ಕಾವೇರಿಯಲ್ಲಿ ಕೊಚ್ಚಿ ಹೋದ ಯುವಕ – ಶೋಧ ಕಾರ್ಯ

ಸುದ್ದಿ360, ಮಂಡ್ಯ, ಜು.13: ಶ್ರೀರಂಗಪಟ್ಟಣ ಹೊರ ವಲಯದ ಸಂಗಮದಲ್ಲಿ ಸ್ನಾನ ಮಾಡಲು ಹೋದ ಯುವಕ ನದಿ ನೀರಲ್ಲಿ ಕೊಚ್ಚಿ ಹೋಗಿರುವ ಘಟನೆ ಬುಧವಾರ ಬೆಳಗ್ಗೆ ಸಂಭವಿಸಿದೆ.

ಬೆಂಗಳೂರಿನ ಯಲಹಂಕ ನಿವಾಸಿ ಅಶೋಕ್ (26) ನದಿಯಲ್ಲಿ ಕೊಚ್ಚಿಹೋದ ಯುವಕ. ಕುಟುಂಬಸ್ಥರು, ಸ್ನೇಹಿತರೊಂದಿಗೆ ಪೂಜೆಗಾಗಿ ಸಂಗಮಕ್ಕೆ ಆಗಮಿಸಿದ್ದ ವೇಳೆ ಬೆಳಿಗ್ಗೆ ನದಿಯಲ್ಲಿ ಸ್ನಾನ ಮಾಡುವಾಗ ಕಾಲು ಜಾರಿ ಬಿದ್ದಿದ್ದಾನೆ.

ನದಿಯಲ್ಲಿ ನೀರಿನ ರಭಸ ಹೆಚ್ಚಿರುವ ಕಾರಣ ಯುವಕ ಕೊಚ್ಚಿಹೋಗಿದ್ದಾನೆ. ಸ್ಥಳೀಯರು ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, 30ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿಗಳಿಂದ ಶೋಧ ಕಾರ್ಯ ನಡೆಯುತ್ತಿದೆ. ಕಾವೇರಿ ನದಿಯಲ್ಲಿ ಪ್ರತ್ಯೇಕ ತಂಡಗಳಾಗಿ ಸಿಬ್ಬಂದಿಯಿಂದ ಶೋಧಕಾರ್ಯ ನಡೆಯುತ್ತಿದ್ದು, ಬೋಟ್, ಪಾತಾಳ ಗರಡಿ ಬಳಸಿ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ. ಸಂಗಮ ಬಳಿ ಅಶೋಕ್ ಕುಟುಂಬಸ್ಥರ ಆಕ್ರಂಧನ ಮುಗಿಲುಮುಟ್ಟಿದೆ.

ಭಾರೀ ಪ್ರಮಾಣದ ನೀರು ಹರಿದು ಬರತ್ತಿದ್ದರು ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ, ಅಶೋಕ್ ಕುಟುಂಬಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Comment

error: Content is protected !!