ಕುಹೂ… ಕುಹೂ… ದಾವಣಗೆರೆ ಕೋಗಿಲೆ – ಡಾ. ಪುನೀತ್ ರಾಜ್ ಕುಮಾರ್ ಅವಾರ್ಡ್

ಎಸ್‌ಎಸ್‌ಎಂ ಜನ್ಮದಿನ – Kannada-Hindi Karoke Singing Talent Hunt Show

ಸುದ್ದಿ360 ದಾವಣಗೆರೆ, ಆ.25: ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಜನ್ಮ ದಿನದ ಅಂಗವಾಗಿ ಕುಹೂ ಕುಹೂ ದಾವಣಗೆರೆ ಕೋಗಿಲೆ, ಕನ್ನಡ ಮತ್ತು ಹಿಂದಿ ಹಾಡುಗಳ ಕರೋಕೆ ಗಾಯನ ಸ್ಪರ್ಧೆ ಹಾಗೂ ಡಾ. ಪುನೀತ್‌ರಾಜ್‌ಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಂಡಿದ್ದು, ಸಮಾರಂಭದಲ್ಲಿ ನಟ ದರ್ಶನ್ ಭಾಗವಹಿಸಲಿದ್ದಾರೆ ಎಂದು ದಿನೇಶ್ ಕೆ. ಶೆಟ್ಟಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಕುಹೂ ಕುಹೂ ಕರೋಕೆ ಸಂಸ್ಥೆ ಮತ್ತು ಎಸ್.ಎಸ್. ಮಲ್ಲಿಕಾರ್ಜುನ ಅಭಿಮಾನಿ ಬಳಗದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಉದಯೋನ್ಮುಖ ಗಾಯಕ, ಗಾಯಕಿಯರು ತಮ್ಮಲ್ಲಿರುವ ಪ್ರತಿಭೆ ಪ್ರದರ್ಶಿಸಲು ವೇದಿಕೆ ಒದಗಿಸುವ ಉದ್ದೇಶದಿಂದ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಹೇಳಿದರು.

ಬಳಗದ ನಿರ್ದೇಶಕ, ಪಾಲಿಕೆ ಸದಸ್ಯ ಎ. ನಾಗರಾಜ್ ಮಾತನಾಡಿ, ಸೆ.10ರಂದು ಎಂಸಿಸಿ ಬಿ ಬ್ಲಾಕ್‌ನ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಬೆಳಗ್ಗೆ 9ರಿಂದ ಸಂಜೆ 5 ಗಂಟೆವರೆಗೆ ಮೊದಲ ಸುತ್ತಿನ ಧ್ವನಿ ಪರೀಕ್ಷೆ ನಡೆಯಲಿದೆ. ವಿದ್ಯಾನಗರ ಮುಖ್ಯರಸ್ತೆಯಲ್ಲಿರುವ ಕುವೆಂಪು ಕನ್ನಡಭವನದಲ್ಲಿ ಸೆ.11 ಹಾಗೂ ಸೆ.17ರಂದು ಬೆಳಗ್ಗೆ 9ರಿಂದ ಸಂಜೆ 5 ಗಂಟೆವರೆಗೆ ಕ್ರಮವಾಗಿ ಎರಡು ಹಾಗೂ ಮೂರನೇ ಸುತ್ತಿನ ಆಯ್ಕೆ ನಡೆಯಲಿದೆ. ಹರಿಹರದ ಗುರುಭವನದಲ್ಲಿ ಸೆ.18ರಂದು ಬೆಳಗ್ಗೆ 9ರಿಂದ 5ರವರೆಗೆ ನಾಲ್ಕನೇ ಸುತ್ತಿನ ಆಯ್ಕೆ ನಡೆಯಲಿದೆ. ನಗರದ ಹೈಸ್ಕೂಲ್ ಮೈದಾನದಲ್ಲಿ ಸೆ.22ರಂದು ಸಂಜೆ 4 ಗಂಟೆಯಿಂದ ಗ್ರಾಂಡ್ ಫಿನಾಲೆ ಕಾರ್ಯಕ್ರಮ ನಡೆಯಲಿದ್ದು, ನಟ ದರ್ಶನ್, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಭಾಗವಹಿಸುವರು ಎಂದರು.

2ರಿಂದ 8 ವರ್ಷ, 8ರಿಂದ 16 ಹಾಗೂ 16ರಿಂದ 25 ವರ್ಷದೊಳಗಿನ ಗಾಯಕರಿಗೆ ಸ್ಪರ್ಧೆ ನಡೆಯಲಿದ್ದು, ಆಸಕ್ತ ಗಾಯಕರು ಪಿಜೆ ಬಡಾವಣೆಯ ಹರಳೆಣ್ಣೆ ಕೊಟ್ಟೂರು ಬಸಪ್ಪ ವೃತ್ತದ (ರಾಮ್ ಆಂಡ್ ಕೊ) ಸಮೀಪ ಇರುವ ಸ್ವೆಟ್ ಪಾರ್ಕ್ ಫಿಟ್ನೆಸ್ ಅರೇನಾದಲ್ಲಿ ಪ್ರವೇಶಪತ್ರಗಳನ್ನು ಪಡೆದು, ಹೆಸರು ನೋಂದಣಿ ಮಾಡಿಸಬಹುದು. ಹೆಚ್ಚಿನ ಮಾಹಿತಿಗೆ ಸುರೇಶ್ ಬಾಬು ಮೊ: 94484 36388, 86601 43887 ಸಂಪರ್ಕಿಸಬಹುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಳಗದ ನಿರ್ದೇಶಕ, ಪಾಲಿಕೆ ಪ್ರತಿಪಕ್ಷ ನಾಯಕ ಜಿ.ಎಸ್. ಮಂಜುನಾಥ್ ಗಡಿಗುಡಾಳ್, ಕುಹೂ ಕುಹೂ ಕರೋಕೆ ಸಂಸ್ಥೆಯ ಸುರೇಶ್ ಬಾಬು ಇದ್ದರು.

admin

admin

Leave a Reply

Your email address will not be published. Required fields are marked *

error: Content is protected !!