ಸುದ್ದಿ360 ದಾವಣಗೆರೆ, ಏ.14: ಆಟೋ ಗ್ಲಾಸ್ ಹೊಡೆದು ಕಣ್ಣಿಗೆ ಕಾರದ ಪುಡಿ ಎರಚಿ 20 ಲಕ್ಷ ನಗದು ಹಣ ಇದ್ದ ಬ್ಯಾಗನ್ನು ದೋಚಿಕೊಂಡು ಹೋಗಿದ್ದ ಆರೋಪಿತರನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದು, ಆರೋಪಿತರಿಂದ ನಗದು ಸೇರಿದಂತೆ 24 ಲಕ್ಷದ ಮಾಲನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣ ಕುರಿತಂತೆ ಮಾ.14ರಂದು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಭದ್ರಾವತಿಯ ದೇವರಾಜ್ ರವರು ಅಡಿಕೆ ಖೇಣಿ ಪಡೆದುಕೊಂಡಿದ್ದ ರೈತರಿಗೆ ಹಣವನ್ನು ಕೊಡಲು 20 ಲಕ್ಷ ನಗದು ಹಣವನ್ನು ತನ್ನ ಸ್ನೇಹಿತನಿಂದ ಪಡೆದುಕೊಂಡು ಎನ್.ಹೆಚ್-48 ಸರ್ವೀಸ್ ರಸ್ತೆ, ಪಿ.ಬಸವನಗೌಡ ಬಡಾವಣೆ ಬ್ರೀಡ್ಜ್ ಹತ್ತಿರ ಆಟೋದಲ್ಲಿ ಹೋಗುತ್ತಿರುವಾಗ ಯಾರೋ 05 ಜನ ಅಪರಿಚಿತರು ಮಚ್ಚಿನಿಂದ ಆಟೋ ಗ್ಲಾಸ್ ಹೊಡೆದು ಕಣ್ಣಿಗೆ ಕಾರದ ಪುಡಿ ಎರಚಿ 20 ಲಕ್ಷ ನಗದು ಹಣ ಇದ್ದ ಬ್ಯಾಗನ್ನು ದೋಚಿಕೊಂಡು ಹೋಗಿರುವುದಾಗಿ ದೂರು ದಾಖಲಾಗಿತ್ತು.
ನಗದು ಹಣ ಮತ್ತು ಆರೋಪಿತರನ್ನು ಪತ್ತೆ ಮಾಡಲು ದಾವಣಗೆರೆ ನಗರ ಉಪ ವಿಭಾಗದ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ಪ್ರಭಾವತಿ ಸಿ ಶೇತಸನದಿ ಪೊಲೀಸ್ ಇನ್ಸ್ಪೆಕ್ಟರ್ ವಿದ್ಯಾನಗರ ಪೊಲೀಸ್ ಠಾಣೆ ಇವರ ನೇತೃತ್ವದಲ್ಲಿ ವಿದ್ಯಾನಗರ ಪೊಲೀಸ್ ಠಾಣೆ ಸಿಬ್ಬಂದಿಯನ್ನೊಳಗೊಂಡ ತಂಡ ಪ್ರಕರಣವನ್ನು ಭೇದಿಸಿದೆ.
ಆಂಜನೇಯ ಕಾಟನ್ ಮಿಲ್ ನಿವಾಸಿಗಳಾದ ಸನಾವುಲ್ಲಾ ಅಲಿಯಾಸ್ ಸನಾ , ಸೈಫುಲ್ಲಾ ಅಲಿಯಾಸ್ ಸೈಫು ಮತ್ತು ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕನನ್ನು ವಶಕ್ಕೆ ಪಡೆದು. ಆರೋಪಿತರಿಂದ ದರೋಡೆ ಮಾಡಿದ್ದ 19 ಲಕ್ಷದ 80 ಸಾವಿರ ನಗದು ಹಣ ಮತ್ತು ಕೃತಕ್ಕೆ ಬಳಿಸಿದ 01 ಲಕ್ಷ 20 ಸಾವಿರ ಬೆಲೆಬಾಳುವ ಒಂದು ಪ್ಯಾಸೆಂಜರ್ ಆಟೋ ಮತ್ತು 02 ಲಕ್ಷ ಬೆಲೆ ಬಾಳುವ ಒಂದು ಮಹೀಂದ್ರಾ ಸುಪ್ರೋ ಪ್ಯಾಸೆಂಜರ್ ಆಟೋ ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣದಲ್ಲಿ ತಲೆಮರಿಸಿಕೊಂಡಿರುವ ಆರೋಪಿತರ ಪತ್ತೆಕಾರ್ಯ ಪ್ರಗತಿಯಲ್ಲಿರುವುದಾಗಿ ಪ್ರಕಟಣೆ ತಿಳಿಸಿದೆ.