವೇದಿಕೆ ನಿರ್ಮಾಣಕ್ಕೆ ಪೂಜೆ ನೆರವೇರಿಸಿದ್ದೇವೆ. ದಾವಣಗೆರೆ ಕರ್ನಾಟಕದ ಮಧ್ಯ ಭಾಗವಾಗಿರುವ ಕಾರಣ ರಾಜ್ಯದ ಮೂಲೆಮೂಲೆಯಿಂದ ಕನಿಷ್ಠ 5 ಲಕ್ಷ ಜನ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಈ ಸಂಖ್ಯೆ 10 ಲಕ್ಷ ತಲುಪಿದರೂ ಅಚ್ಚರಿಯಿಲ್ಲ ಎಂದು ಹೇಳಿದರು.

ವಿರೋಧ ಪಕ್ಷಗಳ ಊಹಾಪೋಹ. . .

ಈ ಸಮಾರಂಭ ಆಚರಿಸುತ್ತಿರುವ ಬಗ್ಗೆ ಪಕ್ಷದಲ್ಲಿ ಒಮ್ಮತದ ಅಭಿಪ್ರಾಯವಿದೆ. ಯಾರೊಬ್ಬರೂ ಈ ಬಗ್ಗೆ ಅಪಸ್ವರ ಎತ್ತಿಲ್ಲ. ಎಲ್ಲರೂ ಒಟ್ಟಾಗಿ ಸಿದ್ದರಾಮಯ್ಯ ಅಮೃತ ಮಹೋತ್ಸವ ಆಚರಿಸೋಣ ಎಂದು ಸ್ವತಃ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಕಾರ್ಯಕ್ರಮಕ್ಕೆ ಡಿಕೆಶಿ ವಿರೋಧವಿದೆ ಎನ್ನುವುದು ವಿರೋಧ ಪಕ್ಷಗಳ ಊಹಾಪೂಹ ಅಷ್ಟೇ ಎಂದು ಮಲ್ಲಿಕಾರ್ಜುನ್ ಹೇಳಿದರು.

ಈ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಂಜಪ್ಪ, ಪಾಲಿಕೆ ಪ್ರತಿಪಕ್ಷ ನಾಯಕ ಜಿ.ಎಸ್. ಮಂಜುನಾಥ ಗಡಿಗುಡಾಳ್, ಹಿರಿಯ ಸದಸ್ಯ ಎ. ನಾಗರಾಜ್, ಮುಖಂಡರಾದ ಷರೀಫ್, ಕೆ.ಜಿ ಶಿವಕುಮಾರ್, ಸಾಮಾಜಿಕ ಜಾಲತಾಣದ ಅಧ್ಯಕ್ಷ ಹರೀಶ್ ಬಸಾಪುರ ಇತರರು ಇದ್ದರು.

admin

admin

Leave a Reply

Your email address will not be published. Required fields are marked *

error: Content is protected !!